ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಿಂದು ಹುಡುಗಿ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಸಾರ್ವಜನಿಕರು ಸೇರಿ ಬೇಕಾಬಿಟ್ಟಿ ಥಳಿಸಿದ (Moral policing) ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದು ಹುಡುಗಿ ಜತೆ ತಿರುಗಾಡುತ್ತಿರುವುದು ಕಂಡ ಸ್ಥಳೀಯರು ಗುಂಪುಗೂಡಿ ಆತನನ್ನು ಪ್ರಶ್ನಿಸಿದ್ದಾರೆ. ಆತ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಚೆನ್ನಾಗಿ ಥಳಿಸಿದ್ದಾರೆ. ಯುವಕ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆಗೈದವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವಕ ಮತ್ತು ಹುಡುಗಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್‌ನಲ್ಲಿ ಕುಳಿತು ತುಂಬಾ ಹೊತ್ತು ಮಾತನಾಡುತ್ತಿದ್ದುದನ್ನು ಕಂಡು ಜನರಿಗೆ ಸಂಶಯ ಬಂದಿದೆ. ಅಲ್ಲದೆ ಈ ಜೋಡಿ ಅತ್ತಿಂದಿತ್ತ ಓಡಾಡುತ್ತಿತ್ತು. ಬಳಿಕ ಈ ಜೋಡಿ ಕುಮಾರಧಾರಾ ನದಿ ಬಳಿ ಬಂದಾಗ ಬೆನ್ನಟ್ಟಿ ಬಂದ ಗುಂಪು ಯುವಕನಿಗೆ ಚೆನ್ನಾಗಿ ಥಳಿಸಿದೆ.
ಹಲ್ಲೆಗೊಳಗಾದ ಯುವಕ ಕಲ್ಲುಗುಂಡಿಯ ಅಫೀದ್ ಎಂದು ತಿಳಿದು ಬಂದಿದೆ. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದು ಹುಡುಗಿ ಅಪ್ರಾಪ್ತೆ
ಈ ನಡುವೆ ಅಫೀದ್‌ನ ಜತೆ ಬಂದಿರುವ ಹುಡುಗಿ ಅಪ್ರಾಪ್ತ ವಯಸ್ಸಿನವಳೆಂದು ತಿಳಿದುಬಂದಿದೆ. ಅಫೀದ್ ಬಾಲಕಿಯನ್ನು ಪುಸಲಾಯಿಸಿ ಹೀಗೆ ಕರೆದುಕೊಂಡು ಬಂದಿದ್ದಾನೆ ಎಂದು ಆಕೆ ತಂದೆಯೂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಯುವಕನ ವಿರುದ್ದ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿರುವ ಸುಬ್ರಹ್ಮಣ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Moral policing | ಬಸ್‌ನಲ್ಲಿ ಹೋಗುತ್ತಿದ್ದ ಹಿಂದು-ಮುಸ್ಲಿಂ ವಕೀಲ ಜೋಡಿಗೆ ತಡೆ: ಕಾರ್ಯಕರ್ತರ ಬೆವರಿಳಿಸಿದ ಯುವತಿ