| ವಿಶ್ವಕುಮಾರ್, ಯಾದಗಿರಿ
ಮಹಾರಾಷ್ಟ್ರ ರಾಜ್ಯದಲ್ಲಿ ವರುಣನ ರೌದ್ರ ನರ್ತನವಾದರೆ ಕಲ್ಯಾಣ ಕರ್ನಾಟಕದ ಅದೆಷ್ಟೋ ಭಾಗಗಳು ಮುಳುಗಡೆಯಾಗುತ್ತವೆ. ಕೃಷ್ಣೆಯ ಆರ್ಭಟಕ್ಕೆ ನದಿ ಪಾತ್ರದ ಗ್ರಾಮಸ್ಥರ ಸಂಕಷ್ಟ ಹೇಳತೀರದು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪ್ರವಾಹ (Rain News) ಬಂದಾಗ ನೆನಪಾಗುವ ಯಾದಗಿರಿ ಜಿಲ್ಲೆಯ ಈ ಗ್ರಾಮಗಳು, ಮತ್ತೆ ಅವರಿಗೆ ನೆನಪಾಗುವುದು ಚುನಾವಣೆ ಬಂದಾಗ ಮಾತ್ರ.
ಹೌದು, ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ವಡಗೇರಾ ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಕೃಷ್ಣೆ ಭೋರ್ಗರೆಯುತ್ತದೆ. ಹೀಗಾಗಿ ಕೃಷ್ಣಾ ಹಿನ್ನೀರಿಗೆ ವಡಗೆರ ತಾಲೂಕಿನ ಯಕ್ಷಿಂತಿ, ಗೌಡೂರು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗುತ್ತವೆ. ಅಷ್ಟೇ ಅಲ್ಲ ಕೃಷ್ಣ ನದಿ ಪಾತ್ರದ ಸರಿ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಳ್ಳುತ್ತವೆ.
ಇದು ಪ್ರತಿವರ್ಷದ ಸಮಸ್ಯೆಯಾಗಿದ್ದು, 2019ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ನದಿ ನೀರು ನುಗ್ಗಿ ಈ ಗ್ರಾಮಗಳು ಜಲಾವೃತವಾಗಿದ್ದವು. ಖುದ್ದು ಬಿ.ಎಸ್.ಯಡಿಯೂರಪ್ಪ ಅವರೇ ಯಕ್ಷಿಂತಿ, ಗೌಡೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸ್ಥಳಾಂತರ ಮಾಡುವ ಭರವಸೆ ನೀಡಿದ್ದರು. 13 ಗ್ರಾಮಗಳಲ್ಲಿ ಜಾತಿವಾರು ಜನಸಂಖ್ಯೆ ಸಮೀಕ್ಷೆ ಮಾಡಿ ಅಂದಿನ ಜಿಲ್ಲಾಧಿಕಾರಿ ಕುರುಮಾರಾವ್ ಅವರಿಗೆ ಸೂಚನೆ ನೀಡಿದ್ದರು. ಆದರೆ, ಇಂದಿಗೂ ಯಾವುದೇ ಸಮೀಕ್ಷೆ ನಡೆಸಲಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ | Rain Effect | ನಿತ್ಯ ಪ್ಯಾಂಟ್ ಕಳಚಿ ಹಳ್ಳ ದಾಟುವ ಮಕ್ಕಳು; ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಪರದಾಟ
ಇತ್ತ ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸಹ ಖುದ್ದಾಗಿ ಭೇಟಿ ನೀಡಿ ಗ್ರಾಮಗಳ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಮತ್ತೆ ಕೃಷ್ಣಾ ನದಿ ನೀರು ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿವೆ. ಇದೇ ರೀತಿ ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದರೆ ಗ್ರಾಮಗಳು ಜಲಾವೃತಗೊಳ್ಳುವುದು ನಿರಂತರವಾಗಿದೆ. ಇದರಿಂದಾಗಿ ಗ್ರಾಮಸ್ಥರು ಪ್ರತಿ ನಿತ್ಯ ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುವಂತಾಗಿದೆ. ಸದ್ಯ ವರುಣ ಕೊಂಚ ಬಿಡುವು ನೀಡಿದ್ದು, ಸರ್ಕಾರ ಈಗಲಾದರೂ ಇತ್ತ ಗಮನ ಹರಿಸಿ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರವಾಹ ಬಂದಾಗ ಮಾತ್ರ ಗ್ರಾಮಗಳತ್ತ ಸುಳಿದು ಕಣ್ಣೀರು ಒರೆಸುವ ನಾಟಕವಾಡುವ ಜನಪ್ರತಿನಿಧಿಗಳು ಆನಂತರ ಇತ್ತ ಬರುವುದೇ ಇಲ್ಲ. ಮತ್ತೆ ಪ್ರವಾಹ ಬಂದರೆ ಭರವಸೆ ನೀಡಿ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಇನ್ನು ಚುನಾವಣೆ ಬಂದರೆ ಮಾತ್ರ ಮತ್ತೆ ನೆನಪಾಗಿ ಮತ ಭಿಕ್ಷೆ ಕೇಳಲು ಮನೆ ಮನೆ ಬಾಗಿಲಿಗೆ ಬಂದು ಮತ ಹಾಕಿ ಗೆಲ್ಲಿಸಿ ಎಂದು ಕೇಳಲು ಬರುತ್ತಾರೆ. ನಿಜವಾಗಿಯೂ ಈ ಭಾಗದ ಜನಪ್ರತಿನಿಧಿಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸಿದ್ದರೆ ಇನ್ನಾದರೂ ಗಮನಹರಿಸಿ ಈ ಗ್ರಾಮಗಳನ್ನು ಸ್ಥಳಾಂತರ ಮಾಡಿ ಒಳ್ಳೆಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Rain News | ಶಿವಮೊಗ್ಗದ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತ; ಜೀವ ಪಣಕ್ಕಿಟ್ಟು ದೋಣಿಯಲ್ಲಿ ಸಂಚಾರ