ಕಾರವಾರ: ಟ್ರಕ್‌ನಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ 22ಕ್ಕೂ ಹೆಚ್ಚು ಹೋರಿಗಳನ್ನು (Cattle Smuggling) ಪೊಲೀಸರು ರಕ್ಷಣೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಬಳಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಇಸ್ಮಾಯಿಲ್ ಖಾದರ್ ಸಾಬ್, ಮಹಾರಾಷ್ಟ್ರದ ಭೂಷಣನಗರ ನಿವಾಸಿ ಸಂಕೇತ ಬಲಿದ್ ಬಂಧಿತ ಆರೋಪಿಗಳು. ಯಾವುದೇ ಅನುಮತಿ ಪತ್ರವಿಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದರಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹೋರಿಗಳ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ | Road Accident: ಬೈಕ್‌ಗೆ ಲಾರಿ ಡಿಕ್ಕಿಯಾಗಿ ಶಾಲಾ ಬಾಲಕಿ ಸ್ಥಳದಲ್ಲೇ ಸಾವು
ಗೇರುಸೊಪ್ಪ ಮಾರ್ಗವಾಗಿ ಭಟ್ಕಳಕ್ಕೆ ಟ್ರಕ್‌ನಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಸಮಯದಲ್ಲಿ ಹೊನ್ನಾವರದ ಕವಲಕ್ಕಿ ಬಳಿ ಪೊಲೀಸರು ಟ್ರಕ್ ತಡೆದು ಹೋರಿಗಳನ್ನು ರಕ್ಷಿಸಿದ್ದಾರೆ. ಹಾವೇರಿಯಿಂದ ಭಟ್ಕಳಕ್ಕೆ ಜಾನುವಾರು ಸಾಗಾಟ ಮಾಡಲಾಗುತ್ತಿತ್ತು. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಕ್ರೀದ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಗಾಟ ಹೆಚ್ಚಾಗಿದೆ. ಹೀಗಾಗಿ ಗಡಿಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದೆ.
ಅಂತಾರಾಜ್ಯ ಗಾಂಜಾ ಸಾಗಾಟ ಗ್ಯಾಂಗ್ ಅರೆಸ್ಟ್, 118 ಕೆ.ಜಿ ಗಾಂಜಾ ವಶಕ್ಕೆ
ಬೀದರ್: ಹುಮ್ನಾಬಾದ್ ಪಟ್ಟಣದ ರಾಮನ್ ರಾಜ್ ಕಾಲೇಜು ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಗಾಂಜಾ ಸಾಗಾಟ ಗ್ಯಾಂಗ್ ಅನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ, 1.18 ಕೋಟಿ ರೂಪಾಯಿ ಮೌಲ್ಯದ 118 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.