ಕರ್ನಾಟಕ ಎಲೆಕ್ಷನ್
ದಾವಣಗೆರೆ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಬಿಜೆಪಿಯ ಭದ್ರಕೋಟೆಯಲ್ಲಿ ಬದಲಾವಣೆಯ ಬಿರುಗಾಳಿ
ದಾವಣಗೆರೆ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಏಳು ವಿಧಾನಸಭಾ ಕ್ಷೇತ್ರ ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಬಾರಿ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಭದ್ರ ಕೋಟೆ ಮಾಡಿಕೊಂಡಿತ್ತು. ಆದರೂ ಈ ಬಾರಿಯ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಜಿಲ್ಲೆಯ ಕ್ಷೇತ್ರಗಳ ಸದ್ಯದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ಯಶವಂತ್ ಕುಮಾರ್ ಎ. ವಿಸ್ತಾರ ನ್ಯೂಸ್, ದಾವಣಗೆರೆ
ಬೆಣ್ಣೆದೋಸೆ ಎಂದಾಕ್ಷಣ ನೆನಪಾಗೋದು ದಾವಣಗೆರೆ. ಈ ಬಾರಿಯ ದಾವಣಗೆರೆ ಜಿಲ್ಲೆಯ ಚುನಾವಣಾ ಕಣ ರಂಗೇರಿದೆ. 2018 ರ ಫಲಿತಾಂಶ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಪಡುತ್ತಿದ್ದರೆ, ಕಾಂಗ್ರೆಸ್ 2013ರ ಫಲಿತಾಂಶಕ್ಕಾಗಿ ಹೋರಾಟ ಮಾಡುತ್ತಿದೆ. ಜಿಲ್ಲೆಯಲ್ಲಿ ಈ ಮೊದಲು 8 ವಿಧಾನಸಭಾ ಕ್ಷೇತ್ರಗಳಿದ್ದು, ವಿಜಯನಗರ ಜಿಲ್ಲೆ ರೂಪುಗೊಂಡ ಮೇಲೆ ಹರಪನಹಳ್ಳಿ ತಾಲೂಕು ವಿಜಯನಗರಕ್ಕೆ ಸೇರಿದೆ. ಹೀಗಾಗಿ 7 ವಿಧಾನಸಭಾ ಕ್ಷೇತ್ರಗಳು ದಾವಣಗೆರೆ ಜಿಲ್ಲೆಯಲ್ಲಿ ಉಳಿದುಕೊಂಡಿವೆ.
ಕಾಂಗ್ರೆಸ್‌ನಲ್ಲಿ ದಾವಣಗೆರೆ ಜಿಲ್ಲೆಯ ಹೈಕಮಾಂಡ್ ಎಂದೇ ಗುರುತಿಸಿಕೊಂಡಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ ಮಲ್ಲಿಕಾರ್ಜುನ್ ಈ ಬಾರಿ ತಮ್ಮ ಗೆಲುವಿಗಾಗಿ ಶ್ರಮಿಸುತ್ತಿದ್ದು, ಅಕ್ಕಪಕ್ಕದ ಕ್ಷೇತ್ರಗಳತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸ್ವಲ್ಪ ಹೊಡೆತ ಬೀಳುವ ಸಾಧ್ಯತೆ ಇದೆ. ಇನ್ನೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪ್ರಕರಣ ಯಾರಿಗೆ ವರ, ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರ ಕೂಡ ನಡೆಯುತ್ತಿದೆ.
ದಾವಣಗೆರೆ ದಕ್ಷಿಣ:
ಕಾಂಗ್ರೆಸ್ ಬಿಜೆಪಿ
ನಡುವೆ ನೇರ ಹಣಾಹಣಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಡಾ.ಶಾಮನೂರು ಶಿವಶಂಕರಪ್ಪ ಅವರ ಶಕ್ತಿ ಕೇಂದ್ರ. 1994ರಲ್ಲಿ ಮೊದಲಬಾರಿಗೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಇಲ್ಲಿಯವರೆಗೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.
2004, 2008, 2013, 2018 ಸತತವಾಗಿ ಡಾ. ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿ ಸೋಲಿಲ್ಲದ ಸರದಾರರಾಗಿದ್ದಾರೆ. ಆದರೆ, ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ್ ಕುಮಾರ್ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ಇನ್ನೂ ಜೆಡಿಎಸ್ ಅಸ್ವಿತ್ವಕ್ಕಾಗಿ ಹೋರಾಡುತ್ತಿದೆ.
ಬಿ.ಜಿ.ಅಜಯ್ ಕುಮಾರ್ ಹೊಸ ಅಭ್ಯರ್ಥಿಯಾದರೂ 1 ವರ್ಷ ಮಹಾನಗರ ಪಾಲಿಕೆ ಮೇಯರ್ ಆಗಿ ಜನರಿಗೆ ಹತ್ತಿರ ಆಗಿದ್ದಾರೆ. ಇಲ್ಲಿ ಮುಸ್ಲಿಮರ ಮತಗಳೇ ನಿರ್ಣಾಯಕವಾಗಿದ್ದು, ನೇರ ಹಣಾಹಣಿ ಇದೆ. ಶಾಮನೂರು ಶಿವಶಂಕರಪ್ಪ ಅವರಗೆ 92 ವರ್ಷ ವಯಸ್ಸಾಗಿದ್ದು, ಜನ ಒಪ್ಪುತ್ತಾರಾ ಅನ್ನೋ ಲೆಕ್ಕಾಚಾರ ಕೂಡ ಇದೆ.
