Site icon Vistara News

MTB‌ Nagaraj: ಹೊಸಕೋಟೆಯಲ್ಲಿ ಮುಂದುವರಿದ ರಾಜಕೀಯ ವೈಷಮ್ಯ; ವೃತ್ತದಲ್ಲಿ ಅಳವಡಿಸಿದ್ದ ಎಂಟಿಬಿ ಬೋರ್ಡ್‌ ಧ್ವಂಸ

Mtb Circle Hosakote

Mtb Circle Hosakote

ಹೊಸಕೋಟೆ: ಜಿದ್ದಾಜಿದ್ದಿನ ಕಣವಾಗಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ (Karnataka Election) ಮುಗಿದ್ದರೂ, ರಾಜಕೀಯ ವೈಷಮ್ಯ ಮುಂದುವರಿದಿದೆ. ಇಲ್ಲಿನ ಪಾರ್ವತಿಪುರ ಸರ್ಕಲ್‌ನಲ್ಲಿ ಅಳವಡಿಸಿದ್ದ ಎಂಟಿಬಿ ವೃತ್ತ (MTB‌ Circle) ಎಂಬ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ರಾಜಕೀಯ ವೈಷಮ್ಯದಿಂದ ಕೆಲವರು ಹೀಗೆ ಮಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್‌ (MTB‌ Nagaraj) ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕಿಡಿಗೇಡಿಗಳ ಕೃತ್ಯ

2021ರಲ್ಲಿ ಪಾರ್ವತಿಪುರದ ಮಧ್ಯ ಭಾಗದಲ್ಲಿರುವ ವೃತ್ತಕ್ಕೆ ಅಲ್ಲಿನ ಸ್ಥಳೀಯ ನಿವಾಸಿಗಳು ಹಾಗೂ ವಾರ್ಡ್‌ನ ನಗರಸಭಾ ಸದಸ್ಯರ ಮನವಿ ಮೇರೆಗೆ ಎಂ.ಟಿ.ಬಿ ವೃತ್ತ ಎಂದು ಹೆಸರಿಡಲಾಗಿತ್ತು. ಅಂದರಂತೆ ಪಾರ್ವತಿಪುರದ ವೃತ್ತದಲ್ಲಿ ಎಂಟಿಬಿ ಸರ್ಕಲ್‌ ನಾಮಫಲಕವನ್ನು ಅಳವಡಿಸಲಾಗಿತ್ತು. ಆದರೆ ಸೋಮವಾರ (ಮೇ 15) ಮುಂಜಾನೆಯಂದು ಮೂವರು ಕಿಡಿಗೇಡಿಗಳು ನಾಮಫಲಕವನ್ನು ಧ್ವಂಸ ಮಾಡಿದ್ದಾರೆ. ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಾರ್ವತಿಪುರದಲ್ಲಿ ಅಳವಡಿಸಿದ್ದ ಎಂಟಿಬಿ ಸರ್ಕಲ್‌ ಎಂಬ ಬೋರ್ಡ್‌

ಕಿಡಿಗೇಡಿಗಳ ಈ ಕೃತ್ಯಕ್ಕೆ ಕಿಡಿಕಾರಿರುವ ಎಂಟಿಬಿ ಬೆಂಬಲಿಗರು ಪ್ರತಿಭಟಿಸಲು ಸಜ್ಜಾಗಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ದಾಂಧಲೆಕೋರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವೃತ್ತದಲ್ಲಿ ಅಳವಡಿಸಿದ್ದ ಬೋರ್ಡ್‌ ಕಿತ್ತುಹಾಕಿರುವ ಕಿಡಿಗೇಡಿಗಳು

ಭಾನುವಾರವಷ್ಟೇ (ಮೇ 14ರಂದು) ಪಟಾಕಿ ವಿಚಾರಕ್ಕೆ ಡಿ. ಶೆಟ್ಟಹಳ್ಳಿ ಗ್ರಾಮದಲ್ಲಿ ಬಿಜೆಪಿ ಬೆಂಬಲಿಗನ ಹತ್ಯೆ ನಡೆದಿತ್ತು. ಬೂದಿಮುಚ್ಚಿದ ಕೆಂಡದಂತಾಗಿದ್ದ ಹೊಸಕೋಟೆಯಲ್ಲಿ ಇದೀಗ ಎಂಟಿಬಿ ವೃತ್ತದ ನಾಮಫಲಕವನ್ನು ಧ್ವಂಸ ಮಾಡಲಾಗಿದೆ. ಇದೆಲ್ಲ ಕಾಂಗ್ರೆಸ್‌ ಬೆಂಬಲಿಗರ ಕೃತ್ಯ ಎಂದು ಬಿಜೆಪಿ ಬೆಂಬಲಿಗರು ಆರೋಪಿಸಿದ್ದಾರೆ.

