ಕೋಲಾರ: ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಂಡ ಬಳಿಕ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯ ನಕಲಿ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಲಾಗಿದೆ. ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಿಂಗಾಪುರ್ ಗೋವಿಂದ (Singapur Govind) ಅವರ ನಕಲಿ ಪರಿಶಿಷ್ಟ ಜಾತಿ (ಬುಡ್ಗ ಜಂಗಮ) ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರದ್ದು ಮಾಡಿದೆ.
2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಎಸ್‌ಸಿ ಬುಡ್ಗ ಜಂಗಮ ನಕಲಿ ಜಾತಿ ಪ್ರಮಾಣ ಪತ್ರ ರದ್ದುಗೊಂಡಿತ್ತು. ಇದೀಗ ಅವರ ಸಂಬಂಧಿಯಾಗಿರುವ ಸಿಂಗಾಪುರ್ ಗೋವಿಂದ ಅವರ ಪರಿಶಿಷ್ಟ ಜಾತಿ ಪತ್ರವನ್ನು ರದ್ದುಗೊಳಿಸಿ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜ ಆದೇಶ ಹೊರಡಿಸಿದ್ದಾರೆ.
ಸಿಂಗಾಪುರ್ ಗೋವಿಂದು 2005ರಲ್ಲಿ ಮುಳಬಾಗಿಲು ತಹಸೀಲ್ದಾರ್ ಕಚೇರಿ ಮೂಲಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಹಾಗೆಯೇ ಅವರ ಮಗ ಕೃಷ್ಣದೇವರಾಯ ಜಾತಿ ಪ್ರಮಾಣ ಪತ್ರದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ವಿಚಾರಣೆ ನಡೆಸಿರುವ ಕೋಲಾರ ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ ಅವರ ಸಂಬಂಧಿಯಾಗಿರುವ ಸಿಂಗಾಪುರ್ ಗೋವಿಂದು ಬುಡ್ಗ ಜಂಗಮ ಜಾತಿ ಪತ್ರವನ್ನು ರದ್ದು ಪಡಿಸಲಾಗಿದೆ.
ಗುಪ್ತ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಸಿಂಗಾಪುರ್ ಗೋವಿಂದು ಅವರ ನೈಜ ಪ್ರಮಾಣ ಪತ್ರಗಳನ್ನು ಪರಿಶೀಲನೆ ನಡೆಸಿದ ವೇಳೆ ದಾಖಲೆಗಳು ಸಲ್ಲಿಸಲು ಹಲವು ಬಾರಿ ಅವಕಾಶ ನೀಡಿದ್ದರೂ ಯಾವುದೇ ನೈಜ ಪ್ರಮಾಣಪತ್ರ ನೀಡಿರಲಿಲ್ಲ. ಹೀಗಾಗಿ ಸಿಂಗಾಪುರ್ ಗೋವಿಂದು ಜಾತಿ ಪತ್ರವನ್ನು ಜಿಲ್ಲಾ ಪರಿಶೀಲನೆ ಸಮಿತಿ ರದ್ದುಗೊಳಿಸಿದೆ.
ಇದನ್ನೂ ಓದಿ | Tender Scam: ಕಾಂಗ್ರೆಸ್ ಬಳಿ ಆಧಾರವಿದ್ದರೆ ಎಸಿಬಿ, ಲೋಕಾಯುಕ್ತಕ್ಕೆ ಕೊಡಲಿ: ಟೆಂಡರ್ ಅಕ್ರಮ ಆರೋಪ ಕುರಿತು ಸಿ.ಟಿ. ರವಿ ಪ್ರತಿಕ್ರಿಯೆ
ಈ ಹಿಂದೆ 2013ರ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಪಡೆದು ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ಅವರು ಮೂಲತಃ ಹಿಂದುಳಿದ ವರ್ಗದ (ಒಬಿಸಿ) ಬೈರಾಗಿ ಸಮುದಾಯದವರಾಗಿದ್ದರು. ಆದರೆ, ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಎಸ್‌ಸಿ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜೆಡಿಎಸ್ ಅಭ್ಯರ್ಥಿ ಮುನಿ ಆಂಜಿನಪ್ಪ ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದರು.
ನಂತರ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಐದು ವರ್ಷಗಳ ವಿಚಾರಣೆ ಬಳಿಕ 2018 ಏಪ್ರಿಲ್‌ನಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ ಅವರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. 2013ರ ಚುನಾವಣೆ ಬಳಿಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿತ್ತು.