Site icon Vistara News

Rajouri Encounter : ಹುತಾತ್ಮ ಕ್ಯಾಪ್ಟನ್​ ಪ್ರಾಂಜಲ್​ ಪಾರ್ಥಿವ ಶರೀರ ಸ್ವಗೃಹಕ್ಕೆ ಆಗಮನ

Pranjal

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ‌ (Rajouri Encounter) ಹುತಾತ್ಮರಾದ ಮಂಗಳೂರು ಮೂಲದ ಕ್ಯಾಪ್ಟನ್‌ ಎಂ.ವಿ ಪ್ರಾಂಜಲ್‌ (Captain MV Pranjal) ಅವರ ಪಾರ್ಥಿವ ಶರೀರ ಜಿಗಣಿ ಸಮೀಪದ ಅವರ ಸ್ವಗೃಹಕ್ಕೆ ಶುಕ್ರವಾರ ರಾತ್ರಿ ತಲುಪಿತು. ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರ ಶರೀರವನ್ನು ಜಿರೊ ಟ್ರಾಫಿಕ್​ ವ್ಯವಸ್ಥೆ ಮೂಲಕ ಅವರ ಪೋಷಕರು ವಾಸ ಇರುವ ಮನೆಗೆ ಸಕಲ ಗೌರವಗಳಿಂದ ಕೊಂಡೊಯ್ಯಲಾಯಿತು.

ಪಾರ್ಥಿವ ಶರೀರವನ್ನು ಅವರ ಮನೆಗೆ ಕೊಂಡೊಯ್ಯುವ ಮೊದಲು ವಿಮಾನ ನಿಲ್ದಾಣದಲ್ಲಿ ಗೌರ ಸಲ್ಲಿಸಲಾಯಿತು. ತಂದೆ-ತಾಯಿ ಮೊದಲಿಗೆ ಪುಷ್ಪಗುಚ್ಛ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​, ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ ಜಾರ್ಜ್​, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅಂತಿಮ ನಮನ ಸಲ್ಲಿಸಿದರು. ಬಳಿಕ ಅಲ್ಲಿಂದ ಸ್ವಗೃಹಕ್ಕೆ ರವಾನಿಸಲಾಯಿತು. ನವೆಂಬರ್​ 25ರಂದು ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಬಡಾವಣೆ ನಿವಾಸಿಗಳಿಂದ ಮೊಂಬತ್ತಿ ಶ್ರದ್ಧಾಂಜಲಿ

ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಅವರ ತಂದೆ, ತಾಯಿ ವಾಸವಿರುವ ನಿಸರ್ಗ ಬಡಾವಣೆ ನಿವಾಸಿಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪವಿದೆ ಈ ನಿಸರ್ಗ ಬಡಾವಣೆ. ಕ್ಯಾಂಡಲ್ ಬೆಳಗುವ ಮೂಲಕ ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿ ಐನೂರಕ್ಕೂ ಅಧಿಕ ಮಂದಿ, ಅಮರ್ ರಹೇ ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್ ಎಂದು ಕೊಂಡಾಡಿದರು. ದೇಶಭಕ್ತಿ ಹಾಡುಗಳನ್ನು ಹಾಡುವ ಮೂಲಕ ವೀರ ಯೋಧನಿಗೆ ನಮನ ಸಲ್ಲಿಸಿದ ಜನರು.

ಉಗ್ರರ ವಿರುದ್ಧ ಕಾದಾಡಿದ್ದ ಪ್ರಾಂಜಲ್​

ಜಮ್ಮ ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕಾಲಕೋಟೆ ಪ್ರದೇಶದ ಗುಲಾಬ್‌ಗಢ್‌ ಅರಣ್ಯ ಪ್ರದೇಶದಲ್ಲಿ ಅಡಗಿ, ದೊಡ್ಡ ದಾಳಿಗೆ ಸಂಚು ನಡೆಸುತ್ತಿದ್ದ ಉಗ್ರರನ್ನು ಸದೆಬಡಿಯಲು ನವೆಂಬರ್‌ 19ರಿಂದ ನಡೆಯುತ್ತಿರುವ ದಾಳಿಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಮತ್ತು ಇಬ್ಬರು ಸೈನಿಕರು ಬುಧವಾರ ಹುತಾತ್ಮರಾಗಿದ್ದರು. ಅವರಲ್ಲಿ 63ನೇ ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಮತ್ತು 9ನೇ ಪ್ಯಾರಾ ವಿಶೇಷ ಪಡೆಗೆ ಸೇರಿದ ಕ್ಯಾಪ್ಟನ್‌ ಶುಭಂ ಸೇರಿದ್ದಾರೆ.