ಕಳೆದ ಬಾರಿಯ ಫಲಿತಾಂಶ ಏನು?
ಡಾ.ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್): 71,369 | ಯಶವಂತರಾವ್ ಜಾಧವ್ (ಬಿಜೆಪಿ): 55,485 | ಅಮಾನುಲ್ಲಾ ಖಾನ್ (ಜೆಡಿಎಸ್): 6,020 | ಗೆಲುವಿನ ಅಂತರ : 15,884
ದಾವಣಗೆರೆ ಉತ್ತರ:
ಬಿಜೆಪಿ-ಕಾಂಗ್ರೆಸ್
ನಡುವೆ ಜಿದ್ದಾಜಿದ್ದಿ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದಿದ್ದು, ಅವರ ಗೆಲುವಿಗಾಗಿ ಇಡೀ ಶಾಮನೂರು ಕುಟುಂಬ ಚುನಾವಣಾ ಅಖಾಡಕ್ಕೆ ಧುಮುಕಿದೆ.
2018 ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸೋಲು ಕಂಡಿದ್ದರು. ಈ ಬಾರಿ ಶತಾಯಗಥಾಯ ಗೆಲ್ಲಬೇಕು ಎಂದು ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ಮಕ್ಕಳು, ಸಹೋದರರು ಮಲ್ಲಿಕಾರ್ಜುನ್ ಪರ ಪ್ರಚಾರ ಮಾಡುತ್ತಿದ್ದಾರೆ.
ಇನ್ನೂ ಉತ್ತರದಲ್ಲಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ಲೋಕಿಕೆರೆ ನಾಗರಾಜ್ ಅವರನ್ನ ಚುನಾವಣಾ ಅಖಾಡಕ್ಕೆ ಇಳಿಸಿದೆ. ಲೋಕಿಕೆರೆ ನಾಗರಾಜ್ ರೈತ ಪರ ಹೋರಾಟಗಾರಾಗಿದ್ದು, ಕ್ಷೇತ್ರದ ಜನರಿಗೂ ಚಿರಪರಿಚಿತ. ಅಲ್ಲದೇ ಬಿಜೆಪಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್ ಲೋಕಿಕೆರೆ ನಾಗರಾಜ್‌ಗೆ ಸಾಥ್ ನೀಡಿದ್ದು, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್.ಎ.ರವೀಂದ್ರನಾಥ್ (ಬಿಜೆಪಿ): 76,540 | ಎಸ್.ಎಸ್.ಮಲ್ಲಿಕಾರ್ಜುನ್ (ಕಾಂಗ್ರೆಸ್): 72,469 | ಎಂ. ಆನಂದಪ್ಪ (ಜೆಡಿಎಸ್) 5,381 | ಗೆಲುವಿನ ಅಂತರ: 4,071
ಚನ್ನಗಿರಿ: ಸ್ವಾಭಿಮಾನ
ವರ್ಸಸ್ ಕಾಂಗ್ರೆಸ್
ಅಡಕೆ ನಾಡು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸ್ವಾಭಿಮಾನ ವರ್ಸಸ್ ಕಾಂಗ್ರೆಸ್ ನಡುವೆ ಸಮರ ಏರ್ಪಟ್ಟಿದೆ. ಹಾಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರನ ಲೋಕಾಯುಕ್ತ ಪ್ರಕರಣ ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆ.
ಚನ್ನಗಿರಿಯಲ್ಲಿ ಚುನಾವಣೆಗೂ ಮುನ್ನ ಬಿಜೆಪಿ ಗೆಲುವು ಅಂತಾನೇ ಭಾವಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಡಾಳ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ್ ಮಾಡಾಳ್ ಸ್ವಾಭಿಮಾನದ ಭಾವುಟ ಹಾರಿಸಿ ಕಣಕ್ಕಿಳಿದಿದ್ದಾರೆ.
ಇಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಎಸ್. ಶಿವಕುಮಾರ್ ಲೆಕಕ್ಕಷ್ಟೇ. ಕಾಂಗ್ರೆಸ್‌ನಿಂದಹೊಸ ಅಭ್ಯರ್ಥಿ ಬಸವರಾಜ್ ವಿ ಶಿವಗಂಗಾ ಅಖಾಡದಲ್ಲಿದ್ದಾರೆ. ವಿರೂಪಾಕ್ಷಪ್ಪರ ಮನೆಯ ಮೇಲಿನ ಲೋಕಾಯುಕ್ತ ದಾಳಿ ಪ್ರಕರಣ ಕಾಂಗ್ರೆಸ್‌ಗೆ ಫ್ಲಸ್ ಎನ್ನಲಾಗ್ತಿದೆ. ಆದರೆ, ಮಲ್ಲಿಕಾರ್ಜುನ್ ಹಾರಿಸಿರುವ ಸ್ವಾಭಿಮಾನದ ಭಾವುಟವೂ ಜೋರಾಗಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ವರ್ಸಸ್ ಸ್ವಾಭಿಮಾನದ ಫೈಟ್ ಜೋರಾಗಿದೆ. ಜೆಡಿಎಸ್ ಅಭ್ಯರ್ಥಿಯಾಗಿ ರೈತ ನಾಯಕ ತೇಜಸ್ವಿ ಪಟೇಲ್ ಕಣಕ್ಕಿಳಿದಿದ್ದು, ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಮಾಡಾಳ್ ವಿರೂಪಾಕ್ಷಪ್ಪ (ಬಿಜೆಪಿ): 73,794 | ವಡ್ನಾಳ್ ರಾಜಣ್ಣ (ಕಾಂಗ್ರೆಸ್): 48,014 | ಡಿ.ರಮೇಶ್ (ಜೆಡಿಎಸ್) : 29,106 | ಗೆಲುವಿನ ಅಂತರ : 25,780
ಮಾಯಕೊಂಡ: ರಾಷ್ಟ್ರೀಯ
ಪಕ್ಷಗಳಿಗೆ ಪಕ್ಷೇತರರ ಕಾಟ
ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸ್ವಪಕ್ಷೀಯರೇ ಮಗ್ಗಲ ಮುಳ್ಳಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಬಸವಂತಪ್ಪಗೆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ, ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಸವಿತಾ ಬಾಯಿ ಸವಾಲೊಡ್ಡುತ್ತಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಗೆ ಪಕ್ಷೇತರ ಅಭ್ಯರ್ಥಿ ಪುಷ್ಪಾ ವಾಗೀಶ್ ಅಡ್ಡಿಯಾಗಿದ್ದಾರೆ. ಪುಷ್ಪಾ ವಾಗೀಶ್ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದು, ಅದು ಬಿಜೆಪಿಗೆ ಸ್ಪಲ್ಪ ಮಟ್ಟಿಗೆ ಡ್ಯಾಮೇಜ್ ಮಾಡಲಿದೆ.
ಜೆಡಿಎಸ್ ಅಭ್ಯರ್ಥಿ ಎಚ್.ಆನಂದಪ್ಪ ʻಇಬ್ಬರ ಜಗಳ ಮೂರನೇಯವರಿಗೆ ಲಾಭʼ ಎಂಬ ಮಾತಿನಂತೆ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಪೈಪೋಟಿಯ ಲಾಭ ಮಾಡಿಕೊಳ್ಳಲು ಓಡಾಡುತ್ತಿದ್ದಾರೆ. ಕಳೆದ ಬಾರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಇದು ಎಸ್ಸಿ ಮೀಸಲು ಕ್ಷೇತ್ರವಾದರೂ ಇಲ್ಲಿ ಲಿಂಗಾಯತ ಸಮುದಾಯ ಯಾರ ಕೈ ಹಿಡಿಯತ್ತೋ ಅವರು ಶಾಸಕರಾಗುತ್ತಾರೆ. ಈ ಬಾರಿ ಬೋವಿ, ಲಂಬಾಣಿ, ಮಾದಿಗ ಸಮುದಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎನ್. ಲಿಂಗಣ್ಣ (ಬಿಜೆಪಿ) : 50,556 | ಕೆ.ಎಸ್.ಬಸವಂತಪ್ಪ (ಕಾಂಗ್ರೆಸ್) : 44,098 | ಎಚ್.ಆನಂದಪ್ಪ (ಪಕ್ಷೇತರ) : 27, 321 | ಗೆಲುವಿನ ಅಂತರ: 6,458
ಹೊನ್ನಾಳಿ : ಹೋರಿ ರೇಣು
ವರ್ಸಸ್ ಡಿಜಿಎಸ್ ಫೈಟ್
ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಹಳೇ ಕಲಿಗಳು ರಣಕಣದಲ್ಲಿದ್ದಾರೆ. ಬಿಜೆಪಿಯಿಂದ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್‌ನಿಂದ ಡಿ. ಜಿ. ಶಾಂತನಗೌಡ ಕಣಕ್ಕಿಳಿದಿದ್ದಾರೆ. ಇಬ್ಬರೂ ಕೂಡ ಶಾಸಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಈ ಬಾರಿ ರೇಣುಕಾಚಾರ್ಯ ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆ, ಅನೇಕ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋದರೆ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಇದು ನನ್ನ ಕಡೆಯ ಚುನಾವಣೆ ಎಂದು ಜನರ ಮುಂದೆ ಹೋಗುತ್ತಿದ್ದಾರೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಡಿ.ಜಿ. ಶಾಂತನಗೌಡ ಲಿಂಗಾತರ ಸಮುದಾಯಕ್ಕೆ ಸೇರಿದವರು. ರೇಣುಕಾಚಾರ್ಯ ವೀರಶೈವ ಲಿಂಗಾಯತದಲ್ಲಿ ಜಂಗಮರು.
ಇತ್ತ ಕುರುಬ ಸಮುದಾಯವೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಂಪಿಆರ್ ಮತ್ತು ಡಿಜಿಎಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ತೆಗೆದುಕೊಂಡು ಇವರಿಬ್ಬರ ಪೈಪೋಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎಂ.ಪಿ.ರೇಣುಕಾಚಾರ್ಯ (ಬಿಜೆಪಿ) : 80,624| ಡಿ. ಜಿ. ಶಾಂತನಗೌಡ (ಕಾಂಗ್ರೆಸ್) : 76,391 | ಗೆಲುವಿನ ಅಂತರ: 4,233
ಜಗಳೂರು: ಕಾಂಗ್ರೆಸ್‌ಗೆ
ಪಕ್ಷೇತರರದ್ದೇ ಸವಾಲು!
