Site icon Vistara News

Urus Celebration : ಉರುಸ್ ವೇಳೆ ವಿತರಿಸಿದ ಪ್ರಸಾದ ತಿಂದು 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Ramanagara urus and admitted to the hospital

ರಾಮನಗರ: ರಾಮನಗರದ ಯಾರಬ್ ನಗರದ ಎಂ.ಜಿ.ರಸ್ತೆಯಲ್ಲಿರುವ ದರ್ಗಾದಲ್ಲಿ ಉರುಸ್ ಹಬ್ಬದ (Urus Celebration) ಪ್ರಯುಕ್ತ ವಿತರಿಸಲಾಗಿದ್ದ ಸಿಹಿ ಪ್ರಸಾದ ಸ್ವೀಕರಿಸಿ 60ಕ್ಕೂ ಹೆಚ್ಚು ಮಂದಿ ವಾಂತಿ (Vomiting) ಮಾಡಿಕೊಂಡಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಇವರಲ್ಲಿ 30ಕ್ಕೂ ಹೆಚ್ಚು ಮಂದಿ ರಾಮಗನರ ಜಿಲ್ಲಾಸ್ಪತ್ರೆಗೆ ದಾಖಲಾದರೆ, ಉಳಿದ 30ಕ್ಕೂ ಹೆಚ್ಚು ಮಂದಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಉರುಸ್ ಹಬ್ಬದ ಪ್ರಯುಕ್ತ ಸಹಿ ವಿತರಣೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಂಡ್ಯದಿಂದಲೂ ಸಂಬಂಧಿಕರು ಬಂದಿದ್ದರು. ಎಲ್ಲರಿಗೂ ಸಿಹಿ ವಿತರಿಸಲಾಗಿತ್ತು. ಎಲ್ಲರೂ ಸಿಹಿಯನ್ನು ಸ್ವೀಕರಿಸಿದ ಬಳಿಕ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಕೂಡಲೇ ಸ್ಥಳೀಯ ಅಸ್ವಸ್ಥರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಷ್ಟರಲ್ಲಿ ಮಂಡ್ಯಕ್ಕೆ ಹೋಗಿದ್ದ ಉಳಿದವರಿಗೆ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಅವರೆಲ್ಲರೂ ಮಂಡ್ಯದಲ್ಲಿ ದಾಖಲಾಗಿದ್ದಾರೆ.

ಜಿಲ್ಲಾಸ್ಪತ್ರೆಗೆ ರಾಮನಗರ ಟೌನ್ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ರಾಮನಗರ ಜಿಲ್ಲಾಸ್ಪತ್ರೆಗೆ ಶಾಸಕ ಇಕ್ಬಾಲ್ ಹುಸೇನ್ ಭೇಟಿ ನೀಡಿ, ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಡಿವೈಎಸ್ಪಿ ದಿನಕರ್ ಶೆಟ್ಟಿಯಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಸದ್ಯ ಅಸ್ವಸ್ಥರ ಆರೋಗ್ಯ ಸ್ಥಿರವಾಗಿದೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

Assault Case: ಪೊಲೀಸ್ ಪೇದೆ ಮೇಲೆ ಹಲ್ಲೆ; 16 ಮಂದಿ ವಿರುದ್ಧ ಎಫ್ಐಆರ್

ಮೈಸೂರು: ಪೊಲೀಸ್ ಪೇದೆ ಮೇಲೆ ಹಲ್ಲೆ ಪ್ರಕರಣ (Assault Case) ಸಂಬಂಧ 16 ಮಂದಿ ವಿರುದ್ಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹುಲ್ಲಹಳ್ಳಿಯಲ್ಲಿ ಪ್ರತಿಭಟನೆ ಶಾಂತಿಯುತವಾಗಿ ಮಾಡಿ ಎಂದ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಲಾಗಿತ್ತು.

ನ.17 ರಂದು ಜೆ.ಪಿ.ಹುಂಡಿ ಗ್ರಾಮದ ಬಳಿ ಕಾರು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದ ಘಟನೆ ನಡೆದಿತ್ತು. ಘಟನೆ ಖಂಡಿಸಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಮುಂದೆ‌ ಶವ ಇಟ್ಟು ಕಾರಿನ ಚಾಲಕನನ್ನು ಬಂಧಿಸಿ ಪರಿಹಾರ ನೀಡುವಂತೆ ಕುಟುಂಬಸ್ಥರು, ನಂಜನಗೂಡು ಮತ್ತು ಹುಲ್ಲಹಳ್ಳಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದಿದ್ದ ಪೊಲೀಸ್ ಠಾಣೆ ಪೇದೆ ಕಿರಣ್ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಪೇದೆ ಕಿರಣ್ ದೂರು ನೀಡಿದ್ದರು. ದೂರಿನನ್ವಯ 16 ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ.

ಕೊಡಗಿನಲ್ಲಿಯೂ ಪೋಲೀಸ್ ಪೇದೆಯ ಮೇಲೆ ಹಲ್ಲೆ

ಕೊಡಗು: ಸಾರ್ವಜನಿಕ ಸ್ಥಳದಲ್ಲಿ ಪೋಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ. ಬೈಕ್ ಪಾರ್ಕಿಂಗ್ ವಿಚಾರವಾಗಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಲಾಗಿದೆ. ಸಿದ್ದಾಪುರ ಠಾಣೆ ಪೇದೆ ಸಂತೋಷ್ ಚೌಹಾಣ್ ಹಲ್ಲೆಗೊಳಗಾದವರು, ಗಣಪತಿ‌ ಹಲ್ಲೆ ಮಾಡಿದ ಆರೋಪಿ.

ಆರೋಪಿ ಕುಡಿದ ಮತ್ತಿನಲ್ಲಿ ಬೈಕ್ ಹೆಲ್ಮೆಟ್‌ನಲ್ಲೇ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸುವ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ‌ ಸೆರೆಯಾಗಿದೆ. ಗಣಪತಿ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್.ಡಿ. ಪಾಟೀಲ್‌ಗೆ ಸಲಾಂ ಹೊಡೆದ ಕಾನ್‌ಸ್ಟೇಬಲ್‌ ಅಮಾನತು

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ (Exam Scam) ಪ್ರಮುಖ ಆರೋಪಿ, ಕಿಂಗ್‌ಪಿನ್‌ ಆರ್.ಡಿ. ಪಾಟೀಲ್‌ಗೆ ಸಲಾಂ ಎಂದಿದ್ದ ಪೊಲೀಸ್ ಕಾನ್‌ಸ್ಟೇಬಲ್‌ ಅನ್ನು ಅಮಾನತು ಮಾಡಲಾಗಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನ‌ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ್ ಠಾಣೆ ಕಾನ್‌ಸ್ಟೇಬಲ್‌ ಎಂ.ಜಿ. ಭರಗಿ ಅಮಾನತುಗೊಂಡ ಪೇದೆ. ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಆರ್.ಡಿ. ಪಾಟೀಲ್‌ನ ಕರೆತಂದಾಗ ಆತನಿಗೆ ಕಾನ್‌ಸ್ಟೇಬಲ್ ನಮಸ್ಕಾರ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ತೆರಳಿದಾಗ ಆರೋಪಿಯನ್ನು ಬೇಗನೆ ಒಳಗೆ ಕರೆದುಕೊಂಡು ಹೋಗದೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಅವಕಾಶ ಮಾಡಿಕೊಟ್ಟು ಕರ್ತವ್ಯದಲ್ಲಿ ದುರ್ನಡತೆ, ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

Exit mobile version