Site icon Vistara News

MUDA site scandal: ಪತ್ನಿಗೆ ಕಾನೂನು ಪ್ರಕಾರವೇ ಮುಡಾ ಸೈಟ್‌; ಬಿಜೆಪಿ ಕಾಲದಲ್ಲೇ ನೀಡಲಾಗಿತ್ತು ಎಂದ ಸಿದ್ದರಾಮಯ್ಯ

MUDA site Cm Siddaramaiah says his wife was given MUDA site during BJP regimescandal

ಬೆಂಗಳೂರು: ಮೈಸೂರಿನಲ್ಲಿ ಮುಡಾ ನಿವೇಶನ ಹಂಚಿಕೆ ಹಗರಣದ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರದ ಆದೇಶ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೂ ಮುಡಾ ಸೈಟ್‌ (MUDA site scandal) ಹಂಚಿಕೆಯಾಗಿದೆ ಎಂಬ ವಿಷಯ ತಿಳಿದುಬಂದಿದೆ. ಪತ್ನಿಗೆ ನೀಡಿರುವ 50:50 ಅನುಪಾತದ ನಿವೇಶನಗಳ ಬಗ್ಗೆ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಇದ್ದ ಜಾಗವನ್ನು 1997ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದು, ಆ ಭೂಮಿಗೆ 2021ರಲ್ಲಿ ಪರಿಹಾರ ಕೊಟ್ಟಿತ್ತು ಎನ್ನಲಾಗಿದೆ. ಈ ಬಗ್ಗೆ ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನಿವೇಶನ ಹಂಚಿಕೆ ಬಿಜೆಪಿಯವರ ಕಾಲದಲ್ಲಿ ಆಗಿದ್ದು, ನನ್ನ ಹೆಂಡತಿಗೆ ಈ ಹಿಂದೆಯೇ ಸೈಟ್ ಹಂಚಲಾಗಿತ್ತು. 3 ಎಕರೆ 16 ಗುಂಟೆ ಜಮೀನು ನನ್ನ ಹೆಂಡತಿ ಹೆಸರಲ್ಲಿತ್ತು. ನನ್ನ ಬಾಮೈದ ತೆಗೆದಕೊಂಡಿದ್ದ ಜಾಗವನ್ನು ನನ್ನ ಹೆಂಡತಿಗೆ ದಾನ ಕೊಟ್ಟಿದ್ದ. ಅದನ್ನು ನಾನು ಅಧಿಕಾರದಲ್ಲಿ ಇದ್ದಾಗ ಖರೀದಿ ಮಾಡಿರಲಿಲ್ಲ‌. ಕಾನೂನಿನ ಪ್ರಕಾರವೇ ನಮಗೆ ಸೈಟ್‌ ಹಂಚಿದ್ದಾರೆ ಎಂದು ತಿಳಿಸಿದ್ದಾರೆ.

ಕಾನೂನು ಪ್ರಕಾರವೇ ನಮಗೆ 50:50 ನಿವೇಶನ ಕೊಡುವುದಾಗಿ ಮುಡಾದವರು ಹೇಳಿದ್ದರು. ಮಲ್ಲಿಕಾರ್ಜುನ್ ಎಂಬ ನನ್ನ ಬಾಮೈದ ಹರಿಶನ ಕುಂಕುಮ ಕೊಡುವಾಗ ನನ್ನ ಪತ್ನಿಗೆ ಗಿಫ್ಟ್ ಕೊಟ್ಟಿದ್ದ. ಆದರೆ ಅದನ್ನು ಮುಡಾದವರು ಸೈಟ್ ಮಾಡಿ ಹಂಚಿಬಿಟ್ಟರು. ಬಳಿಕ ನಮಗೆ ಜಮೀನು ಇಲ್ಲದಂತಾಯಿತು. ಅದಕ್ಕೆ ಮುಡಾದವರು ಬೇರೆ ಕಡೆ 50:50 ಸೈಟ್‌ ಕೊಟ್ಟಿದ್ದಾರೆ, ಇದು ತಪ್ಪಾ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

2021ರಲ್ಲಿ ನಿವೇಶನ ಹಂಚಿಕೆ

1997ರ ಆಗಸ್ಟ್ 20 ರಂದು ಮೈಸೂರು ತಾಲೂಕು ಕೆಸೆರೆ ಗ್ರಾಮದ ಸರ್ವೆ ನಂ.464ರಲ್ಲಿನ ಸಿಎಂ ಪತ್ನಿ ಪಾರ್ವತಮ್ಮ ಅವರ 3.16 ಎಕರೆ ಭೂಮಿಯನ್ನು ದೇವನೂರು ಮೂರನೇ ಹಂತ ಬಡವಾಣೆ ಅಭಿವೃದ್ಧಿಗೆ ನೋಟಿಫೈ ಮಾಡಲಾಗಿತ್ತು. ಈ ಭೂಮಿಗೆ ಪರಿಹಾರವಾಗಿ 2021ರ ಅಕ್ಟೋಬರ್ 29 ರಂದು 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ 38,284 ಚದರ ಅಡಿ ಅಳತೆಯ ನಿವೇಶನವನ್ನು ಸಿಎಂ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಹಂಚಿಕೆ ಮಾಡಲಾಗಿತ್ತು.

Exit mobile version