Site icon Vistara News

MP Renukacharya: ಚುನಾವಣಾ ನಿವೃತ್ತಿ ಘೋಷಿಸಿದ ರೇಣುಕಾಚಾರ್ಯ; ಮನೆ ಮುಂದೆ ಅಭಿಮಾನಿಗಳ ಧರಣಿ

Protest from MP Renukacharya supporters in honnali

ದಾವಣಗೆರೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ‌. ರೇಣುಕಾಚಾರ್ಯ (MP Renukacharya) ಅವರು ಸೋಲಿನ ಆಘಾತ ಅನುಭವಿಸಿದ್ದರಿಂದ ಚುನಾವಣಾ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಭಾನುವಾರ (ಮೇ 14) ಅವರ ಮನೆ ಮುಂದೆ ಪಕ್ಷದ ಕಾರ್ಯಕರ್ತರು ಅವರ ಅಭಿಮಾನಿಗಳಿಂದ ಹೈಡ್ರಾಮಾವೇ ನಡೆದಿದೆ.

ಕಾಂಗ್ರೆಸ್‌ನ ಶಾಂತನಗೌಡ ಡಿ.ಜಿ. ವಿರುದ್ಧ 17,560 ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದು ಅವರಿಗೆ ತೀವ್ರ ನೋವನ್ನುಂಟು ಮಾಡಿತ್ತು. ಹೀಗಾಗಿ ಶನಿವಾರ ರಾತ್ರಿಯೇ ಮನೆಯಲ್ಲಿ ಗೋಳಾಡಿದ್ದರು. ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ವೇಳೆ ಜಮಾಯಿಸಿದ್ದ ಕೆಲವು ಅಭಿಮಾನಿಗಳೂ ಅತ್ತೂ ಕರೆದು ಗೋಳಿಟ್ಟಿದ್ದರು. ಈಗ ರೇಣುಕಾಚಾರ್ಯ ಅವರು ನಿವೃತ್ತಿಯ ಮಾತುಗಳನ್ನು ಆಡಿದ್ದಾರೆ. ಪಕ್ಷ ಯಾರಿಗೆ ಟಿಕೇಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದರು.

ಇದನ್ನೂ ಓದಿ: 12 ತಿಂಗಳಲ್ಲಿ 41 ಸಾವಿರ ಬೂತ್​ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ: ಬಿಜೆಪಿ ಸೋಲಿನ ನಂತರ ಬಿ.ಎಲ್. ಸಂತೋಷ್​ ಪೋಸ್ಟ್​

ಅಭಿಮಾನಿಗಳ ಪ್ರತಿಭಟನೆ

ರೇಣುಕಾಚಾರ್ಯ ಅವರು ಚುನಾವಣೆ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು, ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ. ಹೊನ್ನಾಳಿಯ ರೇಣುಕಾಚಾರ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಶನಿವಾರದಿಂದಲೇ ಗೋಳಾಟ

ರೇಣುಕಾಚಾರ್ಯ ಅವರ ಸೋಲು ಗೊತ್ತಾಗುತ್ತಿದ್ದಂತೆ, ಶನಿವಾರ ಸಂಜೆ ಹೊತ್ತಿಗೆ ಮನೆಯ ಬಳಿ ಸಾವಿರಾರು ಜನ ಕಾರ್ಯಕರ್ತರು ಜಮಾಯಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ ಅವರು ‘ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಕೊವಿಡ್ 19 ಕಾಲದಲ್ಲಿ ಜೀವದ ಹಂಗು ತೊರೆದು ಹೋರಾಡಿದೆ. ಆದರೂ ಜನರು ನನ್ನನ್ನು ಸೋಲಿಸಿದರು. ನೀವೆಲ್ಲ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಶ್ರಮ ಪಟ್ಟಿದ್ದೀರಿ. ಆದರೆ ಇನ್ನು ಮುಂದೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಅವರು ಹೇಳಿದ್ದರು. ಆದರೆ ದಯವಿಟ್ಟು ಅಂಥ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಾರ್ಯಕರ್ತರು ಬೇಡಿಕೊಂಡಿದ್ದಾರೆ. ಹರಿಹರದ ಶಾಸಕ ಬಿಪಿ ಹರೀಶ್ ಕೂಡ ಎಂಪಿ ರೇಣುಕಾಚಾರ್ಯ ಅವರಿಗೆ ಸಮಾಧಾನ ಮಾಡಿದ್ದರು.

ರೇಣುಕಾಚಾರ್ಯ ಅವರ ಮನೆ ಬಳಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿತ್ತು. ಕೆಲವರು ಹಣೆಹಣೆ ಬಡಿದುಕೊಂಡು ಅತ್ತಿದ್ದಾರೆ. ಕೊನೆಗೆ ರೇಣುಕಾಚಾರ್ಯ ದಿಕ್ಕು ತೋಚದಂತೆ ಆಗಿ, ಮನೆಯ ಎದುರು ಕುರ್ಚಿಯ ಮೇಲೆ ಮೌನವಾಗಿ ಕುಳಿತಿದ್ದರು.

ಇದನ್ನೂ ಓದಿ: Karnataka Election Result: ‘ನಿಮ್ಮವ, ನಿಮ್ಮ ಪ್ರೀತಿಯ ಮನೆ ಮಗ’; ಸೋತ ಬಳಿಕ ಪತ್ರ ಬರೆದ ಸಿಟಿ ರವಿ, ಸುಧಾಕರ್​

ರೇಣುಕಾಚಾರ್ಯ ಅವರು ತಮ್ಮ ಗೆಲುವು ಪಕ್ಕಾ ಎಂದು ಭರವಸೆ ಇಟ್ಟಿದ್ದರು. ಭರ್ಜರಿ ರೋಡ್ ಶೋ ನಡೆಸಿ ತಮ್ಮ ಬಲಪ್ರದರ್ಶನ ಮಾಡಿದ್ದರು. ಆದರೆ ಈ ಚುನಾವಣೆಯಲ್ಲಿ ಲೆಕ್ಕಾಚಾರ ಉಲ್ಟಾ ಆಗಿದ್ದು ಅವರ ನೋವಿಗೆ ಕಾರಣವಾಗಿದೆ.

Exit mobile version