Site icon Vistara News

ರೋಹಿತ್‌ ಚಕ್ರತೀರ್ಥರನ್ನು ಸುಮ್ಮನೆ ಟಾರ್ಗೆಟ್‌ ಮಾಡೋದ್ಯಾಕೆ ಎಂದ ಪ್ರತಾಪ ಸಿಂಹ

MP Prathap simha

ಉಡುಪಿ: ರೋಹಿತ್ ಚಕ್ರತೀರ್ಥ ವಿರುದ್ಧ ನಾಡಗೀತೆಗೆ ಅಪಮಾನ ಆರೋಪ ಕೇಳಿಬರುತ್ತಿರುವುದನ್ನು ಗಮನಿಸಿದ್ದೇನೆ. ಫೇಸ್‌ಬುಕ್‌ನಲ್ಲಿ ಯೋರೋ ವ್ಯಂಗ್ಯ ಮಾಡಿರುವ ಪೋಸ್ಟ್‌ ಅನ್ನು ಅವರು ಹಾಕಿದ್ದರು, ಅನಗತ್ಯವಾಗಿ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅಭಿಪ್ರಾಯಪಟ್ಟರು.

ನಗರಕ್ಕೆ ಶನಿವಾರ ಭೇಟಿ ನೀಡಿದಾಗ ಮಾತನಾಡಿದ ಅವರು ʼʼಸಿದ್ದರಾಮಯ್ಯ ಸಿಎಂ ಆಗಿರುವಾಗ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕುವೆಂಪು ಮೈಸೂರಿನಲ್ಲಿ ಇದ್ದಂತಹವರು. ನಾನೂ ಅವರ ಅಭಿಮಾನಿಯಾಗಿದ್ದು, ಅವರ ಮೇಲೆ ಅಪಾರ ಗೌರವವಿದೆ. ರೋಹಿತ್ ಚಕ್ರತೀರ್ಥ ಅವರನ್ನು ತುಳಿಯುವ, ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು ʼʼಜಗತ್ತಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಸಮವಸ್ತ್ರ ಸಂಹಿತೆ ಜಾರಿ ಆಗಬೇಕು ಎಂಬ ಶಾಸಕ ರಘುಪತಿ ಭಟ್ ಹೋರಾಟ ಸರಿ ಇದೆ. ಸಮೂಹ ಸಂಹಿತೆ ಪಾಲಿಸಿ ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಕೋರ್ಟ್ ತೀರ್ಪಿಗೆ ಗೌರವ ಕೊಡಬೇಕು. ದೇಶ, ಸಂವಿಧಾನಕ್ಕಿಂತ ನಮ್ಮ ಧರ್ಮವೇ ದೊಡ್ಡದು ಎಂದರೆ ಇಂತಹ ಸಮಸ್ಯೆ ಇರುತ್ತದೆʼʼ ಎಂದು ಕಿಡಿ ಕಾರಿದರು.

ʼʼಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಮತ್ತಿತರರು ಇಲ್ಲಸಲ್ಲದ ಊಹಾಪೋಹ ಸೃಷ್ಟಿ ಮಾಡುತ್ತಿದ್ದಾರೆ. ಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಹಿರಂಗ ಚರ್ಚೆ ಆಹ್ವಾನ ನೀಡಿದ್ದಾರೆ. ಚರ್ಚೆಗೆ ಬಾರದೆ ಇವರು ಪಲಾಯನ ಮಾಡುತ್ತಿದ್ದಾರೆʼʼ ಎಂದು ಛೇಡಿಸಿದರು.