ಜಗಳೂರು ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲು ವಿಧಾನಸಭಾ ಕ್ಷೇತ್ರ. ಇಲ್ಲಿ ಈ ಮೊದಲು ಇಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಫೈಟ್ ಇತ್ತು. ಕಾಂಗ್ರೆಸ್ ಮಾಜಿ ಶಾಸಕ ಎಚ್.ಪಿ. ರಾಜೇಶ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಬಿ.ದೇವೇಂದ್ರಪ್ಪಗೆ ಮಗ್ಗಲ ಮುಳ್ಳಾಗಿದ್ದಾರೆ.
ಇನ್ನೂ ಬಿಜೆಪಿ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಈ ಬಾರಿಯೂ ಕಣಕ್ಕಿಳಿದಿದ್ದು, ಸದ್ಯದ ಮಟ್ಟಿಗೆ ತ್ರಿಕೋನ ಸ್ಪರ್ಧೆಯಂತಿದೆ ಕ್ಷೇತ್ರ. ಎಚ್.ಪಿ.ರಾಜೇಶ್ ಹೊರತು ಪಡಿಸಿ, ಮತ್ತಿಬ್ಬರೂ ಆರ್ಥಿಕವಾಗಿ ಬಲಿಷ್ಠರಾಗಿರುವುದರಿಂದ ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್. ವಿ. ರಾಮಚಂದ್ರ (ಬಿಜೆಪಿ): 78,948 | ಎಚ್.ಪಿ.ರಾಜೇಶ್ (ಕಾಂಗ್ರೆಸ್): 49,727 | ಬಿ.ದೇವೇಂದ್ರಪ್ಪ (ಜೆಡಿಎಸ್): 13,401 | ಗೆಲುವಿನ ಅಂತರ : 29, 221
ಹರಿಹರ: ತ್ರೀಕೋನ ಸ್ಪರ್ಧೆ
ಹರಿಹರ ವಿಧಾನಸಭಾ ಕ್ಷೇತ್ರ ದಾವಣಗೆರೆ ಜಿಲ್ಲೆಯಲ್ಲಿ ಪ್ರತಿಬಾರಿಯೂ ತ್ರಿಕೋನ ಫೈಟ್ ಇರುವಂತಹ ಕ್ಷೇತ್ರ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸಮಬಲದ ಹೋರಾಟ ನಡೆಸಿಕೊಂಡು ಬಂದಿವೆ. 2008ರಲ್ಲಿ ಬಿಜೆಪಿ ಗೆಲವು, 2013 ರಲ್ಲಿ ಜೆಡಿಎಸ್ ಗೆಲವು, 2018 ರಲ್ಲಿ ಕಾಂಗ್ರೆಸ್ ಗೆಲುವು. ಹೀಗೆ ಕ್ಷೇತ್ರದ ಜನ ಮೂರು ಪಕ್ಷಗಳಿಗೂ ಆಶೀರ್ವಾದ ಮಾಡಿದ್ದಾರೆ.
ಈ ಬಾರಿಯೂ ಕೂಡ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್ ಹಾಲಿ ಶಾಸಕ ಎಸ್.ರಾಮಪ್ಪಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿ ಹೊಸ ಅಭ್ಯರ್ಥಿ ಶ್ರೀನಿವಾಸ್ ನಂದಿ ಕಣಕ್ಕಿಳಿದಿದ್ದಾರೆ, ಎಸ್. ರಾಮಪ್ಪ ಪಕ್ಷ ನಿಷ್ಠೆ ಎಂದು ಕಾಂಗ್ರೆಸ್‌ನಲ್ಲೇ ಉಳಿದುಕೊಂಡು ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ.
ಬಿಜೆಪಿಯಿಂದ ಮಾಜಿ ಶಾಸಕ ಬಿ.ಪಿ.ಹರೀಶ್, ಜೆಡಿಎಸ್‌ನಿಂದ ಎಚ್.ಎಸ್.ಶಿವಶಂಕರ್ ಕಣಕ್ಕಿಳಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕುರುಬ ಸಮುದಾಯಕ್ಕೆ ಸೇರಿದ್ದು, ಪ್ರಬಲ ಸ್ವಾಮೀಜಿಯೊಬ್ಬರು ಹಿಂದಿದ್ದಾರೆ ಎನ್ನಲಾಗಿದೆ. ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವರಿಷ್ಠ ಜೆ ಪಿ ನಡ್ಡಾ ಹೀಗೆ ಅನೇಕ ನಾಯಕರು ಪ್ರಚಾರ ನಡೆಸಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ.
ಇನ್ನು ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಪಂಚಮಸಾಲಿ ಮತಗಳ ಜೊತೆ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದು, ತ್ರಿಕೋನ ಸ್ಪರ್ಧೆಯಲ್ಲಿ ಯಾರು ಗೆಲುವಿನ ಹಾರ ಹಾಕಿಕೊಳ್ಳುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್.ರಾಮಪ್ಪ (ಕಾಂಗ್ರೆಸ್): 64,801 | ಬಿ.ಪಿ.ಹರೀಶ್ (ಬಿಜೆಪಿ): 57,541 | ಎಚ್.ಎಸ್.ಶಿವಶಂಕರ್ (ಜೆಡಿಎಸ್): 38,204 | ಗೆಲುವಿನ ಅಂತರ : 7,260
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು
ಕರ್ನಾಟಕ
Karnataka Cabinet expansion: ಮೊದಲ, 2ನೇ ಬಾರಿಗೇ ಸಚಿವಗಿರಿ ಪಡೆದ ಬೆಳಗಾವಿ ಶಾಸಕಿಯರಿವರು!
