Site icon Vistara News

Drowned in Pond | ಹಳ್ಳ ದಾಟುವಾಗ ದುರಂತ: ನೀರಿನಲ್ಲಿ ಮುಳುಗಿ ತಾಯಿ, ಪುಟಾಣಿ ಮಗಳು ಸಾವು

Thayi magalu death

ಚಿಕ್ಕಮಗಳೂರು: ತಾಯಿ ಮತ್ತು ಪುಟಾಣಿ ಮಗಳು ದನ ಮೇಯಿಸಲೆಂದು ಕೆರೆಯ ಆಚೆ ದಡಕ್ಕೆ ಹೊರಟಿದ್ದರು. ಆಚೆ ಹೋಗಬೇಕು ಎಂದರೆ ಕೆರೆಯಂಚಿನ ಒಂದು ಹಳ್ಳವನ್ನು ದಾಟಿ ಹೋಗಬೇಕು. ಹಾಗೆ ಮಗಳು ಚಪ್ಪಲಿ ಕಳಚಿಟ್ಟು ನೀರನ್ನು ದಾಟುತ್ತಾ ಅಮ್ಮನ ಜತೆಗೆ ಸಾಗಿದ್ದಾಳೆ. ಆದರೆ, ಒಮ್ಮಿಂದೊಮ್ಮೆಯೇ ದಾಟಬೇಕಾದ ನೀರು ಕಡಿಮೆ ಇರುವ ದಾರಿ ತಪ್ಪಿ ಪಕ್ಕಕ್ಕೆ ಜರುಗಿದ್ದಾಳೆ. ಅಲ್ಲಿ ನೀರು ತುಂಬಾ ಇದ್ದು ಅಲ್ಲೇ ಮುಳುಗಿದ್ದಾಳೆ (Drowned in Pond). ಕೂಡಲೇ ತಾಯಿ ಆಕೆಯನ್ನು ರಕ್ಷಿಸಲೆಂದು ಆ ಭಾಗಕ್ಕೆ ಹಾರಿದ್ದಾಳೆ. ದುರ್ದೈವ… ಇಬ್ಬರೂ ಅಲ್ಲಿಂದಲೇ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿ ಕೆರೆಯಲ್ಲಿ ಈ ಘಟನೆ ನಡೆದಿದೆ. ಕೆರೆ ದಾಟುವಾಗ ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು, ಶೋಭ (40) ಮತ್ತು ವರ್ಷ(8). ಈ ನಡುವೆ, ಅವರ ಜತೆಯಲ್ಲಿ ಇದ್ದ ಶೋಭಾ ಅವರ ಮಗ ಚೇತನ್‌ ಅಪಾಯದಿಂದ ಪಾರಾಗಿದ್ದಾನೆ.

ನಿಜವೆಂದರೆ, ಇದು ಅಪಾಯದ ದಾರಿಯೂ ಅಲ್ಲ, ಅಪರೂಪದ ದಾರಿಯೂ ಅಲ್ಲ. ನಿತ್ಯವೂ ಸಾಗುವ ದಾರಿಯೇ ಇದು. ನೂರಾರು ಜನರು ಇದೇ ರೀತಿ ಹಳ್ಳವನ್ನು ದಾಟಿ ಹೋಗುತ್ತಾರೆ. ಆದರೆ, ಅವರ ಪಾಲಿಗೆ ಮಾತ್ರ ಅದು ಸಾವಿನ ದಾರಿಯಾಗಿತ್ತು. ಪುಟ್ಟ ಮಗಳು ನೀರಿನ ಪ್ರಮಾಣ ಹೆಚ್ಚಿರುವ ಕಡೆ ಹೋಗಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ತಾಯಿ ರಕ್ಷಣೆಗೆ ಹೋಗಬೇಕಾಯಿತು. ನೀರಿನ ಸೆಳೆತ, ಆಳ ಇಬ್ಬರನ್ನೂ ಬಲಿ ಪಡೆಯಿತು.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide Case | ಪರಸ್ತ್ರೀ ವ್ಯಾಮೋಹದಲ್ಲಿ ಹುಚ್ಚನಂತಾದ ವಿವಾಹಿತ ನೇಣಿಗೆ ಶರಣು

Exit mobile version