ದೇವನಹಳ್ಳಿ: ಈ ಸತೀಶ್ ಜಾರಕಿಹೊಳಿ ಅವರದ್ದು ವಾಮಾಚಾರ ಫ್ಯಾಮಿಲಿ. ಅವರು ನಮ್ಮ ಸಂಸ್ಕೃತಿಯನ್ನು ಒಪ್ಪದವರು. ಅವರಿಗೆ ನಮ್ಮ ಧರ್ಮ, ಸಂಸ್ಕೃತಿ ಎಲ್ಲ ಅರ್ಥ ಆಗುವುದಿಲ್ಲ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಮಾತನಾಡಿದರು.
ಸತೀಶ್ ಜಾರಕಿಹೊಳಿ ಅವರು ಮಾಡಿದ ಹಿಂದು ಪದದ ಅರ್ಥ ವಿವರಣೆಗೆ ಪ್ರತಿಕ್ರಿಯೆ ನೀಡಿದ ಅವರು, ʻʻಡಿಕ್ಷನರಿ ಮಾಡಿದ್ದು ಆಂಗ್ಲರು. ಆಂಗ್ಲರಿಗೆ ದೇಶ ಒಡೆದು ಆಳುವ ಚಿಂತೆನೆಯಿತ್ತು. ಅವರಿಗೆ ದೇಶವನ್ನು ಕೂಡಿಸಿ ಒಗ್ಗಟ್ಟಾಗಿಡುವುದು ಬೇಕಾಗಿರಲಿಲ್ಲ. ಯಾವುದೋ ಭಾಷೆಯಲ್ಲಿ ಯಾವ್ಯಾವುದೋ ಅರ್ಥ ಇರಬಹುದು. ಸಾವಿರ ಅರ್ಥಗಳು ಇರಬಹುದು. ಆದರೆ, ನೀವು ಹಿಂದುವಾಗಿ ಈ ಮಣ್ಣಿನಲ್ಲಿ ಜನಿಸಿದವರು. ನಿಮಗೇ ಅರ್ಥವಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ʻʻಸರ್ವೇಜನಃ ಸುಖಿನೋ ಭವಂತುಃʼ ಎಂದು ಹೇಳುವ ಧರ್ಮ ಯಾವುದಾದರೂ ಇದ್ದರೆ ಅದು ನಮ್ಮ ಹಿಂದು ಧರ್ಮ. ಜಾರಕಿಹೊಳಿಯವರಿಗೆ ಈ ವಿಚಾರ ಗೊತ್ತಿಲ್ಲ ಯಾಕೆಂದರೆ ಅವರು ವಾಮಾಚಾರ ಫ್ಯಾಮಿಲಿಯವರು. ಸ್ಮಶಾನವನ್ನು ಪ್ರೀತಿಸುವವರು. ಸ್ಮಶಾನವನ್ನು ಪ್ರೀತಿಸುವವರು ಯಾರು ಅಂದ್ರೆ ಅವರು ನಮ್ಮ ಸಂಸ್ಕೃತಿಯನ್ನು ಒಪ್ಪದೆ ಇರುವವರು. ಮಾಟ ಮಂತ್ರ, ಮಾಯಾಜಾಲ ಮಾಡುವವರುʼʼ ಎಂದು ಗೇಲಿ ಮಾಡಿದರು ಜಗ್ಗೇಶ್.
ಹೇಳ ಹೆಸರಿಲ್ಲದಂತೆ ಮಾಡುತ್ತಾರೆ
ʻʻಈ ರೀತಿ ಹಿಂದು ವಿರೋಧಿ ಹೇಳಿಕೆ ನೀಡುವವರ ಸಂಖ್ಯೆ ಶೇ. ಒಂದು ಮಾತ್ರ. ಆದರೆ, ಇಂಥವರ ಹೇಳಿಕೆಗಳನ್ನು ನಿಜವಾಗಿಯೂ ಹಿಂದೂ ಎನ್ನುವ ಹೆಮ್ಮೆ ಇಟ್ಟುಕೊಂಡಿರುವ ಯಾರೂ ಕ್ಷಮಿಸಲ್ಲ. ಇಸ್ಲಾಂ ವಿರುದ್ಧ ಮಾತನಾಡಿದರೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸುತ್ತಾರೆ. ಪರಿಣಾಮ ಹೇಗೆ ವಿಕೃತವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ನಮ್ಮ ಹಿಂದೂಗಳು ಶಾಂತಿಪ್ರಿಯರು. ಕ್ಷಮಾ ಗುಣವುಳ್ಳವರು. ಅವರು ಕ್ಷಮಿಸುತ್ತಾರೆ ಅಂತ ಪದೇಪದೆ ಈ ರೀತಿ ಮಾತನಾಡಲು ಹೋಗಬೇಡಿ. ಅವರು ಎದ್ದುನಿಂತರು ಅಂದರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡುತ್ತಾರೆʼʼ ಎಂದು ಜಗ್ಗೇಶ್ ಎಚ್ಚರಿಕೆ ನೀಡಿದರು.