ನವದೆಹಲಿ: ಮುಡಾ ಹಗರಣದಲ್ಲಿ (Muda Scam) ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈ ಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನವದೆಹಲಿಯಲ್ಲಿ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾತನಾಡಿ, ಸಿಎಂ, ಡಿಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ಆಗಿದ್ದು, ಬಿಜೆಪಿಯವರು ರಾಜ್ಯಪಾಲರನ್ನು ಕೈಗೊಂಬೆಯಾಗಿ ಮಾಡಿಕೊಂಡು ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ನೋಡುತ್ತಿದ್ದೇವೆ. ಐದು ಗ್ಯಾರಂಟಿಗಳ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ. ಇದು ಸಿಎಂ, ಡಿಸಿಎಂ ಮೇಲಿನ ದಾಳಿ ಅಲ್ಲ, ಇದು ಕರ್ನಾಟಕದ ಜನರ ಮೇಲಿನ ದಾಳಿಯಾಗಿದೆ. ಪ್ರಧಾನಿ, ಗೃಹ ಸಚಿವರು ರಾಜ್ಯಪಾಲರನ್ನು ಬಳಸಿ ಕರ್ನಾಟಕದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಯತ್ನ ಮಾಡುತ್ತಿದ್ದಾರೆ. ರಾಜ್ಯಪಾಲರು ಬಿಜೆಪಿ, ಜೆಡಿಎಸ್‌ನವರ ಮೇಲಿನ ವರ್ಷಗಳ ಹಿಂದಿನ ಪ್ರಕರಣಗಳ ತನಿಖೆಗೆ ಯಾಕೆ ಆದೇಶ ನೀಡಿಲ್ಲ ಎಂದು ಕಿಡಿಕಾರಿದರು.
ಈ ಪ್ರಕರಣದಲ್ಲಿ ನಾವು ಎಲ್ಲರೂ ಸಿಎಂ ಬೆನ್ನಿಗೆ ಇದ್ದೇವೆ. ಪ್ರಕರಣದಲ್ಲಿ ನಡೆಯುತ್ತಿರುವ ಕುತಂತ್ರದ ಬಗ್ಗೆ ರಾಷ್ಟ್ರಪತಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಇವತ್ತು ನಾವು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೇವೆ. ನಮ್ಮ ಸರ್ಕಾರ ಅಭದ್ರಗೊಳಿಸಲು ಪ್ರಯತ್ನ ನಡೆಯುತ್ತಿದೆ. ಈ ವಿಚಾರವಾಗಿ ನಾವು ಮನದಟ್ಟು ಮಾಡಿದ್ದೇವೆ. ಬಡವರಿಗಾಗಿ ಹೋರಾಟ ಮಾಡಿ ಅಂತ ಹೈಕಮಾಂಡ್ ಹೇಳಿದೆ. ರಾಷ್ಟ್ರ ಮತ್ತು ರಾಜ್ಯ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಇದೆ ಎಂದು ಹೇಳಿದರು.
ಇದನ್ನೂ ಓದಿ | 7th pay commission : 7ನೇ ವೇತನ ಆಯೋಗ ಜಾರಿ ಬಳಿಕ ನೌಕರರ ಸಂಬಳ ಏರಿಕೆ ಎಷ್ಟು? ಅಧಿಕೃತ ಪಟ್ಟಿ ಬಿಡುಗಡೆ
ಸಿಎಂ ಸಿದ್ದರಾಮಯ್ಯ ಮಾತನಾಡಿ, ಹೈಕಮಾಂಡ್‌ಗೆ ಧನ್ಯವಾದ ತಿಳಿಸುತ್ತೇವೆ. ಅಧ್ಯಕ್ಷರಾದ ಖರ್ಗೆ ಹಾಗೂ ರಾಹುಲ್ ಗಾಂಧಿಗೆ ಧನ್ಯವಾದಗಳು. ನಾವು ನ್ಯಾಯಾಲಯ ಮತ್ತು ಕಾನೂನು ನಂಬಿದ್ದೇವೆ. ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದೆ ಎಂದು ತಿಳಿಸಿದರು.