Site icon Vistara News

Motivational story : ಮೂರು ಜನ ಶ್ರೀಮಂತರು ಮತ್ತು ಕಷ್ಟ ಕಾಲದಲ್ಲಿ ಸಹಾಯ ಮಾಡುವ ಮಾದರಿ

Rich people helping poor

#image_title

ಕೃಷ್ಣ ಭಟ್‌ ಅಳದಂಗಡಿ- Motivational story
ಇದು ಒಂದಾನೊಂದು ಕಾಲದ ಕಥೆ. ಆ ಒಂದು ಊರಿನಲ್ಲಿ ಜನರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದರು. ಬಡತನದಿಂದ ಹೊತ್ತಿಗೆ ಅನ್ನವಿಲ್ಲದೆ ಕಂಗಾಲಾಗಿದ್ದರು. ಮಾಡಲು ಕೆಲಸವಿಲ್ಲ, ಕೆಲಸ ಮಾಡದಿದ್ದರೆ ಊಟವಿಲ್ಲ ಎನ್ನುವ ಪರಿಸ್ಥಿತಿ ಅವರದ್ದು.

ಹೀಗಿರುತ್ತಾ ಒಂದು ದಿನ ಮೂವರು ಶ್ರೀಮಂತ ಗೆಳೆಯರು ಆ ಊರಿನ ದಾರಿಯಾಗಿ ಸಾಗುತ್ತಿದ್ದರು. ಮೂವರು ಬೇರೆ ಬೇರೆ ಕಾರುಗಳಲ್ಲಿ ಹೋಗುತ್ತಿದ್ದರು. ಆದರೆ, ನಿಲ್ಲುವಾಗ ಜತೆಯಾಗುತ್ತಿದ್ದರು. ಅವರು ದಾರಿ ಮಧ್ಯೆ ಈ ಗ್ರಾಮದಲ್ಲೂ ಜತೆಯಾಗಿ ಕಾರಿನಿಂದ ಇಳಿದರು. ಆಗ ಊರಿನ ಕೆಲವರು ಬಂದು ಸಮಸ್ಯೆಯನ್ನು ಹೇಳಿಕೊಂಡರು. ಜನರ ಬಡತನ, ಹೊಟ್ಟೆಗೂ ಕೂಳಿಲ್ಲದ ಸಂಕಟವನ್ನು ತೋಡಿಕೊಂಡರು.

ಜನರ ಪರಿಸ್ಥಿತಿಯನ್ನು ಕೇಳಿದ ಮೊದಲ ಶ್ರೀಮಂತ ವ್ಯಕ್ತಿಗೆ ಸಿಕ್ಕಾಪಟ್ಟೆ ಬೇಸರವಾಯಿತು. ಅವನು ತನ್ನ ಕೈಲಿದ್ದ ಚಿನ್ನಾಭರಣಗಳು, ಹಣ ಎಲ್ಲವನ್ನೂ ಆ ಗ್ರಾಮದ ಮುಖ್ಯಸ್ಥರಿಗೆ ಕೊಟ್ಟು, ಇದನ್ನು ಬಳಸಿ ಜನರ ಬಡತನ ನಿವಾರಣೆಗೆ ಏನಾದರೂ ಮಾಡಿ ಹೇಳಿದ.

ಎರಡನೇ ಶ್ರೀಮಂತನಿಗೆ ಬರೀ ಹಣದಿಂದ ಈ ಸಮಸ್ಯೆ ಬಗೆಹರಿಯದು. ಅವರಿಗೆ ಬೇಕಾಗಿರುವುದು ಆಹಾರ ಎಂದು ತಿಳಿದು ಹಣದ ಜತೆಗೆ ಇನ್ನೊಂದಷ್ಟು ಆಹಾರ ವಸ್ತುಗಳನ್ನು ತರಿಸಿಕೊಟ್ಟ.

ಇವರಿಬ್ಬರೂ ಹೀಗೆ ಮಾಡುತ್ತಿದ್ದಂತೆಯೇ ಮೂರನೇ ಶ್ರೀಮಂತ ಕಾರನ್ನು ರೊಯ್ಯನೆ ತಿರುಗಿಸುತ್ತಾ ಹೊರಟೇ ಹೋದ. ಆಗ ಉಳಿದ ಇಬ್ಬರು ಮತ್ತು ಊರಿನವರು ʻಈ ಮನುಷ್ಯನಿಗೆ ಕರುಣೆಯೇ ಇಲ್ಲ. ಜನರಿಗೆ ಕಷ್ಟ ಬಂದಾಗ ಶ್ರೀಮಂತಿಕೆ ಇದ್ದವರು ಸ್ವಲ್ಪ ಸಹಾಯ ಮಾಡಬೇಕು. ಇವನು ಸಹಾಯ ಮಾಡಬೇಕಾಗುತ್ತದೆ ಎಂದು ಹೇಳಿ ಓಡಿ ಹೋಗಿದ್ದಾನೆʼʼ ಎಂದು ಮಾತನಾಡಿಕೊಂಡರು. ಈ ಇಬ್ಬರೂ ಶ್ರೀಮಂತರೂ ಅವನಿಗಾಗಿ ಸ್ವಲ್ಪ ಹೊತ್ತು ಕಾದರು ಮತ್ತು ಅಂಥ ಕರುಣೆ ಇಲ್ಲದವನ ಸಹವಾಸ ಬೇಡವೇಬೇಡ ಎಂದು ಮುಂದಕ್ಕೆ ಹೋದರು.