state cabinet expansion: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬೆಳಗಾವಿಯಿಂದ ಮಹಿಳಾ ಕೋಟಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವರಾಗಿದ್ದಾರೆ. ಇವರು ಎರಡನೇ ಬಾರಿಗೆ ಆಯ್ಕೆಯಾದರೂ ಮಂತ್ರಿಗಿರಿಯ ಅದೃಷ್ಟ ಒಲಿದಿದೆ. ಇದೇ ರೀತಿ ಈ ಹಿಂದೆ ಇನ್ನೂ ಇಬ್ಬರು ಶಾಸಕಿಯರಿಗೆ ಮೊದಲ ಇಲ್ಲವೇ ಎರಡನೇ ಬಾರಿಗೆ ಮಂತ್ರಿ ಪಟ್ಟ ಸಿಕ್ಕಿದೆ. ಅವರ ಬಗ್ಗೆ ವಿವರವನ್ನು ನೋಡೋಣ.
ಮಂಜುನಾಥ ಅಶೋಕ್ ಹುಡೇದ, ಬೆಳಗಾವಿ
ರಾಜ್ಯ ರಾಜಕಾರಣದ ಮಟ್ಟಿಗೆ ಕುಂದಾನಗರಿ ಬೆಳಗಾವಿ ಸಹ ಒಂದು ಶಕ್ತಿ ಕೇಂದ್ರ. ಈ ಕಾರಣಕ್ಕೆ ಇದನ್ನು ರಾಜ್ಯದ ಎರಡನೇ ರಾಜಧಾನಿ ಎಂದೂ ಕರೆಯುತ್ತಾರೆ. ಅಲ್ಲದೆ, ಉತ್ತರ ಕರ್ನಾಟಕಕ್ಕೆ ಆಡಳಿತ ಪ್ರಾತಿನಿಧ್ಯವನ್ನು ಕೊಡುವ ನಿಟ್ಟಿನಲ್ಲಿ ಇಲ್ಲಿ ಸುವರ್ಣ ವಿಧಾನಸೌಧವನ್ನೂ ಸ್ಥಾಪನೆ ಮಾಡಲಾಗಿದೆ. ಜತೆಗೆ ಇಲ್ಲಿನ ರಾಜಕಾರಣಿಗಳೂ ಸಹ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ವೇಳೆ ಇಲ್ಲಿ ಮಹಿಳಾ ರಾಜಕಾರಣಿಗಳ ಪಾರುಪತ್ಯವೂ ಇದ್ದು, ಮೊದಲ ಹಾಗೂ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಸಚಿವ ಸ್ಥಾನವನ್ನು ಪಡೆದವರೂ ಇದ್ದಾರೆ. ಈ ಬಾರಿ ಎರಡನೇ ಸಲಕ್ಕೆ ಆಯ್ಕೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ರಾಜಕೀಯವಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿದೆ. ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಸದ್ಯಕ್ಕೆ ಇಬ್ಬರು ಮಹಿಳಾ ಶಾಸಕಿಯರಿದ್ದಾರೆ. ನಿಪ್ಪಾಣಿ ಕ್ಷೇತ್ರದ ಶಶಿಕಲಾ ಜೊಲ್ಲೆ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಲಕ್ಷ್ಮೀ ಹೆಬ್ಬಾಳ್ಕರ್ ಹಾಲಿ ಶಾಸಕರಾಗಿದ್ದಾರೆ. ಕಳೆದ ಬಾರಿ ಶಶಿಕಲಾ ಜೊಲ್ಲೆ ಸಚಿವರಾಗಿದ್ದರೆ, ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್ ಮಂತ್ರಿ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಿಂದ ಸಚಿವೆ ಆಗುತ್ತಿರುವ ಮೂರನೇ ಶಾಸಕಿ!
ಬೆಳಗಾವಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಕೆಲವು ಮನೆತನಗಳು ಇಂದಿಗೂ ಖ್ಯಾತಿಯನ್ನು ಪಡೆದುಕೊಂಡಿವೆ. ಸರ್ಕಾರವನ್ನೇ ಬೀಳಿಸುವಷ್ಟರ ಮಟ್ಟಿಗೆ ಪ್ರಾಬಲ್ಯ ಹೊಂದಿರುವ ಮನೆತನಗಳು ಇಲ್ಲಿವೆ. ಈ ಹಿಂದೆ ಹಿಂದೆ ವಿ.ಎಲ್. ಪಾಟೀಲ್ ಕುಟುಂಬ, ಕತ್ತಿ ಕುಟುಂಬ, ಸದ್ಯ ಜಾರಕಿಹೊಳಿ ಕುಟುಂಬವು ಈಗಲೂ ಜಿಲ್ಲಾ ರಾಜಕೀಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡಿಲ್ಲ. ಈ ಫ್ಯಾಮಿಲಿ ಫೈಟ್, ಪ್ರತಿಷ್ಠೆಯ ಕಣದ ನಡುವೆಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಲಕ್ಷ್ಮೀ ಹೆಬ್ಬಾಳಕರ್ ಗೆದ್ದು ಬೀಗಿದ್ದಾರೆ. ಲಿಂಗಾಯತ ಕೋಟಾದಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಅವರ ಸಂಪುಟ ಸೇರಿದ್ದಾರೆ.
