ಸಿರುಗುಪ್ಪ: ಮೊಹರಂ ಹಬ್ಬದ [ Muharram 2022 ] ಈ ಗ್ರಾಮದಲ್ಲೊಂದು ವಿಶಿಷ್ಟ ಆಚರಣೆಯು ಎಲ್ಲರ ಗಮನ ಸೆಳೆಯುತ್ತಿದೆ. ಮೊಹರಂ ಆಚರಣೆಗೆ ಮೊದಲು ಸಂಪ್ರದಾಯದಂತೆ ಬೆಂಕಿ ಕೆಂಡ ನಿರ್ಮಾಣ ಸಂಬಂಧ ಗುದ್ದಲಿಯಿಂದ ಗುಂಡಿ ತೋಡಿದ ನಂತರದ 10 ದಿನಗಳ ಕಾಲ ಗ್ರಾಮದಲ್ಲಿ ಮದ್ಯ, ಮಾಂಸ ನಿಷೇಧ, ಹೆಣ್ಣು ಮಕ್ಕಳು ಹೂ ಮುಡಿಯುವಂತಿಲ್ಲ, ಗ್ರಾಮಸ್ಥರು ಚಪ್ಪಲಿ ಮೆಟ್ಟುವಂತಿಲ್ಲ. ಜತೆಗೆ ಗಂಡ-ಹೆಂಡತಿ ಕೂಡುವಂತಿಲ್ಲ!
ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದಲ್ಲಿ ಇಂಥದ್ದೊಂದು ವಿಶಿಷ್ಟ ಆಚರಣೆ ಇದ್ದು, ಇಂತಹ ನಿಯಮಗಳನ್ನು ಪಾಲಿಸುವ ಈ ಗ್ರಾಮಸ್ಥರು ಮೊಹರಂ ಹಬ್ಬವನ್ನು 10 ದಿನಗಳ ಕಾಲ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ.
ಮೊಹರಂ ಎಲ್ಲ ಕಡೆಗಳಲ್ಲಿಯೂ 9ನೇ ದಿನ ರಾತ್ರಿ ಆಚರಣೆ ಮಾಡಿದರೆ ಗ್ರಾಮದಲ್ಲಿ 7ನೇ ದಿನ ಆಚರಣೆಯನ್ನು ಹಗಲು ಹೊತ್ತಿನಲ್ಲಿಯೇ ಆಚರಿಸುವುದು ಇಲ್ಲಿನ ವಿಶಿಷ್ಟತೆ. ಗ್ರಾಮಸ್ಥರು ಪೀರಲದೇವರ ದೇವಸ್ಥಾನದ ಹತ್ತಿರದ ಅಂಗಳದಲ್ಲಿ ಪೀರಲ ದೇವರ ಕುರಿತಾದ ಮೇಲ್ಪದಗಳನ್ನು ಹಾಡುತ್ತಾರೆ. ಹಾಡುಗಾರರ ಹಾಡಿಗೆ ಭಕ್ತರು ಕೈಯಲ್ಲಿ ಸಣ್ಣ ಬಿಂದಿಗೆ ಹಿಡಿದು ಹೆಜ್ಜೆ ಹಾಕುತ್ತಾ ಸುತ್ತು ಹಾಕುತ್ತಾ ಹಾಡುವುದು ಇಲ್ಲಿನ ಮತ್ತೊಂದು ವಿಶೇಷತೆ.
ಇದನ್ನೂ ಓದಿ | Muharram 2022 | ಭಾವೈಕ್ಯತೆಯೊಂದಿಗೆ ಹಿಂದೂಗಳಿಂದ ಮೊಹರಂ ಆಚರಣೆ
7ನೇ ದಿನದಂದು ಮಧ್ಯಾಹ್ನದ ನಂತರ ಮಸೀದಿ ಮುಂದೆ ಹಲಗೆ ಬಾರಿಸುತ್ತಾ ಅಲಾಯಿ ಕುಣಿಯುತ್ತಾ ಮೈ ಮರೆಯುತ್ತಾರೆ. ಕೈಗಳಲ್ಲಿ ವಿವಿಧ ಬಣ್ಣಗಳ ಧ್ವಜಗಳನ್ನು ಹಿಡಿದಿರುತ್ತಾರೆ. ನಂತರ ಲಿಂಗಾಯಿತ ಸಮಾಜದ ದೇವರು ಹಿಡಿಯುವ ಬಸಪ್ಪ ತಾತನ ಕುಟುಂಬದ ಸದಸ್ಯರನ್ನು ಕರೆತರಲು ಹೊರಡುತ್ತಾರೆ. ತಾತನನ್ನು ಖೆಡ್ಡಾ ಬಸ್ತಿಯಿಂದ ಮಸೀದಿಗೆ ಕರೆತರಲು ಮುಂದೆ ಸಾಗಿ ಪುನಃ ಹೊನ್ನಪ್ಪನ ಕಟ್ಟೆಗೆ ಬಂದು ಕಾಯಿ ಕರ್ಪೂರ ಸಲ್ಲಿಸುತ್ತಾರೆ.
ಎಲ್ಲ ದೇವಸ್ಥಾನಗಳಿಗೆ ಭೇಟಿ :
ಮಸೀದಿಯಲ್ಲಿದ್ದ ದೇವರುಗಳನ್ನು ಇಬ್ಬರ ಕೈಯಲ್ಲಿ ಕೊಟ್ಟು ನಂತರ ಅಲಾಯಿ ಆಟವಾಡುತ್ತಾ ಪೀರಲ ದೇವರ ಮೆರವಣಿಗೆಯು ಊರಲ್ಲಿ ಸವಾರಿ ಹೊರಡುತ್ತದೆ. ಗ್ರಾಮದಲ್ಲಿರುವ ಎಲ್ಲ ದೇವಸ್ಥಾನಗಳಿಗೂ ಪೀರಲ ದೇವರು ತೆರಳಿ ಪೂಜೆ ಸಲ್ಲಿಸಿ ನಂತರ ಮಸೀದಿಗೆ ಬರುತ್ತಾರೆ. ಮೊಹರಂ ಹಬ್ಬದ 3ನೇ ದಿನದಂದು ಅಲಾಯಿ ಕುಣಿಯನ್ನು ತೆಗೆದು ವಿವಿದ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡಿರುತ್ತಾರೆ. 7ನೇ ಸರಗಸ್ತಿಯ ದಿನದವರೆಗೂ ಹೂವಿನ ಅಲಂಕಾರವಿರುತ್ತದೆ.
ಈ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಮೊಹರಂ ಹಬ್ಬಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಸೀಮಾಂಧ್ರ ಪ್ರದೇಶದಿಂದ ಸಾವಿರಾರು ಜನ ಬರುತ್ತಾರೆ. ನಮ್ಮ ಗ್ರಾಮದಲ್ಲಿ ಮೊಹರಂ ಸಂದರ್ಭದಲ್ಲಿ ಹಬ್ಬದ ವಾತಾವರಣ ಇರುತ್ತದೆ.
ಇದನ್ನೂ ಓದಿ | Muharram 2022 | ಈ ಮಠದಲ್ಲಿ ಆಚರಿಸುತ್ತಾರೆ ಮೊಹರಂ! ಇಲ್ಲಿದೆ ಭಾವೈಕ್ಯತೆಯ ಸಂಗಮ