ಹೊಸಕೋಟೆಯಲ್ಲಿ ಮುಂದುವರಿದ ದಾಂಧಲೆ

ಪಟಾಕಿ ವಿಚಾರಕ್ಕೆ ಹತ್ಯೆ

ಇಲ್ಲಿನ ಡಿ. ಶೆಟ್ಟಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಬಿಜೆಪಿಯ ಬೆಂಬಲಿಗನೊಬ್ಬ ಉಸಿರು ಚೆಲ್ಲಿದ್ದ. ಕೊಡಲಿ ಬೀಸಿ ದೊಡಪ್ಪನನ್ನೇ ಆದಿತ್ಯ ಎಂಬಾತ ಹತ್ಯೆ ಮಾಡಿದ್ದ. ಬಿಜೆಪಿಯ ಬೆಂಬಲಿಗ ಕೃಷ್ಣಪ್ಪ (56) ಮೃತಪಟ್ಟಿದ್ದರು.

ಕೃಷ್ಣಪ್ಪ ಕುಟುಂಬದವರು ಬಿಜೆಪಿ ಬೆಂಬಲಿಗರಾದರೆ, ಕೃಷ್ಣಪ್ಪನ ಸಹೋದರ ಗಣೇಶಪ್ಪ ಎಂಬಾತ ಕಾಂಗ್ರೆಸ್‌ ಬೆಂಬಲಿಗರು. ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಬಿಜೆಪಿಯ ಎಂ.ಟಿ.ಬಿ. ನಾಗರಾಜ್‌ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಶರತ್‌ ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದರು.

ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದ್ದರು. ಈ ವೇಳೆ ಕೃಷ್ಣಪ್ಪನವರ ಮನೆಯ ಕಾಂಪೌಂಡ್‌ ಒಳಗೆ ಪಟಾಕಿಯನ್ನು ಎಸೆದಿದ್ದರು. ಕೃಷ್ಣಪ್ಪನವರು ಇದನ್ನು ಪ್ರಶ್ನೆ ಮಾಡಿದಾಗ ಮಾತಿನ ಚಕಮಕಿ ನಡೆದಿತ್ತು. ಸಹೋದರರಾಗಿರುವ ಕೃಷ್ಣಪ್ಪ ಹಾಗೂ ಗಣೇಶಪ್ಪನವರು ಇದೆ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಬಳಿಕ ವಿಷಯ ತಣ್ಣಗೆ ಆಯಿತು ಎನ್ನುವಾಗಲೇ ಕೃಷ್ಣಪ್ಪನವರ ಮಗ ಪ್ರಶ್ನೆ ಮಾಡಲು ಬಂದಾಗ ಗಣೇಶಪ್ಪನ ಮಗ ಆದಿತ್ಯ ಕೈ ಕೈ ಮಿಲಾಯಿಸಿದ್ದರು. ಈ ವೇಳೆ ಸಿಟ್ಟಿಗೆದ್ದ ಆದಿತ್ಯ ಕೊಡಲಿ ತೆಗೆದುಕೊಂಡು ದೊಡ್ಡಪ್ಪ ಕೃಷ್ಣಪ್ಪನನ್ನೇ ಹತ್ಯೆ ಮಾಡಿ ಪರಾರಿ ಆಗಿದ್ದ.

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟಿಗೆ ಏನು ಕಾರಣ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ!

ಶಾಸಕರ ಕುಮ್ಮಕ್ಕಿಲ್ಲದೆ ಇವೆಲ್ಲ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಜತೆಗೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಆಗ್ರಹಿಸಿದ್ದರು..

Exit mobile version