ಬೆಳಗಾವಿಯಿಂದ ನೀರಾವರಿ ಸಚಿವರಾಗಿದ್ದ ಲೀಲಾವತಿ ಆರ್ ಪ್ರಸಾದ್
ಲೀಲಾವತಿ ಆರ್ ಪ್ರಸಾದ್ ಅವರು ಅಥಣಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. 1985 ಮತ್ತು 1994ರಲ್ಲಿ ಅಥಣಿಯಿಂದ ಜನತಾದಳದಿಂದ ಸ್ಪರ್ಧೆ ಮಾಡಿ ಗೆದ್ದು ಬೀಗಿದ್ದರು. ಅಲ್ಲದೆ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ ಸರ್ಕಾರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದ ಲೀಲಾವತಿ ಆರ್. ಪ್ರಸಾದ್ ಅವರು ದೇವೆಗೌಡರ ಸರ್ಕಾರದಲ್ಲಿ ಮೊದಲ ಮಹಿಳಾ ನೀರಾವರಿ ಮಂತ್ರಿಯಾಗಿಯೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದು ಈಗ ಇತಿಹಾಸ. ತಮ್ಮ 23ನೇ ವಯಸ್ಸಿಗೆ (ಅಂದಿನ ಬೆಂಗಳೂರು ಸಿಟಿ ಕಾರ್ಪೊರೇಷನ್) ಇಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿಯೂ ಸಹ ಲೀಲಾವತಿ ಆರ್. ಪ್ರಸಾದ್ ಅವರು ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: Weather Report: ಈ ವಾರ ಕರಾವಳಿಯಲ್ಲಿ ಮಳೆ ಅಬ್ಬರ; ಉಳಿದೆಡೆ ಬಿಸಿಲಿಗೆ ಜನ ತತ್ತರ
ಎರಡನೇ ಬಾರಿ ಗೆದ್ದಾಗಲೇ ಶಶಿಕಲಾ ಜೊಲ್ಲೆ ಮಂತ್ರಿ
ನಿಪ್ಪಾಣಿ ಕ್ಷೇತ್ರದಿಂದ 2013ರಲ್ಲಿ ಚುನಾವಣೆ ಎದುರಿಸಿ ಗೆದ್ದು ಬೀಗಿದ್ದ ಶಶಿಕಲಾ ಜೊಲ್ಲೆ 2018ರಲ್ಲಿಯೂ ಶಾಸಕರಾಗಿ ಮರು ಆಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದರು. 2018 ರಲ್ಲಿ ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬಂತು. ಅದಾದ ನಂತರ 17 ಜನ ಶಾಸಕರು ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು ಸರ್ಕಾರ ಕಡೆವಿದ್ದರು. ಬಳಿಕ ಅಸ್ವಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಆಯ್ಕೆ ಆಗಿದ್ದರು. ನಂತರ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದ ಮೇಲೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಲೂ ಮುಜರಾಯಿ ಹಾಗೂ ವಕ್ಫ್ ಸಚಿವೆಯಾಗಿಯೂ ಜೊಲ್ಲೆ ಕೆಲಸ ಮಾಡಿದ್ದರು.
ಕರ್ನಾಟಕ
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
ತಮ್ಮ ತಾತ ಸಚಿವರಾಗದೇ ಇದ್ದದ್ದಕ್ಕೆ ಬೇಸರವಾಗಿದೆ. ನನ್ನ ತಾತ ಬಹಳ ಕರುಣಾಮಯಿ, ಸಾಮರ್ಥ್ಯ ಇರುವವರು ಹಾಗೂ ಪರಿಶ್ರಮಿಯಾಗಿದ್ದಾರೆ ಎಂದು ಆರ್ನ ತಿಳಿಸಿದ್ದಾಳೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವಲ್ಲಿ ಹಿರಿಯ ಕಾಂಗ್ರೆಸಿಗ ಟಿ.ಬಿ. ಜಯಚಂದ್ರ ಸಫಲರಾಗಿಲ್ಲ. ತಮ್ಮನ್ನು ಆಯ್ಕೆ ಮಾಡದೇ ಇರುವ ಕುರಿತು ಮಾಧ್ಯಮಗಳ ಎದುರು ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಜಯಚಂದ್ರ ಅವರ ಮೊಮ್ಮಗಳೂ ಬೇಸರಗೊಂಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದಾಳೆ.
ಇಂಗ್ಲಿಷ್‌ನಲ್ಲಿ ಪತ್ರ ಬರೆದಿರುವ ಆರ್ನಾ ಸಂದೀಪ್, ಕೊನೆಯಲ್ಲಿ ಒಂದು ಸ್ಮೈಲಿಯನ್ನೂ ಅಂಟಿಸಿದ್ದಾಳೆ. Dear Rahu Gandhi, I Am TB Jayachandras Granddaughter. I Am sad that my grandfather did not become minister. I want him to become minister because he is kind, capable and hardworking. Please. ಎಂದು ಬರೆದಿದ್ದಾಳೆ.
