ಬೆಳಗಾವಿ: ಅನೈತಿಕ ಸಂಬಂಧ ನೋಡಿದ ಮಗನನ್ನು ಬಾವಿಗೆ ತಳ್ಳಿ ಕೊಂದಿದ್ದ (Murder Case) ತಾಯಿಗೆ ಚಿಕ್ಕೋಡಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಸುಧಾ ಸುರೇಶ ಕರಿಗಾರ ಎಂಬುವವರಿಗೆ ಜೀವಾವಧಿ ಶಿಕ್ಷೆ ಹಾಗೂ 7000 ರೂ. ದಂಡ ವಿಧಿಸಿ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿ ಮಹಿಳೆ ವ್ಯಕ್ತಿಯೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. 2019ರ ಅಕ್ಟೋಬರ್ 22ರಂದು ಅವರಿಬ್ಬರೂ ಒಂದೆಡೆ ಇದ್ದದ್ದನ್ನು ಕಂಡಿದ್ದ ಮಹಿಳೆಯ ಮಗ ಪ್ರವೀಣ (10) ಆ ವಿಷಯವನ್ನು ತಂದೆಗೆ ಹೇಳುವುದಾಗಿ ಓಡಿ ಹೋಗುತ್ತಿದ್ದಾಗ ಅವನನ್ನು ಮಹಿಳೆ ತಡೆದಿದ್ದಾಳೆ. ತನ್ನ ಗಂಡನಿಗೆ ವಿಷಯ ತಿಳಿದರೆ ಜೀವನ ಹಾಳಾಗುತ್ತದೆ ಎಂದು ಮಗನಿಗೆ 50 ರೂ. ಕೊಟ್ಟು ಅಂಗಡಿಗೆ ಕಳುಹಿಸಿದ್ದಳು.
ನಂತರ ಆಕೆಯೂ ಮಗನ ಹಿಂದೆ ಹೋಗಿದ್ದಾಳೆ. ಬಾಗೇವಾಡಿ ಗ್ರಾಮದ ಜಮೀನಿನ ಬಳಿ ಮಗ ಪ್ರವೀಣ ಹೋಗುತ್ತಿದ್ದಂತೆ ಬಾವಿಗೆ ಮಗನನ್ನು ನೂಕಿ ಕೊಲೆ ಮಾಡಿದ್ದಾಳೆ. ಇದನ್ನು ನೋಡಿದ ಚಿಕ್ಕ ಮಗನಿಗೆ, ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲ್ಲುವೆ ಎಂದು ಜೀವ ಬೆದರಿಕೆ ಹಾಕಿದ್ದಳು.
ಇದನ್ನೂ ಓದಿ | Road Accident : ಪಲ್ಸರ್- ಥಾರ್ ಮುಖಾಮುಖಿ; ಊಟಕ್ಕೆ ಹೋಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳು ಮೃತ್ಯುವಶ
ಈ ಬಗ್ಗೆ 2019ರ ಡಿಸೆಂಬರ್ 12ರಂದು ಸುರೇಶ ಸಿದ್ಧಪ್ಪಾ ಕರಿಗಾರ ನೀಡಿದ ದೂರಿನ ಮೇರೆಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಬಾಲಕನನ್ನು ಕೊಂದಿದ್ದು ತಾಯಿಯೇ ಎಂಬುವುದು ತಿಳಿದುಬಂದಿದೆ. ಆರೋಪ ಸಾಬೀತಾಗಿದ್ದರಿಂದ ಬಾಲಕನನ್ನು ಕೊಂದ ತಾಯಿಗೆ ಜೀವಾವಧಿ ಶಿಕ್ಷೆಯಾಗಿದೆ.