Site icon Vistara News

ಕರಾವಳಿಯಲ್ಲಿ ಸರಣಿ ಹತ್ಯೆ: ಗನ್‌ಮ್ಯಾನ್‌ ನೀಡುವಂತೆ ನಗರಸಭೆ ಸದಸ್ಯನಿಂದ ಮನವಿ

ಕರಾವಳಿಯಲ್ಲಿ ಸರಣಿ ಹತ್ಯೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಮೂರು ಬರ್ಬರ ಹತ್ಯೆಗಳಾಗಿವೆ. ಕೋಮು ಸಂಘರ್ಷ ಮತ್ತು ಜಾತಿ-ದ್ವೇಷದಲ್ಲಿ ಹಲವು ಅಹಿತಕರ ಘಟನೆಗಳು ಆಗುತ್ತಿವೆ. ಶಾಸಕರು, ಸಂಸದರ ಜತೆಗೆ ಸ್ಥಳೀಯ ಜನಪ್ರತಿನಿಧಿಗಳಿಗೂ ಭಯ ಆರಂಭವಾಗಿದೆ. ತಮ್ಮ ರಕ್ಷಣೆಗೆ ಗನ್‌ಮ್ಯಾನ್‌ ನೀಡುವಂತೆ ಚಿಕ್ಕಮಗಳೂರು ನಗರಸಭೆ ಸದಸ್ಯನಿಂದ ಮನವಿ ಮಾಡಲಾಗಿದೆ.

ನಗರಸಭೆ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಜೆಡಿಎಸ್ ನಗರಸಭಾ ಸದಸ್ಯ ಎ.ಸಿ. ಕುಮಾರ್ ಇದೀಗ ಎಸ್‌ಪಿ ಅಕ್ಷಯ್ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಸುರತ್ಕಲ್‌ ಫಾಜಿಲ್‌ ಹತ್ಯೆ: ಮೊದಲ ಆರೋಪಿ ಅರೆಸ್ಟ್‌, ಇವನು ಹಂತಕರು ಬಂದ ಕಾರಿನ ಚಾಲಕ

ʻʻರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೂ ಅಸುರಕ್ಷಿತ ವಾತಾವರಣ ಮೂಡಿದೆ. ಹಾಗೂ ನನ್ನ ಮೇಲೆ ಈಗಾಗಲೇ ಜಾತಿ ನಿಂದನೆ ಕಾಯ್ದೆ ಅಡಿಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ನಗರಸಭಾ ಪೌರಾಯುಕ್ತರು ಮತ್ತು ಅಧ್ಯಕ್ಷರು ನಗರಸಭೆಯ ಸಿಬ್ಬಂದಿಗಳಿಂದ ನನ್ನ ವಿರುದ್ದ ದೂರು ತೆಗೆದುಕೊಂಡಿರುತ್ತಾರೆ. ಪೌರ ಕಾರ್ಮಿಕರನ್ನು ಎತ್ತಿಕಟ್ಟಿ ನನ್ನ ವಿರುದ್ಧ ದೂರು ನೀಡುವಂತೆ ಪ್ರಚೋದಿಸಿ ದೂರು ಅರ್ಜಿ ಪಡೆದಿರುತ್ತಾರೆ. ಹಾಗೂ ನಾನು ಅಕ್ರಮ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿರುವ ಕಟ್ಟಡದ ಮಾಲೀಕರಿಂದಲೂ ಇದೇ ರೀತಿ ನನ್ನ ವಿರುದ್ಧ ದೂರು ನೀಡುವಂತೆ ಎತ್ತಿಕಟ್ಟಿದ್ದಾರೆ. ನನ್ನ ವಾಸದ ಮನೆಯನ್ನು ಅಕ್ರಮವಾಗಿ ಕಟ್ಟಿರುವರೆಂದು ದೂರು ಅರ್ಜಿಯನ್ನು ಪಡೆದುಕೊಂಡು ನೋಟಿಸ್‌ ನೀಡಿದ್ದಾರೆ. ನನಗೆ ಕಾನೂನು ಬದ್ಧ ರಕ್ಷಣೆ ನೀಡಬೇಕುʼʼ ಎಂದು ಕೋರಿ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ TOP 10 NEWS | ಪ್ರವೀಣ್‌- ಫಾಜಿಲ್‌ ಹತ್ಯೆ ಹಿನ್ನೆಲೆ ನೈಟ್‌ ಕರ್ಫ್ಯೂ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು

Exit mobile version