ತಮ್ಮ ತಾತ ಸಚಿವರಾಗದೇ ಇದ್ದದ್ದಕ್ಕೆ ಬೇಸರವಾಗಿದೆ. ನನ್ನ ತಾತ ಬಹಳ ಕರುಣಾಮಯಿ, ಸಾಮರ್ಥ್ಯ ಇರುವವರು ಹಾಗೂ ಪರಿಶ್ರಮಿಯಾಗಿದ್ದಾರೆ, ಅವರು ಸಚಿವರಾಗಬೇಕೆಂದು ನಾನು ಬಯಸುತ್ತೇನೆ. ದಯಮಾಡಿ ಎಂದು ಪತ್ರದಲ್ಲಿ ತಿಳಿಸಿ ಕೊನೆಯಲ್ಲಿ ಒಂದು ಸ್ಮೈಲಿಯನ್ನೂ ಹಾಕಿದ್ದಾಳೆ. ಸ್ವಯಂಸ್ಫೂರ್ತಿಯಿಂದ ಮೊಮ್ಮಗಳು ಪತ್ರ ಬರೆದಿರುವುದನ್ನು ಕಂಡು ಜಯಚಂದ್ರ ಅಚ್ಚರಿಪಟ್ಟರು.
ಇದನ್ನೂ ಓದಿ: Electricity Bill: ಇವತ್ತಿಂದ ಕರೆಂಟ್ ಬಿಲ್ ಕಟ್ಟಂಗಿಲ್ಲ; ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆರ್ಡರ್!
ಕರ್ನಾಟಕ
Karnataka Cabinet: ರಾಜ್ಯ ಕಾಂಗ್ರೆಸ್ ನಾಯಕರ ಜತೆಗೆ ಮಾತುಕತೆ ಕಟ್: ಸದನದಲ್ಲಿ ನೋಡ್ಕೊತೀನಿ ಎಂದ ಜಯಚಂದ್ರ
ನಾನು ಮಿನಿಸ್ಟರ್ ಆಗದಿದ್ದರೂ ಶಾಸಕ ಸ್ಥಾನದಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಳಿ ದಾಖಲೆ ಇದೆ, ಮಾತನಾಡುವ ಶಕ್ತಿ ಇದೆ ಎಂದು ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಬೆಂಗಳೂರು: ಇನ್ನುಮುಂದೆ ತಮಗೂ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡುವುದಿಲ್ಲ ಎಂದಿರುವ ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಸದನ ಕರೆಯಲ್ಲಿ ಅಲ್ಲಿ ಮಾತಾಡುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಪ್ರಭಾವಿ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅವರು ಈ ಬಾರಿಯೂ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಸಚಿವರ ಪಟ್ಟಿಯಲ್ಲಿ ಕೊನೆಯವರೆಗೂ ಹೋಗಿ ತಮ್ಮ ಹೆಸರು ಕೈಬಿಡಲಾಗಿದೆ ಎಂದು ಅಸಮಾಧಾನಗೊಂಡಿರುವ ಟಿ.ಬಿ. ಜಯಚಂದ್ರ, ಮಾಧ್ಯಮಗಳ ಎದುರು ಕೋಪ ಹೊರಹಾಕಿದ್ದಾರೆ.
ನನಗೆ ಮಂತ್ರಿ ಪದವಿ ಸಿಗಬೇಕಿತ್ತು. ಕೊನೆಯ ಕ್ಷಣದವರೆಗೂ ನನ್ನ ಹೆಸರು ಪಟ್ಟಿಯಲ್ಲಿತ್ತು. ನನಗೆ ಸಚಿವ ಸ್ಥಾನ ತಪ್ಪಲು ನಮ್ಮ ಜಿಲ್ಲೆಯ ನಾಯಕರು ಕಾರಣರಲ್ಲ. ಪರಮೇಶ್ವರ್ ಕೋಟಾ ಬೇರೆ, ರಾಜಣ್ಣ ಖೋಟಾ ಬೇರೆ. ನನ್ನದು ನನ್ನ ಸಮುದಾಯದ ಕೋಟ. ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಮುಂದಾದರು. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಶಾಸಕನಾದಾಗ ಈಗ ವಿಧಾನ ಸಭೆಯಲ್ಲಿ ಇರೋರು ಯಾರೂ ಶಾಸಕರಾಗಿರಲಿಲ್ಲ. ನನ್ನ ಸಚಿವ ಸ್ಥಾನ ತಪ್ಪಲು ಕೆಲ ರಿಯಲ್ ಎಸ್ಟೇಟ್ ಹಾಗೂ ಎಜುಕೇಷನ್ ಮಾಫಿಯಾ ಕೆಲಸ ಮಾಡಿದೆ. ನಾನು ನೀರು ಬೇಕು ಜನರಿಗೆ ಅಂತ ಲಾಭಿ ಮಾಡಿದೆ, ಅವರು ಎಜುಕೇಷನ್ ಸಂಸ್ಥೆಗಳು ಬೇಕು ಅಂತ ಲಾಭಿ ಮಾಡಿದರು. ಇವರೇ ನನಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಕಾರಣರಾಗಿದ್ದಾರೆ.