ಮರುದಿನ ಅವರಿಬ್ಬರು ಅದೇ ದಾರಿಯಾಗಿ ಮರಳುತ್ತಿದ್ದಾಗ ಅದೇ ಗ್ರಾಮದಲ್ಲಿ ಒಂದಷ್ಟು ಜನ ಸೇರಿದ್ದು ಕಂಡಿತು. ಅದೇನೆಂದು ಹೋಗಿ ನೋಡಿದರೆ ಅಲ್ಲಿ ಮೂರನೇ ಶ್ರೀಮಂತ ನಿಂತಿದ್ದ.

ಅವನು ಗ್ರಾಮಸ್ಥರಿಗೆ ಕೃಷಿ ಸಲಕರಣೆಗಳನ್ನು ವಿತರಣೆ ಮಾಡುತ್ತಿದ್ದ. ಜತೆಗೆ ಬೀಜಗಳನ್ನು ಕೊಡುತ್ತಿದ್ದ. ನೀವು ಈ ಕೃಷಿ ಸಲಕರಣೆಗಳ ಮೂಲಕ ನಿಮ್ಮ ನಿಮ್ಮ ಭೂಮಿಯನ್ನು ಬೆಳೆ ಬೆಳೆಯಿರಿ ಎಂದು ಸಲಹೆ ನೀಡುತ್ತಿದ್ದ. ಜತೆಗೆ ಅದು ಬೆಳೆದು ಫಲ ಕೊಡುವವರೆಗೆ ತಾನೇ ಆಹಾರ ಧಾನ್ಯಗಳನ್ನು ನೀಡುವುದಾಗಿ ಹೇಳುತ್ತಿದ್ದ. ಮಾತ್ರವಲ್ಲ, ನೀವು ಬೆಳೆದ ಧವಸ ಧಾನ್ಯಗಳನ್ನು ತಾನೇ ಕೊಳ್ಳುವುದಾಗಿ ಭರವಸೆ ನೀಡುತ್ತಿದ್ದ.

ಗ್ರಾಮಸ್ಥರಿಗೆ ಇದರಿಂದ ಖುಷಿ ಆಯಿತು. ಹೊತ್ತಿಗೆ ಅನ್ನವಾಯಿತು. ಉದ್ಯೋಗವೂ ಸಿಕ್ಕಿತು. ಬೆಳೆದ ಬೆಳೆಗೆ ಮಾರುಕಟ್ಟೆಯೂ ಖಾತ್ರಿಯಾಯಿತು.. ಇನ್ನೇನು ಬೇಕು ಎಂದು ಅವರು ತಮ್ಮ ನೋವನ್ನೆಲ್ಲ ಮರೆತರು.

ಇದನ್ನೆಲ್ಲ ನೋಡುತ್ತಿದ್ದ ಇತರ ಇಬ್ಬರು ಶ್ರೀಮಂತರಿಗೆ ಮೂರನೇ ಶ್ರೀಮಂತನ ಮಾದರಿ ಇಷ್ಟವಾಯಿತು. ಅವರು ಕೂಡಾ ತಾವೂ ಇದೇ ರೀತಿ ಸಹಾಯ ಮಾಡಲು ಮುಂದಾದರು. ಇದರಿಂದ ಇಡೀ ಗ್ರಾಮಕ್ಕೆ ದೊಡ್ಡ ಮಟ್ಟದ ಲಾಭವಾಗುವುದು ಖಾತ್ರಿಯಾಯಿತು.

ಆಗ ಗ್ರಾಮದ ಹಿರಿಯರೊಬ್ಬರು ಹೇಳಿದರು: ನಾವು ಹೊಟ್ಟೆಗೇ ಅನ್ನವಿಲ್ಲ, ಬಿತ್ತಲು ಬೀಜವಿಲ್ಲ ಎಂದು ಕಂಗಾಲಾಗಿದ್ದೆವು. ನೀವು ನೋಡಿದರೆ ಎಲ್ಲವನ್ನೂ ಕೊಟ್ಟಿರಿ. ಅದರಲ್ಲೂ ಮುಖ್ಯವಾಗಿ ಸಂಕಷ್ಟದ ಸಮಯದಲ್ಲಿ ನಮಗೆ ಕೇವಲ ಹಣದ ಸಹಾಯವಲ್ಲ, ಒಳ್ಳೆಯ ದೂರದೃಷ್ಟಿಯ ಚಿಂತನೆ ಕೊಟ್ಟಿರಿ. ಇದು ನಮಗೆ ದೀರ್ಘಕಾಲ ನೆನಪಲ್ಲಿ ಉಳಿಯಲಿದೆ.

ಈ ಮಾತುಗಳನ್ನು ಕೇಳುತ್ತಲೇ ಇಬ್ಬರು ಶ್ರೀಮಂತರು, ಮೂರನೇ ವ್ಯಕ್ತಿಯ ಕೈ ಕುಲುಕಿದರು.

ಇದನ್ನೂ ಓದಿ : Motivational story : ನಿಜಕ್ಕೂ ಅಪಶಕುನದ ಮುಖ ಯಾರದ್ದು? ಅವನದ್ದಾ? ಮಹಾರಾಜನದ್ದಾ?

Exit mobile version