ಹಾಸನ: ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅವಕಾಶಗಳನ್ನು ಕೊಡಲಾಗಿದೆ, ಯಾರನ್ನೂ ಕಡೆಗಣಿಸುವಂತಹ ಪ್ರಶ್ನೆಯೇ ಇಲ್ಲ. ಹಿರಿಯ ಮುಖಂಡರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅಸಮಾಧಾನ ಇದ್ದರೆ ಎಐಸಿಸಿ ಅಧ್ಯಕ್ಷರ ಬಳಿ ತಿಳಿಸಬೇಕೇ ವಿನಃ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಬಾರದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ನಾಲಾಯಕ್ ಎಂಬ ಕಾಂಗ್ರೆಸ್ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿಕೆಗೆ ಬೇಲೂರಿನಲ್ಲಿ ಭಾನುವಾರ ಪ್ರತಿಕ್ರಿಯಿಸಿ, ಅವರು ಏಕೆ ಈ ಪದ ಬಳಸಿದ್ದಾರೆ ಗೊತ್ತಿಲ್ಲ. ಅವರು ಇಷ್ಟು ದಿನ ಏನು ಮಾಡುತ್ತಿದ್ದರು, ಅವರ ಮನಸ್ಸಿನಲ್ಲಿ ಏನಿದೆ, ಏನು ತೊಂದರೆಯಾಗಿದೆ ಎಂದು ತಿಳಿಸಿದರೆ ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಕೊಡಲು ಸಾಧ್ಯವಾಗುತ್ತದೆ ಎಂದರು.
ಇದನ್ನೂ ಓದಿ | ಬರೆದಿಟ್ಟುಕೊಳ್ಳಿ, ಕಾಂಗ್ರೆಸ್ ಪಕ್ಷ 70 ಸೀಟು ದಾಟಲ್ಲ: HD ಕುಮಾರಸ್ವಾಮಿ ಚಾಲೆಂಜ್
ಕಾಂಗ್ರೆಸ್ ಐಸಿಯುನಲ್ಲಿದೆ ಎಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷ ಐಸಿಯುನಲ್ಲಿದೆ ಎಂದು ನಮಗೇನು ಅನ್ನಿಸುತ್ತಿಲ್ಲ, ಭಾರತೀಯ ಜನತಾ ಪಾರ್ಟಿಯ ಭಾವನೆಗಳು, ಚಿಂತನೆಗಳು ಐಸಿಯುನಲ್ಲಿದೆ, ಅದು ಅಂತಿಮ ಹಂತಕ್ಕೆ ಬಂದಿದೆ. ಜನ 2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆಗಳಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ಹೊಂದಾಣಿಕೆ ಇಲ್ಲ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ಪಕ್ಷದ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಏಕಾಂಗಿಯಾಗಿ ರಾಜ್ಯದಲ್ಲಿ ಹೋರಾಟ ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಹೋದರರೂ ಆಗಿರು ಡಿ ಕೆ ಸುರೇಶ್ ಹೇಳಿದರು.
ಎಲ್ಲೆಡೆ ಪಕ್ಷ ಬಲವರ್ಧನೆ ಆಗುತ್ತಿದ್ದು, ಶೀಘ್ರದಲ್ಲಿಯೇ ಪಕ್ಷದ ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದೆ ಎಂದ ಅವರು, ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ವಿಚಾರ ಪ್ರತಿಕ್ರಿಯಿಸಿ, ನಾವು ಶರಣಾಗತಿ ಆಗಿಲ್ಲ, ಅಲ್ಲಿ ನಮ್ಮ ಪಕ್ಷದ ಪಾತ್ರ ಇರಲಿಲ್ಲ. ಅದಕ್ಕಾಗಿ ನಾವು ಮೌನ ವಹಿಸಿದ್ದೇವೆ, ಪಕ್ಷ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕುದುರೆ ವ್ಯಾಪಾರ ನಿರಂತರವಾಗಿ ನಡೆಯುತ್ತಿದ್ದು, ದೇಶದ ಜನತೆ ಗಮನಿಸಬೇಕು ಎಂದರು.
ಸಿದ್ದರಾಮೋತ್ಸವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು, ಸಿದ್ದರಾಮಯ್ಯ ಹುಟ್ಟುಹಬ್ಬದ ಅಂಗವಾಗಿ ಸಿದ್ದರಾಮೋತ್ಸವ ಆಚರಣೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ 75 ವರ್ಷ ಆಗಿದೆ, ಆದ್ದರಿಂದ ಅವರ ಅಭಿಮಾನಿಗಳೆಲ್ಲ ಜನ್ಮದಿನ ಆಚರಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ಪಕ್ಷದ ನಾಯಕರನ್ನು ಕರೆದು ಕಾರ್ಯಕ್ರಮ ಮಾಡುತ್ತಿದ್ದಾರೆ. ನನ್ನನ್ನೂ ಕರೆದಿದ್ದಾರೆ, ನಾವೆಲ್ಲಾ ಹೋಗುತ್ತೇವೆ ಎಂದರು.
ಇದನ್ನೂ ಓದಿ | Rajasthan Murder | ಕಾಂಗ್ರೆಸ್ ಏಕೆ ಈ ವಿಚಾರದಲ್ಲಿ ಪ್ರತಿಭಟಿಸುತ್ತಿಲ್ಲ?: ಎನ್. ರವಿಕುಮಾರ್ ಪ್ರಶ್ನೆ