Site icon Vistara News

Movie ticket price hike: ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ; ಸಿನಿಮಾ ಟಿಕೆಟ್‌, OTT ಸಬ್‌ಸ್ಕ್ರಿಪ್ಶನ್ ಶುಲ್ಕ ಭಾರಿ ಏರಿಕೆ?

Movie ticket price hike

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಏರಿಕೆ ಬೆನ್ನಲ್ಲೇ ಇದೀಗ ಮನರಂಜನೆ ಕ್ಷೇತ್ರದ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟಿದೆ. ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ, ಎಲ್ಲದರ ಮೇಲೂ ತೆರಿಗೆಯನ್ನು ಹೇರಿರುವ ಸಿದ್ದರಾಮಯ್ಯ ಸರ್ಕಾರ, ಇದೀಗ ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ (Movie ticket price hike) ಮಾಡಲು ‘ಕೈ’ ಎತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಿ.ಎಂ ಸೀಟನ್ನು ಉಳಿಸಿಕೊಳ್ಳಲು ನಾಡಿನ ಸಿನಿ ಪ್ರಿಯರ ಬೆನ್ನಿಗೂ ತೆರಿಗೆ ಬರೆ ಎಳೆಯಲು ಮುಂದಾಗಿದ್ದಾರೆ. ಕನ್ನಡ ಚಿತ್ರರಂಗ ಸಂಕಷ್ಟಗಳಿಂದ ಬಳಲುತ್ತಿದ್ದರೂ, ಅವುಗಳಿಗೆ ಕಿವಿಗೊಡದ ಸಿಎಂ, ಸಿನಿಮಾ ಟಿಕೆಟ್, ಒಟಿಟಿಗಳ ಚಂದಾದಾರಿಕೆಯ ಮೇಲೆ ಶೇ.2ರಷ್ಟು ತೆರಿಗೆಯನ್ನು ವಿಧಿಸಿ ಹಣದೋಚಲು ಮುಂದಾಗಿದ್ದಾರೆ. ಇದಕ್ಕಾಗಿ ವಿಧಾನಸಭೆಯಲ್ಲಿ ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಹೋರಾಟಗಾರರ (ಕ್ಷೇಮಾಭಿವೃದ್ಧಿ) ಮಸೂದೆ-2024 ಅನ್ನು ಅನುಮೋದನೆಗೆ ಇಟ್ಟಿದ್ದಾರೆ. ಈಗಾಗಲೇ ಎಲ್ಲದರ ಮೇಲೂ ತೆರಿಗೆಯನ್ನು ಹೇರಿರುವ ರಣಹೇಡಿ ಕಾಂಗ್ರೆಸ್‌ ಸರ್ಕಾರ, ಈಗ ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ ಮಾಡಲು ‘ಕೈ’ ಎತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದೆ.

ಮಸೂದೆ ಮಂಡನೆ

ರಾಜ್ಯ ಸರ್ಕಾರ, ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯಲ್ಲಿ ಸಿನಿಮಾ, ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್‌ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇಕಡ 1ರಿಂದ 2ರಷ್ಟು ಹೊಸ ಸೆಸ್ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಇಎಸ್ಐ, ಪಿಎಫ್ ಸೇರಿದಂತೆ ಅನೇಕ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ | Rakshit Shetty: ಕಿರುತೆರೆಗೂ ಲಗ್ಗೆ ಇಟ್ಟ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?

ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ ಎಂಬ ನಿಧಿ ಸ್ಥಾಪಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದರಿಂದ ಸಿನಿಮಾ ಟಿಕೆಟ್ ಹಾಗೂ ಒಟಿಟಿ ಚಂದಾದಾರಿಕೆ ಮೇಲೆ ಶೇಕಡ 2 ಪರ್ಸೆಂಟ್ ಮೀರದಂತೆ ಶೇಕಡ 1 ಪರ್ಸೆಂಟ್​ಗಿಂತ ಕಡಿಮೆಯಾಗದಂತೆ ಸೆಸ್‌ ವಿಧಿಸಲಿದೆ. ಈ ಸೆಸ್ ಅನ್ನು ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದೆ.

Exit mobile version