ಸೊರಬ: ಎದೆ ಹಾಲು ಕಡಿಮೆಯಾಗಿ ಮಗುವು ಸೊರಗುತ್ತಿದೆ ಎಂಬ ಕಾರಣಕ್ಕೆ ಮನನೊಂದ ತಾಯಿಯೊಬ್ಬರು ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮೃತರನ್ನು ಕುಪ್ಪಗಡ್ಡೆ ಗ್ರಾಮದ ಶಾಂತಾ (28) ಹಾಗೂ ಒಂದೂವರೆ ತಿಂಗಳ ಮಗು ಮಂಗಳಗೌರಿ ಎಂದು ಗುರುತಿಸಲಾಗಿದೆ. ಗ್ರಾಮದ ತುಂಬೆಹೊಂಡದಲ್ಲಿ ತಡರಾತ್ರಿ ಶಾಂತಾ ಮಗುವಿನೊಂದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಾಂತಳನ್ನು ಸಮೀಪದ ಜಡ್ಡೆಹಳ್ಳಿ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಹೆರಿಗೆಗೆ ಎಂದು ತವರು ಮನೆ ಕುಪ್ಪಗಡ್ಡೆಗೆ ಬಂದಿದ್ದು, ಎದೆ ಹಾಲು ಇಲ್ಲದೆ ಮಗು ಸೊರಗುತ್ತಿದೆ ಎಂದು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಮಗು ಸಮೇತ ತುಂಬೆ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Nandini vs Amul: ಅಮುಲ್ ಜತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ: ಸಚಿವ ಎಸ್.ಟಿ. ಸೋಮಶೇಖರ್
ಭಾನುವಾರ ಬೆಳಗ್ಗೆ ಮಗು ಹೊಂಡದಲ್ಲಿ ತೇಲುವುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಶೋಧ ಕಾರ್ಯ ನಡೆಸಿದಾಗ ವಿಷಯ ಗೊತ್ತಾಗಿದೆ. ಮಹಿಳೆ ಮತ್ತು ಮಗುವಿನ ಶವವನ್ನು ಕೆರೆಯಿಂದ ಮೇಲೆತ್ತಲಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರ ನದಿಯಲ್ಲಿ ಮುಳುಗಿ ತಂದೆ, ಮಗ ಸಾವು
ಚಿಕ್ಕಮಗಳೂರು: ಮಾಗುಂಡಿ ಸಮೀಪ ಭದ್ರ ನದಿಯಲ್ಲಿ ಮುಳುಗಿ ತಂದೆ, ಮಗ ಮೃತಪಟ್ಟಿದ್ದಾರೆ. ಮೃತರನ್ನು ಮೂಡಿಗೆರೆ ಸಮೀಪದ ಹಂಡುಗುಳಿ ಗ್ರಾಮದ ಲೋಕೇಶ್ (40) ಮತ್ತು ಅವರ ಮಗ ಸಾತ್ವಿಕ್ (13) ಎಂದು ಗುರುತಿಸಲಾಗಿದೆ. ಮಾಗುಂಡಿ ಸಮೀಪದ ಹುಯ್ಗೆರೆ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಸುಗ್ಗಿ ಹಬ್ಬಕ್ಕೆಂದು ಲೋಕೇಶ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತೆರಳಿದ್ದರು. ಅಲ್ಲಿ ಈ ಅವಘಡ ಸಂಭವಿಸಿದೆ.
ಮನೆಯ ಸಮೀಪದಲ್ಲೇ ಹರಿಯುತ್ತಿರುವ ಭದ್ರ ನದಿಯ ಬಳಿಗೆ ನಿನ್ನೆ ಸಂಜೆ ಸಂಬಂಧಿಕರು ತೆರಳಿದ್ದಾರೆ. ಸಂಜೆ ಸುಮಾರು 4ರ ಸಮಯದಲ್ಲಿ ಹೊಳೆಯಲ್ಲಿ ಬಂಡೆಯೊಂದರ ಮೇಲೆ ನಿಂತಿದ್ದ ಸಾತ್ವಿಕ್ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಮಗನನ್ನು ರಕ್ಷಿಸಲು ತಂದೆ ಲೋಕೇಶ್ ಸಹ ನದಿಗೆ ಹಾರಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Jaya Bachchan birth day: ಅಮ್ಮನ ಅಪ್ಪುಗೆಯ ವಿಶೇಷ ಫೋಟೊ ಹಂಚಿಕೊಂಡು ಶುಭ ಹಾರೈಸಿದ ಪುತ್ರ ಅಭಿಷೇಕ್ ಬಚ್ಚನ್
ಕುಟುಂಬದವರ ಕಣ್ಣೆದುರೇ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಸಂಬಂಧಿಕರು ನಡೆಸಿದ ಪ್ರಯತ್ನ ವಿಫಲವಾಗಿದೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ ಹಂಡುಗುಳಿ ಗ್ರಾಮಕ್ಕೆ ತರಲಾಗಿದೆ. ಮೃತರ ಕುಟುಂಬ, ಸಂಬಂಧಿಕರು ಮತ್ತು ಗ್ರಾಮಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.