ಇದನ್ನೂ ಓದಿ | ಪಠ್ಯದಲ್ಲಿ ಬ್ರಾಹ್ಮಣೀಕರಣ ಮಾಡುತ್ತಿಲ್ಲ, ಇತಿಹಾಸ ಹಾಗೂ ರಾಷ್ಟ್ರೀಯತೆ ಇದೆ ಎಂದ ಸಚಿವ ನಾಗೇಶ್‌

ವಿಚಾರ ನಪುಂಸಕರು: ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು, ಇವರಲ್ಲಿ ವಿಚಾರ ಇಲ್ಲ ಬರೀ ಉಗುಳು ಮಾತ್ರ ಇದೆ. ವಿಚಾರ ನಪುಂಸಕತೆ ಇರುವುದರಿಂದ ಬರವಣಿಗೆ ಬಿಟ್ಟು ಎಷ್ಟೋ ವರ್ಷಗಳಾಗಿವೆ. ಇವರು ಮೈಕ್ ಮುಂದೆ ನಿಲ್ಲುವ ಮೈಕಾಸುರರಾಗಿದ್ದಾರೆ, ವಿಚಾರ ನಪುಂಸಕತೆ ಇಲ್ಲದಿದ್ದರೆ ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು.

ಪೆನ್ನಿಗೆ ನಿವೃತ್ತಿ ಕೊಟ್ಟಿದ್ದೀರಿ: ಭಗತ್ ಸಿಂಗ್ ಪಠ್ಯ ಕೈಬಿಟ್ಟಿದ್ದಕ್ಕೆ ಸಾಕ್ಷ್ಯ ತೋರಿಸಿ ಎಂದ ಅವರು, ನಾರಾಯಣಗುರು ಪಠ್ಯವನ್ನು ಸಮಾಜದಿಂದ ಕನ್ನಡ ಪಾಠಕ್ಕೆ ವರ್ಗಾಯಿಸಲಾಗಿದೆ. ಏಳನೇ ತರಗತಿಯ ಪಠ್ಯದಲ್ಲೂ ನಾರಾಯಣ ಗುರುಗಳ ಪಾಠ ಇದೆ. ದೇವನೂರು ಮಹಾದೇವ 2014, 2019 ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈಸೂರಿನಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ಆ ಭಾಗದಲ್ಲಿ ಜನ ಏನು ತೀರ್ಪು ಕೊಟ್ಟಿದ್ದಾರೆ ಎಂದು ಗೊತ್ತಿದೆ. ದೇವನೂರು ಮಹಾದೇವ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಕುಸುಮಬಾಲೆ ಎಂಬ ಅದ್ಭುತ ಕೃತಿಯನ್ನು ಬರೆದಿದ್ದಾರೆ. ಕಾಂಗ್ರೆಸ್ ಪ್ರಚಾರದ ಊಹಾಪೋಹಗಳನ್ನು ಬಿಟ್ಟು ಹಿಂದಿನ ಮಹಾದೇವರಾಗಿ ಒಂದು ಅದ್ಭುತ ಕೃತಿಯನ್ನು ರಚನೆ ಮಾಡಿ. ನಾವು ಕೂಡ ಇಷ್ಟಪಡುತ್ತೇವೆ ಗೌರವಿಸುತ್ತೇವೆ ಎಂದರು.

ಸೋನಿಯಾ ಗಾಂಧಿ ಮೂಲ ಹುಡುಕಿ
ಆರ್‌ಎಸ್‌ಎಸ್ ಮೂಲದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪಸಿಂಹ ಅವರು,
ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ಸೋನಿಯಾ ಗಾಂಧಿ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದರು. ಈಗ ಅವರದ್ದೇ ಪಕ್ಷಕ್ಕೆ ಹೋಗಿ ಮಹಾತಾಯಿ ಎನ್ನುತ್ತಿದ್ದಾರೆ. ಮಹಾತಾಯಿ, ಮಹಾನಾಯಕಿ ಎಂದು ಒಪ್ಪಿಕೊಳ್ಳುವ ದಯನೀಯ ಸ್ಥಿತಿಯಲ್ಲಿರುವ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ಮೂಲ ಹುಡುಕುವ ಮೊದಲು ಸೋನಿಯಾ ಗಾಂಧಿ ಮೂಲ ಹುಡುಕಲಿ ಎಂದು ಟಾಂಗ್‌ ನೀಡಿದರು.

ಇದನ್ನೂ ಓದಿ | ಮತ್ತೆ ಹಿಜಾಬ್‌ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು

Exit mobile version