Site icon Vistara News

Multispeciality hospital ಕೊಡ್ಸಿ ಸ್ವಾಮೀ, ಕಾರವಾರದಿಂದ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಚಳವಳಿ

BLOOD LETTER

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಕಾರವಾರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಚಳವಳಿ ನಡೆಯಿತು. ನಗರದ ಎಂಜಿ ರಸ್ತೆಯಲ್ಲಿರುವ ನಗರಸಭೆಯ ಗಾಂಧಿ ಉದ್ಯಾನವನದ ಎದುರು ಜಮಾಯಿಸಿದ ಸಾರ್ವಜನಿಕರು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದರು.

85 ವರ್ಷದ ಹಿರಿಯ ಮಹಿಳೆ ಅಜಮತ್ ಎಂಬುವವರು ತಮ್ಮ ರಕ್ತದಲ್ಲಿ ಪ್ರಥಮ ಪತ್ರ ಬರೆಯುವ ಮೂಲಕ ಚಳವಳಿಗೆ ಚಾಲನೆ ನೀಡಿದರು. ಜೊತೆಗೆ 8 ತಿಂಗಳ ಗರ್ಭಿಣಿ ಪ್ರಶಾಂತಿ ನಾಯ್ಕ ಎಂಬುವವರು ಸಹ ತಮ್ಮ ರಕ್ತದಲ್ಲಿ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನಸಾಮಾನ್ಯರು ರಕ್ತ ಪತ್ರ ಚಳವಳಿಯಲ್ಲಿ ಭಾಗವಹಿಸಿ ರಕ್ತದಲ್ಲಿ ಪತ್ರ ಬರೆದು ಪ್ರಧಾನಿಗೆ ಕಳುಹಿಸಿದರು.

ಸದ್ಯ ರಕ್ತ ಪತ್ರ ಚಳವಳಿ ನಡೆಸುತ್ತಿದ್ದು, ಆದಷ್ಟು ಶೀಘ್ರದಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲೂ ಸಿದ್ಧರಿದ್ದೇವೆ. ಪ್ರಧಾನಿ ಮೋದಿ ಅವರು ಜಿಲ್ಲೆಯ ಜನರ ಬೇಡಿಕೆಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ತೀವ್ರಗೊಂಡ ಹೋರಾಟ
ಉತ್ತರ ಕನ್ನಡಕ್ಕೊಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಬಹು ವರ್ಷಗಳಿಂದಲೇ ಇದೆ. ಕಳೆದ ವರ್ಷವೂ ಅದು ಒಮ್ಮೆ ತೀವ್ರಗೊಂಡು ತಣ್ಣಗಾಗಿತ್ತು. ಆದರೆ, ಇತ್ತೀಚೆಗೆ ಶಿರೂರು ಟೋಲ್‌ಗೇಟ್‌ನಲ್ಲಿ ನಡೆದ ಒಂದು ಅಪಘಾತ ಈ ಬೇಡಿಕೆ ದೊಡ್ಡ ಮಟ್ಟದಲ್ಲಿ ಚಿಗಿತು ಹೋರಾಟದ ರೂಪ ಪಡೆದುಕೊಳ್ಳುವುದಕ್ಕೆ ಕಾರಣವಾಯಿತು. ಹೊನ್ನಾವರದಿಂದ ಮಣಿಪಾಲ ಆಸ್ಪತ್ರೆಗೆ ರೋಗಿಯೊಬ್ಬರನ್ನು ಹೊತ್ತು ಅತಿವೇಗವಾಗಿ ಧಾವಿಸುತ್ತಿರುವ ವೇಳೆ ಟೋಲ್‌ಗೇಟ್‌ನಲ್ಲಿ ಅವಘಡ ಸಂಭವಿಸಿ ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಿಯಾದ ಆಸ್ಪತ್ರೆ ಇಲ್ಲದೆ ಇರುವುದರಿಂದ ಭಾರಿ ಸಮಸ್ಯೆ ಆಗುತ್ತಿರುವುದನ್ನು ಮನಗಂಡಿರುವ ಜನರೂ ದೊಡ್ಡ ಮಟ್ಟದ ಹೋರಾಟಕ್ಕೆ ಇಳಿದಿದ್ದಾರೆ. ಉತ್ತರ ಕನ್ನಡ ಮಾತ್ರವಲ್ಲದೆ, ಬೆಂಗಳೂರಿನಲ್ಲಿ ಕೂಡಾ ಹೋರಾಟ ನಡೆಯುತ್ತಿದೆ. ಈ ನಡುವೆ ಮುಂದಿನ ವಾರ ಉತ್ತರ ಕನ್ನಡಕ್ಕೆ ಭೇಟಿ ನೀಡುವ ವೇಳೆ ಶುಭ ಸುದ್ದಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು.

Exit mobile version