ನಾನು ಮಿನಿಸ್ಟರ್ ಆಗದಿದ್ದರೂ ಶಾಸಕ ಸ್ಥಾನದಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಳಿ ದಾಖಲೆ ಇದೆ, ಮಾತನಾಡುವ ಶಕ್ತಿ ಇದೆ. ಸದನದಲ್ಲಿ ಎಲ್ಲವನ್ನೂ ಮಾತನಾಡ್ತೀನಿ. ನಾನು ಯಾವನಿಗೂ ಹೆದರಲ್ಲ. ಮುಂದೆ ಸದನ ಕರೆಯಲಿ ಎಲ್ಲವನ್ನೂ ಮಾತನಾಡ್ತೀನಿ. ಇನ್ನು ಏನಿದ್ದರೂ ಹೈಕಮಾಂಡ್ ಜತೆ ಮಾತ್ರ ನನ್ನ ಮಾತುಕತೆ. ರಾಜ್ಯದ ನಾಯಕರ ಜತೆ ಮಾತುಕತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: Electricity Bill: ಇವತ್ತಿಂದ ಕರೆಂಟ್ ಬಿಲ್ ಕಟ್ಟಂಗಿಲ್ಲ; ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆರ್ಡರ್!
ಕರ್ನಾಟಕ
Karnataka Cabinet Expansion: ಸಚಿವರ ಪ್ರಮಾಣ ವಚನ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ
Karnataka Cabinet Expansion: ರಾಜಭವನದಲ್ಲಿ ಶನಿವಾರ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಮೂಲಕ ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ. ಹೀಗಾಗಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಶನಿವಾರ 24 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಇದರಿಂದ ಸಿದ್ದರಾಮಯ್ಯ ಸಂಪುಟದ (Karnataka Cabinet Expansion) 34 ಸ್ಥಾನಗಳೂ ಭರ್ತಿಯಾದಂತಾಗಿದೆ. ಮತ್ತೊಂದೆಡೆ ತಮ್ಮ ನೆಚ್ಚಿನ ನಾಯಕರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.
ಚಿಂತಾಮಣಿಯಲ್ಲಿ ಡಾ.ಎಂ.ಸಿ.ಸುಧಾಕರ್ ಅಭಿಮಾನಿಗಳಿಂದ ಸಂಭ್ರಮ
ಚಿಕ್ಕಬಳ್ಳಾಪುರ: ಶಾಸಕ ಡಾ.ಎಂ.ಸಿ.ಸುಧಾಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
2004 ಮತ್ತು 2008ರಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಸತತ ಎರಡು ಬಾರಿ ಸೋಲು ಕಂಡಿದ್ದ ಸಚಿವ ಡಾ. ಎಂ.ಸಿ. ಸುಧಾಕರ್ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಸಿದ್ದರಾಮಯ್ಯ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಚಿಂತಾಮಣಿ ತಾಲೂಕು ಕಚೇರಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.
ಇದನ್ನೂ ಓದಿ | Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ವಿಜಯಪುರದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ
ವಿಜಯಪುರ: ಸಚಿವರಾಗಿ ಶಿವಾನಂದ ಪಾಟೀಲ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಚಾಂದನಿ ಹೋಟೆಲ್ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರ, ಸಚಿವ ಶಿವಾನಂದ ಪಾಟೀಲ ಪರವಾಗಿ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿ, ಶಿವಾನಂದ ಪಾಟೀಲ ಅವರು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.
ಕಾರವಾರದಲ್ಲಿ ಮಂಕಾಳು ವೈದ್ಯ ಅಭಿಮಾನಿಗಳಿಂದ ಸಿಹಿ ಹಂಚಿಕೆ
ಕಾರವಾರ: ಮಂಕಾಳು ವೈದ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾರವಾರದ ಸುಭಾಷ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಬಳಿಕ ಸಚಿವ ಮಂಕಾಳು ವೈದ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಪರ ಕಾರ್ಯಕರ್ತರು ಜೈಕಾರ ಹಾಕಿ ಸಂಭ್ರಮಿಸಿದರು.
ಕೊಪ್ಪಳದಲ್ಲಿ ಶಿವರಾಜ್ ತಂಗಡಗಿ ಅಭಿಮಾನಿಗಳ ಹರ್ಷ
ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ ಅವರು ಮೂರನೇ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೊಪ್ಪಳದ ಅಶೋಕ ವೃತ್ತದಲ್ಲಿ ಭೋವಿ ಸಮಾಜದ ಬೆಂಬಲಿಗರು ಸಂಭ್ರಮಾಚರಣೆ ನಡೆಸಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ | Karnataka Cabinet expansion : 24 ನೂತನ ಸಚಿವರ ಸೇರ್ಪಡೆ: ಭರ್ತಿ ಸಂಪುಟದೊಂದಿಗೆ ಅಗ್ನಿ ಪರೀಕ್ಷೆಗಿಳಿದ ಸಿದ್ದರಾಮಯ್ಯ!
ಗದಗದಲ್ಲಿ ಎಚ್.ಕೆ.ಪಾಟೀಲ್ ಅಭಿಮಾನಿಗಳ ಸಂಭ್ರಮ
ಗದಗ: ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಹಳೇ ಬಸ್ ನಿಲ್ದಾಣ ಬಳಿ ಅಭಿಮಾನಿಗಳು ಹಾಗೂ ಹಲವು ಆಟೋ ಚಾಲಕರ ಸಂಘದ ಸದಸ್ಯರು ಸಂಭ್ರಮಾಚರಣೆ ನಡೆಸಿದರು.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ6 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ9 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ21 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕರ್ನಾಟಕ21 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
ಕ್ರಿಕೆಟ್22 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ20 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