ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಕೂಲಿ ಕಾರ್ಮಿಕನ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಕುರಿತು ಹಲ್ಲೆಗೊಳಗಾದ ವ್ಯಕ್ತಿ ಮಾಡಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಸ್ಸಿನಲ್ಲಿ ಮಹಿಳೆಯರಿಗೆ ಮೈ ಕೈ ತಾಗಿದೆ ಎಂಬ ಕಾರಣಕ್ಕೆ ಹುಟ್ಟಿಕೊಂಡ ತಗಾದೆಯಲ್ಲಿ ಮುಸ್ಲಿಂ ಕಾರ್ಮಿಕನಿಗೆ ಹಲ್ಲೆ (Moral policing) ನಡೆಸಲಾಗಿದೆ ಎನ್ನಲಾಗಿದೆ. ವಿಡಿಯೊ ಸತ್ಯಾಸತ್ಯತೆ ತನಿಖೆಗೆ ಬಂಟ್ವಾಳ ಪೊಲೀಸರು ಮುಂದಾಗಿದ್ದಾರೆ.
ವಿಡಿಯೊ ಪ್ರಕಾರ ಆಗಿದ್ದೇನು?
ಬಿ.ಸಿ.ರೋಡ್ ನಿಂದ ಮೂಡಬಿದರೆಗೆ ಹೋಗುವ ಬಸ್‌ನಲ್ಲಿ ತೆರಳುತ್ತಿದ್ದ ಬಂಟ್ವಾಳದ ಮೂಲರಪಟ್ನ ನಿವಾಸಿಯಾಗಿರುವ ಮುಸ್ಲಿಂ ಕೂಲಿ ಕಾರ್ಮಿಕನ ಮೇಲೆ ಈ ಹಲ್ಲೆ ನಡೆದಿದೆ. ಮಹಿಳೆಯರಿಗೆ ಮೈ ಕೈ ತಾಗಿದ ವಿಚಾರದಲ್ಲಿ ತಗಾದೆ ತೆಗೆದು ಹಲ್ಲೆ ನಡೆಲಾಗಿದೆ.
ಮೈ ತಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಬಸ್ಸಿನಲ್ಲೇ ಜಗಳವಾಗಿತ್ತು. ಇದು ಜೋರಾಗಿ ಬಸ್ ರಾಯಿ ಬಳಿ ಬರುತ್ತಿದ್ದಂತೆಯೇ ಬಸ್ಸಿನ ನಿರ್ವಾಹಕ ಈ ವ್ಯಕ್ತಿಯನ್ನು ಬಸ್ಸಿನಿಂದ ಇಳಿಸಿದ್ದ. ಈ ವೇಳೆ ಕಂಡಕ್ಟರ್ ಮತ್ತು ಕಾರ್ಮಿಕನ ಜತೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಹಿಂದೂ ಕಾರ್ಯಕರ್ತರು ಮುಸ್ಲಿಂ ಕಾರ್ಮಿಕನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬೆನ್ನು ಮತ್ತು ಇಡೀ ಮೈಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿರುವ ಆರೋಪವಿದೆ. ಬಾಸುಂಡೆ ವಿಡಿಯೋ ಸಹಿತ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ವೈರಲ್ ಆಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರುಪ್ರಕರಣದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ | Moral policing | ತಡರಾತ್ರಿ ಸುತ್ತಾಡುತ್ತಿದ್ದ ಹಿಂದು-ಮುಸ್ಲಿಂ ಜೋಡಿಗಳಿಗೆ ಬಜರಂಗ ದಳ ಕಾರ್ಯಕರ್ತರಿಂದ ಹಲ್ಲೆ