ಬಳ್ಳಾರಿ: ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಅನೇಕರು ಮೃತಪಟ್ಟ ಘಟನೆ ಬೆನ್ನಿಗೇ, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬಾಲಕಿಯೊಬ್ಬಳು ಸೋಮವಾರ (ಜು.25) ಬೆಳಗ್ಗೆ ಮೃತ ಪಟ್ಟಿದ್ದಾಳೆ. 20ಕ್ಕೂ ಹೆಚ್ಚು ಮಂದಿ ಭಾನುವಾರ (24) ಸಂಜೆಯಿಂದ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ.
ಮೃತ ಬಾಲಕಿ ಗೋನಾಳ್ ಗ್ರಾಮದ ಸುಕನ್ಯ(11) ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿರುವಾಗಲೇ ಮೃತಪಟ್ಟಿದ್ದಾಳೆ.
ಕಲುಷಿತ ನೀರು ಸೇವನೆಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಕಲುಷಿತ ನೀರು ಸೇವನೆಯ ಪರಿಣಾಮ ಗ್ರಾಮದ ಜನರಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿದೆ. ಶ್ರೀರಾಮರಂಗಾಪುರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಗೋನಾಳ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವಾಂತಿ ಭೇದಿ ಕಾಣಿಸಿಕೊಂಡ ಜನರಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿ ಆರೋಗ್ಯ ಅಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ | ಕಲುಷಿತ ಆಹಾರ ಸೇವನೆ, ಹಾಸನದಲ್ಲಿ 25 ವಿದ್ಯಾರ್ಥಿಗಳು ಅಸ್ವಸ್ಥ
ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಾರಿಹಳ್ಳದಲ್ಲಿ ಹರಿಯುವ ಕಲುಷಿತ ನೀರು, ಗ್ರಾಮ ಪಂಚಾಯಿತಿಯಿಂದ ನೀರು ಸರಬರಾಜು ಮಾಡುವ ನಲ್ಲಿಗಳಲ್ಲಿ ಸೇರಿರುವ ಕಾರಣ ಜನರು ವಾಂತಿ ಭೇದಿಗೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಇದಕ್ಕೆ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ | ರಾಯಚೂರು ಜಿಲ್ಲೆಯಲ್ಲಿ ಮುಂದುವರಿದ ಕಲುಷಿತ ನೀರಿನ ಸಮಸ್ಯೆ: ಅಲರ್ಜಿಗೆ ಗ್ರಾಮಸ್ಥರು ಹೈರಾಣ