ಬಾಲ್ಯದಿಂದಲೇ ಯೋಧನ ಕನಸು ಹೊತ್ತಿದ್ದ ಪ್ರಾಂಜಲ್‌

ಕ್ಯಾಪ್ಟನ್‌ ಪ್ರಾಂಜಲ್‌ ಅವರ ಹುಟ್ಟೂರು ಮೈಸೂರು. ತಂದೆ ವೆಂಕಟೇಶ್‌ ಅವರಿಗೆ ಎಂಆರ್‌ಪಿಎಲ್‌ನಲ್ಲಿ ದೊಡ್ಡ ಹುದ್ದೆ ಸಿಕ್ಕಿದ್ದರಿಂದ ಕುಟುಂಬ ಮಂಗಳೂರಿಗೆ ಶಿಫ್ಟ್‌ ಆಗಿತ್ತು. ಎಂಆರ್‌ಪಿಎಲ್‌ನ ಹೊರಾವರಣದಲ್ಲಿರುವ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಪ್ರಾಂಜಲ್‌ ಬಾಲ್ಯದಲ್ಲೇ ಯೋಧನಾಗುವ ಕನಸು ಹೊತ್ತಿದ್ದರು ಎನ್ನಲಾಗಿದೆ.

ಮಂಗಳೂರಿನ ಮಹೇಶ್‌ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸವನ್ನು ನಡೆಸಿದ ಪ್ರಾಂಜಲ್‌ ಬಳಿಕ ಮಧ್ಯಪ್ರದೇಶದ ಮಹೌನಲ್ಲಿ ಇರುವ ಆರ್ಮಿ‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಎರಡು ವರ್ಷದ ಹಿಂದಷ್ಟೇ ಮದುವೆ, ಚೆನ್ನೈನಲ್ಲಿರುವ ಮಡದಿ

ದೇಶದ ಹಲವು ಕಡೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್‌ ಪ್ರಾಂಜಲ್‌ ಎರಡು ವರ್ಷದ ಹಿಂದೆ ಕಾಶ್ಮೀರಕ್ಕೆ ನಿಯೋಜಿಸಲ್ಪಟ್ಟರು. ಕಾಶ್ಮೀರಕ್ಕೆ ಹೋಗುವ ಮುನ್ನ ಅವರ ಮದುವೆ ನಡೆದಿತ್ತು. ಬೆಂಗಳೂರಿನ ಅದಿತಿ ಎಂಬವರ ಕೈ ಹಿಡಿದ ಅವರು ಬಳಿ ಕಾಶ್ಮೀರಕ್ಕೆ ಹೋಗಿದ್ದರು. ಈ ನಡುವೆ, ಅದಿತಿ ಅವರು ಚೆನ್ನೈಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಪತಿಯ ಮರಣದ ಸುದ್ದಿ ತಿಳಿದು ಜಿಗಣಿಯ ತಮ್ಮ ಮನೆಗೆ ಧಾವಿಸಿದ್ದಾರೆ.

ಜಿಗಣಿಯ ನಂದನವನದಲ್ಲಿ ಕ್ಯಾಪ್ಟನ್‌ ಕುಟುಂಬ

ಎಂ ವೆಂಕಟೇಶ್‌ ಅವರು ಎಂಆರ್‌ಪಿಎಲ್‌ನಿಂದ ನಿವೃತ್ತರಾಗಿ ಮೈಸೂರಿನ ತಮ್ಮ ಮೂಲ ಮನೆಗೆ ಬಂದಿದ್ದರು. ಅಲ್ಲಿ ಕೆಲವು ಕಾಲ ವಾಸವಾಗಿದ್ದ ಅವರು ಮುಂದೆ ಜಿಗಣಿಯ ಬುಕ್ಕಸಾಗರದ ನಂದನವನ ಬಡಾವಣೆಯಲ್ಲಿ ಒಂದು ಸೈಟ್‌ ಖರೀದಿಸಿ ಮನೆ ಮಾಡಿಕೊಂಡಿದ್ದರು. ಈಗಲೂ ಅವರು ಅಲ್ಲೇ ವಾಸವಾಗಿದ್ದಾರೆ.

ಪ್ರಾಂಜಲ್‌ ಕಳೆದ ದಸರಾ ಸಂದರ್ಭದಲ್ಲಿ ಮನೆಗೆ ಬಂದಿದ್ದರು. ಮನೆಯಲ್ಲಿ ನಡೆದ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದ ಅವರು ಕಾಶ್ಮೀರದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಆದರೆ, ಇದೀಗ ಮಗ ಹುತಾತ್ಮನಾಗಿ ರಾಷ್ಟ್ರ ಧ್ವಜ ಹೊತ್ತು ಮರಳಿ ಬರುತ್ತಿರುವುದು ಹೆತ್ತವರಿಗೆ ಸಂಕಟ ತಂದಿದೆ.

ಇದೀಗ ವೆಂಕಟೇಶ್‌ ಅವರ ಮನೆಗೆ ಆಪ್ತರು ಹಾಗೂ ಕುಟುಂಬಸ್ಥರು ಆಗಮಿಸಿದ್ದು, ಹುತಾತ್ಮ ಯೋಧನ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮಗನನ್ನು ಕಳೆದುಕೊಂಡು ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಅವರನ್ನು ಸಮಾಧಾನ ಮಾಡುತ್ತಿದ್ದಾರೆ.

Exit mobile version