Site icon Vistara News

Mount Carmel College : ಕೋ ಎಜುಕೇಶನ್‌ಗೆ ಮೌಂಟ್‌ ಕಾರ್ಮೆಲ್‌ ಮುಕ್ತ; ಹುಡುಗರು ಬೇಡ ಅಂದ್ರಾ ಹೆಣ್ಮಕ್ಕಳು!?

Bengaluru Mount Carmel open to co education

ಬೆಂಗಳೂರು: ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ (Mount Carmel College) ಮುಂದಿನ ಶೈಕ್ಷಣಿಕ ವರ್ಷದಿಂದ ಸಹ ಶಿಕ್ಷಣ (ಕೋ ಎಡ್‌) ನೀಡಲು ಮುಂದಾಗುತ್ತಿದೆ. 75 ವರ್ಷಗಳ ನಂತರ ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) ಕೋ-ಎಡ್‌ಗೆ ಬದಲಾಗಲು ಸಜ್ಜಾಗಿದೆ. ಆದರೆ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಪೋಷಕರು, ವಿದ್ಯಾರ್ಥಿನಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂದಹಾಗೇ ರಾಜಧಾನಿ ಬೆಂಗಳೂರಲ್ಲಿ ಬಹುತೇಕ ಪೋಷಕರು ತಮ್ಮ ಹೆಣ್ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲೇ ಓದಬೇಕೆಂದು ಆಸೆ ಪಡುತ್ತಾರೆ. ಬೆಂಗಳೂರಿನ ಅತ್ಯಂತ ಸುರಕ್ಷಿತ ವಾತಾವರಣದಿಂದ ಕೂಡಿರುವ ಸಂಸ್ಥೆ ಎಂಬ ಕಾರಣಕ್ಕೆ ಮೊದಲ ಆಯ್ಕೆ ಮೌಂಟ್‌ ಕಾರ್ಮೆಲ್‌ ಕಾಲೇಜು ಆಗಿದೆ. ಇದೀಗ ಮಹಿಳಾ ಕಾಲೇಜಾಗಿರುವ ಮೌಂಟ್‌ ಕಾರ್ಮೆಲ್‌ 75 ವರ್ಷಗಳ ನಂತರ ಬದಲಾಗುತ್ತಿದೆ. ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) 2024-25ರ ಶೈಕ್ಷಣಿಕ ವರ್ಷದಲ್ಲಿ ಯುವಕರಿಗೂ ಪ್ರವೇಶವನ್ನು ತೆರೆಯುವ ಮೂಲಕ ಸಹ- ಶಿಕ್ಷಣಕ್ಕೆ ಬದಲಾಗಲು ಸಜ್ಜಾಗುತ್ತಿದೆ.

ಮೌಂಟ್ ಕಾರ್ಮೆಲ್ ಕಾಲೇಜಿನ ರಿಜಿಸ್ಟ್ರಾರ್ ಆಫ್ ಅಕಾಡೆಮಿಕ್ಸ್ ಸುಮಾ ಸಿಂಗ್ ಅವರು ಜನವರಿ 4ರಂದು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಾಲೇಜಿನಲ್ಲಿ ಹುಡುಗರಿಗೆ ಪ್ರವೇಶವನ್ನು ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ. ಮುಂದಿನ ವರ್ಷ ಕಾಲೇಜು ‘ಡೀಮ್ಡ್-ಟು-ಬಿ-ಯೂನಿವರ್ಸಿಟಿ’ ಸ್ಥಾನಮಾನವನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ. ಹೀಗಾಗಿ ಈ ಕ್ರಮವು ಪೂರ್ವಭಾವಿಯಾಗಿ ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ: Yuva Nidhi Scheme: ನಾಳೆ ಯುವ ನಿಧಿ ನಗದು ವರ್ಗಾವಣೆ; ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜು

ಕೆಲವರು ಈ ಕ್ರಮವನ್ನು ಸಕಾರಾತ್ಮಕ ಹೆಜ್ಜೆ ಎಂದು ಪರಿಗಣಿಸಿದರೆ, ಕೆಲ ವಿದ್ಯಾರ್ಥಿಗಳು ಕೋ ಎಜುಕೇಶನ್‌ ಮಾಡಲು ಹೊರಟಿರುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಪೋಷಕರ ಆತಂಕವನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಂದಲೂ ಮಿಶ್ರ ಪ್ರತಿಕ್ರಿಯೆ ಇದೆ. ವಿಶ್ವವಿದ್ಯಾಲಯಕ್ಕೆ ಪರಿವರ್ತನೆಯಾಗುವ ಗುರಿ ಹೊಂದಿದ್ದರೆ, ಬೆಂಗಳೂರಿನ ಮೊದಲ ಮಹಿಳಾ ವಿಶ್ವವಿದ್ಯಾಲಯವಾಗಿ ಮಾಡಿ, ಅದರ ಪರಂಪರೆಯನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದಿದ್ದಾರೆ.

ಹುಡುಗರಿಗೆ ಆಯ್ದ ಪಿಜಿ ಕೋರ್ಸ್‌ ಪರಿಚಯಿಸಿದ್ದ ಕಾಲೇಜು

2015ರಲ್ಲೇ ಹುಡುಗರಿಗೆ ಆಯ್ದ ಪಿಜಿ ಕೋರ್ಸ್‌ಗಳನ್ನು ಮೌಂಟ್‌ ಕಾರ್ಮೆಲ್‌ ಪರಿಚಯಿಸಿತ್ತು. ಸ್ವಾಯತ್ತ ಸಂಸ್ಥೆಯಲ್ಲಿ ಪ್ರಸ್ತುತ 13 ಹುಡುಗರು ಸ್ನಾತಕೋತ್ತರ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ. ಇನ್ನು ಮೌಂಟ್ ಕಾರ್ಮೆಲ್ ಕಾಲೇಜು ಮುಂದಿನ ಶೈಕ್ಷಣಿಕ ವರ್ಷಕ್ಕೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸುಮಾರು 45 ಯುಜಿ ಕೋರ್ಸ್‌ಗಳು ಮತ್ತು 21 ಪಿಜಿ ಕೋರ್ಸ್‌ಗಳನ್ನು ನೀಡಲಿದೆ. ಅರ್ಹ ಅಭ್ಯರ್ಥಿಗಳು ಈಗ ಎಂಸಿಸಿಯ ಅಧಿಕೃತ ವೆಬ್‌ಸೈಟ್‌ mccblr.edu.in ನಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version