Site icon Vistara News

ಮೋದಿ ಮನಗೆದ್ದ ಮುಧೋಳ ಶ್ವಾನ: ಬಾಗಲಕೋಟೆಯ ಧೀರರಿಗೀಗ ಪ್ರಧಾನಿಯನ್ನು ಕಾಯುವ ಕಾಯಕ

ಮುಧೋಳ ಶ್ವಾನ

ಬಾಗಲಕೋಟೆ : ಪ್ರಧಾನಿ ನರೇಂದ್ರ ಮೋದಿ ಅವರ ಎಸ್ ಪಿ ಜಿ ಭದ್ರತಾ ತಂಡಕ್ಕೆ ಮುಧೋಳ ಶ್ವಾನ ಸೇರ್ಪಡೆ ಆಗಿದೆ. ಇದು ಮುಧೋಳ ಶ್ವಾನಕ್ಕೆ ಸಂದ ಮತ್ತೊಂದು ಗೌರವ ಆಗಿದೆ.

ಎರಡು ತಿಂಗಳ ಎರಡು ಗಂಡು ಮುಧೋಳ ಶ್ವಾನಗಳನ್ನು ಪ್ರಧಾನಿ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಪಡೆಯ ಅಧಿಕಾರಿಗಳು ಒಯ್ದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರ ಬಳಿ ಇರುವ ಶ್ವಾನ ಸಂಶೋಧನಾ ಕೇಂದ್ರದಿಂದ ಶ್ವಾನ ಹಸ್ತಾಂತರ ಮಾಡಲಾಗಿತ್ತು.

ವೆಟರ್ನರಿ ವೈದ್ಯ ಡಾ ಬಿಎಮ್ ಪಂಚಬುದ್ದೆ ಹಾಗೂ ಇಬ್ಬರು ಶ್ವಾನ ತರಬೇತುದಾರರು ಪ್ರಧಾನಿ ಎಸ್‌ಪಿಜಿ ಭದ್ರತಾ ಪಡೆಯಿಂದ ಮುಧೋಳ ಶ್ವಾನ ಸಂವರ್ಧನಾ ಕೇಂದ್ರಕ್ಕೆ ಬಂದಿದ್ದರು. ಏಪ್ರಿಲ್‌ 25ರಂದೇ ಎರಡು ಶ್ವಾನಗಳನ್ನು ಹಸ್ತಾಂತರಿಸಲಾಗಿತ್ತು. ಧಾರವಾಡ ಹಾಗೂ ಬಾಗಲಕೋಟೆ ಎಸ್ ಪಿ, ಜಿಲ್ಲಾಡಳಿತ ಸಂಪರ್ಕದ ಮೂಲಕ ಅಧಿಕಾರಿಗಳು ಬಂದಿದ್ದರು.

ಸಂವರ್ಧನಾ ಕೇಂದ್ರದಲ್ಲಿ ಒಂದು ತಾಸು ಶ್ವಾನಗಳ ಪರೀಕ್ಷೆ ನಡೆದಿದ್ದು, ಆರೋಗ್ಯ, ಶ್ವಾನಗಳ ಲಕ್ಷಣ, ಓಟ, ಸಮಯಪ್ರಜ್ಞೆ, ಬುದ್ಧಿ, ಚಾಕಚಕ್ಯತೆ ಬಗ್ಗೆ ಅಧಿಕಾರಿಗಳು ಹಾಗೂ ಶ್ವಾನ ತರಬೇತುದಾರರು ತಿಳಿದುಕೊಂಡಿದ್ದರು. ನಂತರ ಅಧಿಕಾರಿಗಳು ಶ್ವಾನ ಒಯ್ದಿದ್ದರು. ಎಸ್‌ಪಿಜಿ ಭದ್ರತಾ ಪಡೆಯಲ್ಲಿ ತರಬೇತಿ ನೀಡಿ ಬಳಕೆ ಮಾಡಿದ್ದರು. ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಗೌಪ್ಯವಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಹಿಂದೊಮ್ಮೆ ಮನ್ ಕಿ ಬಾತ್‌ನಲ್ಲಿಯೂ ಮುಧೋಳ ಶ್ವಾನದ ಬಗ್ಗೆ ಮೋದಿ ಅವರು ಮಾತನಾಡಿದ್ದರು. ಈಗಾಗಲೇ ಭಾರತೀಯ ಸೇನೆ, ಸಿಆರ್‌ಪಿಎಫ್, ಐಡಿಬಿಪಿ, ವಾಯುಸೇನೆಯಲ್ಲೂ ಮುಧೋಳ ನಾಯಿಗಳಿವೆ. ಮುಧೋಳ ಶ್ವಾನ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಸುಶಾಂತ ಹಂಡಗೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ: ಮಾಲೀಕನ ಅಗಲಿಕೆಗೆ ನೊಂದು ಕಣ್ಣೀರಾದ ಶ್ವಾನ

Exit mobile version