ದಾವಣಗೆರೆ: ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರು ಈ ಸಲ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಚುನಾವಣಾ ಫಲಿತಾಂಶ (Karnataka Assembly Election Result) ಹೊರಬಿದ್ದು, ತಾನು ಸೋತಿದ್ದೇನೆ ಎಂದು ಗೊತ್ತಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವು ವ್ಯಕ್ತಪಡಿಸಿದ್ದ ರೇಣುಕಾಚಾರ್ಯ ನಿನ್ನೆ (ಮೇ 13) ತಡರಾತ್ರಿ ಮತ್ತೆ ಕಾರ್ಯಕರ್ತರ ಮಧ್ಯೆ ನಿಂತು ಕಣ್ಣೀರು ಹಾಕಿದ್ದಾರೆ. ಅವರ ಅಭಿಮಾನಿಗಳು-ಕಾರ್ಯಕರ್ತರು ಹಲವರು ಕಣ್ಣಲ್ಲಿ ನೀರು ಹಾಕಿದ್ದಾರೆ.
ಸಂಜೆ ಹೊತ್ತಿಗೆ ರೇಣುಕಾಚಾರ್ಯ ಅವರ ಮನೆಯ ಬಳಿ ಸಾವಿರಾರು ಜನ ಕಾರ್ಯಕರ್ತರು ಜಮಾಯಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ ಅವರು ‘ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಕೊವಿಡ್ 19 ಕಾಲದಲ್ಲಿ ಜೀವದ ಹಂಗು ತೊರೆದು ಹೋರಾಡಿದೆ. ಆದರೂ ಜನರು ನನ್ನನ್ನು ಸೋಲಿಸಿದರು. ನೀವೆಲ್ಲ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಶ್ರಮ ಪಟ್ಟಿದ್ದೀರಿ. ಆದರೆ ಇನ್ನು ಮುಂದೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಅವರು ಹೇಳಿದರು. ಆದರೆ ದಯವಿಟ್ಟು ಅಂಥ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಾರ್ಯಕರ್ತರು ಬೇಡಿಕೊಂಡಿದ್ದಾರೆ. ಹರಿಹರದ ಶಾಸಕ ಬಿಪಿ ಹರೀಶ್ ಕೂಡ ಎಂಪಿ ರೇಣುಕಾಚಾರ್ಯ ಅವರಿಗೆ ಸಮಾಧಾನ ಮಾಡಿದ್ದಾರೆ.
ಇದನ್ನೂ ಓದಿ: Karnataka Election : ಹೊನ್ನಾಳಿಯಲ್ಲಿ ಎಂ.ಪಿ. ರೇಣುಕಾಚಾರ್ಯ ರೋಡ್ ಶೋ, ಭರ್ಜರಿ ಪ್ರಚಾರ
ಅಂತೂ ರೇಣುಕಾಚಾರ್ಯ ಅವರ ಮನೆ ಬಳಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ. ಕೆಲವರು ಹಣೆಹಣೆ ಬಡಿದುಕೊಂಡು ಅತ್ತಿದ್ದಾರೆ. ಕೊನೆಗೆ ರೇಣುಕಾಚಾರ್ಯ ದಿಕ್ಕು ತೋಚದಂತೆ ಆಗಿ, ಮನೆಯ ಎದುರು ಕುರ್ಚಿಯ ಮೇಲೆ ಮೌನವಾಗಿ ಕುಳಿತಿದ್ದಾರೆ. ಹೊನ್ನಾಳಿಯಲ್ಲಿ ಕಾಂಗ್ರೆಸ್ನ ಡಿ.ಜಿ.ಶಾಂತನಗೌಡ ಅವರು ಗೆದ್ದಿದ್ದಾರೆ. ಇಲ್ಲಿ ರೇಣುಕಾಚಾರ್ಯ ಅವರು ತಮ್ಮ ಗೆಲುವು ಪಕ್ಕಾ ಎಂದು ಭರವಸೆ ಇಟ್ಟಿದ್ದರು. ಭರ್ಜರಿ ರೋಡ್ ಶೋ ನಡೆಸಿ ತಮ್ಮ ಬಲಪ್ರದರ್ಶನ ಮಾಡಿದ್ದರು. ಆದರೆ ಈ ಚುನಾವಣೆಯಲ್ಲಿ ಲೆಕ್ಕಾಚಾರ ಉಲ್ಟಾ ಆಗಿದ್ದು ಅವರ ನೋವಿಗೆ ಕಾರಣವಾಗಿದೆ.