Site icon Vistara News

Moscow Attack: ʼಮಾಸ್ಕೋದಂತೆ ಭಾರತದಲ್ಲೂ ಉಗ್ರ ದಾಳಿʼ ಪೋಸ್ಟ್‌; ಇಂಡಿಯಾ ಟುಡೆ ಎಡಿಟರ್ ವಿರುದ್ಧ ಕಾಂಗ್ರೆಸ್‌ ದೂರು

Congress files complaint against India Today editor

ಬೆಂಗಳೂರು: ಮಾಸ್ಕೋದಲ್ಲಿ ನಡೆದ ದಾಳಿಯಂತೆ ಭಾರತದಲ್ಲಿಯೂ ಉಗ್ರರ ದಾಳಿ (Moscow Attack) ನಡೆಯುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ, ಜನರಲ್ಲಿ ಭಯ ಹುಟ್ಟಿಸಿರುವ ಇಂಡಿಯಾ ಟುಡೆ ಚಾನೆಲ್‌ ಎಡಿಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕದಿಂದ ನಗರದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಇಂಡಿಯಾ ಟುಡೆ ಎಡಿಟರ್ ಶಿವ ಆರೂರ್ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ರವೀಂದ್ರ ದೂರು ನೀಡಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟದ ನಂತರ ಮಾಸ್ಕೋ ಉಗ್ರರ ದಾಳಿ‌ ರೀತಿಯಲ್ಲಿ ಭಾರತದಲ್ಲೂ ದಾಳಿ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಪ್ರಯತ್ನಗಳು ನಡೆಯುತ್ತಿರಬಹುದು ಎಂದು ಶಿವ ಆರೂರ್ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ಕಾನೂನು ಘಟಕ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವಂತಹ ಪೊಸ್ಟ್ ಮಾಡಿರುವ ಜತೆಗೆ, ಭಾರತದ ಭದ್ರತೆ ಬಗ್ಗೆ ಅವಹೇಳನಕಾರಿ ಸಂದೇಶ ಪ್ರಚಾರ ಮಾಡಿದ್ದಾರೆ ಎಂದು ಶಿವ ಆರೂರ್ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ.

ಕಾಂಗ್ರೆಸ್ ಚಿಹ್ನೆ ಬಗ್ಗೆ ಅವಹೇಳನಕಾರಿ ಪೋಸ್ಟ್; ಕ್ರಮಕ್ಕೆ ಆಗ್ರಹ

ಸಂಸದ ತೇಜಸ್ವಿ ಸೂರ್ಯ, ಇಂಡಿಯಾ ಟುಡೆ ಎಡಿಟರ್ ವಿರುದ್ಧ ದೂರು ಸಲ್ಲಿಸಿದ ಬೆನ್ನಲ್ಲೇ ಪೋಲಿಸ್ ಆಯುಕ್ತರಿಗೆ ಕಾಂಗ್ರೆಸ್‌ನಿಂದ ಮತ್ತೊಂದು ದೂರು ಸಲ್ಲಿಸಲಾಗಿದೆ. ಕಾಂಗ್ರೆಸ್ ಚಿಹ್ನೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಇನ್ಸ್ಟಾಗ್ರಾಮ್ ಪೇಜ್‌ ವಿರುದ್ಧ ದೂರು ನೀಡಲಾಗಿದೆ.

ಇದನ್ನೂ ಓದಿ | Lok Sabha Election 2024 : ಕೆ.ಸಿ. ನಾರಾಯಣ ಗೌಡ ಕಾಂಗ್ರೆಸ್‌ ಸೇರ್ಪಡೆ ಖಚಿತ?

ಕಾಂಗ್ರೆಸ್ ಚಿಹ್ನೆಯನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ‌ ವೈರಲ್‌ ಹಿನ್ನೆಲೆ ದೂರು ನೀಡಲಾಗಿದೆ. ತ್ರಿವರ್ಣದ ಮೇಲಿರೋ ಹಸ್ತದ ಚಿಹ್ನೆಯನ್ನು ಹಸಿರು ಬಣ್ಣದ ಮೇಲೆ ಎಡಿಟ್ ಮಾಡಿ, ರೀಲ್ ಲೈಫ್, ರಿಯಲ್ ಲೈಪ್ ಎಂದು ಕ್ಯಾಪ್ಷನ್ ನೀಡಿ, ಪ್ರೋ ಮ್ಯಾಕ್ಸ್ ಪಾಕಿಸ್ತಾನಿ ಕಾಂಗ್ರೆಸ್ ಎಂದು ಅಪಪ್ರಚಾರ ಮಾಡಲಾಗಿದೆ. ಅಪಪ್ರಚಾರದ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ Memesx. Press ಎಂಬ ಇನ್ಸ್ಟಾಗ್ರಾಂ ಪೇಜ್‌ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹಿಸಿದೆ.

ಶಿವರಾಜ್ ತಂಗಡಗಿ ವಿರುದ್ಧ ಚುನಾವಣಾ ಆಯೋಗಕ್ಕೆ‌ ಬಿಜೆಪಿ ದೂರು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

ಇವರಿಗೆ ಚುನಾವಣೆಯಲ್ಲಿ ಮತ ಕೇಳಲು ನಾಚಿಕೆಯಾಗಬೇಕು. “ಮೋದಿ ಎಂದರೆ, ವಿದ್ಯಾರ್ಥಿಗಳು, ಯುವಕರು ಕಪಾಳಕ್ಕೆ ಹೊಡೆಯಬೇಕು” ಎಂದು ನಮ್ಮ ಪಕ್ಷದ ಮತದಾರರ ವಿರುದ್ಧ ಪ್ರಚೋದನಾತ್ಮಕ ಮಾತುಗಳಿಂದ ಹಲ್ಲೆ ಮಾಡಲು ಪ್ರಚೋದಿಸಿದ್ದಾರೆ. ಪ್ರಧಾನಿಯನ್ನು ನಿಂದಿಸುವ ಮೂಲಕ ಸಚಿವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಎಂ.ಎಲ್.ಸಿ ಡಿ.ಎಸ್ ಅರುಣ್ ದೂರು ಸಲ್ಲಿಸಿದ್ದಾರೆ.

Exit mobile version