ಬೆಂಗಳೂರು: ರಾಜ್ಯದ ಜನರಿಗೆ 5 ಕೆ.ಜಿ ಪಡಿತರ ಅಕ್ಕಿ ಕೊಡುತ್ತಿರುವುದು ಇವರೇ ಹಾಗಿದ್ದಲ್ಲಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ. ಇವರೇ ಅಕ್ಕಿ ಕೊಡುವುದು ನಿಜವಾಗಿದ್ದಲ್ಲಿ ಇವತ್ತೇ ಬೇಕಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಶಾಸಕ ಮುನಿರತ್ನ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ನಾಯಕರ ಸ್ಥಿತಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಇದೆ. ಇವರು ಮಾತು ಕೊಟ್ಟಂತೆ 10 ಕೆ.ಜಿ ಪಡಿತರ ಅಕ್ಕಿಯನ್ನು ಜನರಿಗೆ ಕೊಡಲಿ. 200 ಯೂನಿಟ್ ಫ್ರೀ ಕರೆಂಟ್ ಎಂದು ಹೇಳಿ, ಈಗ 75, 80 ಯುನಿಟ್ ಅಂದರೆ ಏನ್ರೀ ಅರ್ಥ. ಏನು ಸಂತೆಯಲ್ಲಿ ಹರಾಜು ಆಗುವ ವಸ್ತುವೇ? ಇವರ ಸಾಧನೆ ಬರೀ ಗ್ಯಾರಂಟಿಯಾ? ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | DK Shivakumar: ಡಿ.ಕೆ. ಶಿವಕುಮಾರ್ ಆ್ಯಕ್ಟಿಂಗ್ ಸಿಎಂ, ಅವರದ್ದು ಅತಿರೇಕದ ನಡೆ: ಆರ್. ಅಶೋಕ್
ಗ್ಯಾರಂಟಿ ಮಾಡಲು ರಣದೀಪ್ ಸುರ್ಜೇವಾಲ, ವೇಣುಗೋಪಾಲ್ ಬಂದು ಸಭೆ ಮಾಡುತ್ತಾರೆ. ಒಂದೆಡೆ ಗ್ಯಾರಂಟಿ ಕಾರ್ಡ್ ಪ್ರಿಂಟ್ ಮಾಡಿ ಒಬ್ಬರು ಸಹಿ ಮಾಡುತ್ತಾರೆ. ಆದರೆ ಇನ್ನೊಬ್ಬರು ನಾನೂ ಸಹಿ ಮಾಡಬೇಕು ಎನ್ನುತ್ತಾರೆ ಎಂದು ಹೇಳುವ ಮೂಲಕ, ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಕಿತ್ತಾಟದ ಬಗ್ಗೆ ವ್ಯಂಗ್ಯವಾಡಿದರು.
ಬಿಜೆಪಿ ಒಂದು ದೋಣಿಯ ಪಾರ್ಟಿ, ಸ್ವಯಂಕೃತ ಅಪರಾಧದಿಂದ ನಾವು ಸೋತಿದ್ದೇವೆ. ನಮ್ಮ ವರ್ಚಸ್ಸು ನಾವೇ ಕಳೆದುಕೊಂಡೆವು ಎಂದ ಮುನಿರತ್ನ, 40 ಪರ್ಸೆಂಟ್ ಆರೋಪ ಎತ್ತಿದ ಕೂಡಲೇ ತನಿಖೆ ಮಾಡಿಸಬೇಕಿತ್ತು, ಅಲ್ಲೇ ಅದು ಮುಗಿದು ಹೋಗುತ್ತಿತ್ತು. ಬಿಟ್ ಕಾಯಿನ್ ವಿವಾದ ಬಂತು, ಪ್ರಾರಂಭದಲ್ಲೇ ತನಿಖೆ ಮಾಡಿದಿದ್ದರೆ ಅವತ್ತೇ ಆ ವಿಚಾರ ತಣ್ಣಗಾಗುತ್ತಿತ್ತು. ಕಾಂಗ್ರೆಸ್‌ನ ಪೇ ಸಿಎಂ ಅಭಿಯಾನವನ್ನು ನಾವು ಸಮರ್ಪಕವಾಗಿ ಎದುರಿಸಲಿಲ್ಲ. ಹೀಗೆ ಹಲವು ತಪ್ಪುಗಳಿಂದ ನಾವು ಸೋತಿದ್ದೇವೆ ಎಂದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ | Rice Politics: ಇನ್ನೂ ಮುಗಿಯದ ಅಕ್ಕಿ ಬೇಟೆ, ಜುಲೈ ತಿಂಗಳಲ್ಲಂತೂ ಸಿಗೋದು ಡೌಟೆ
ಈ ಸರ್ಕಾರದಲ್ಲಿ ಅಧಿಕಾರಿಗಳೇ ದಲ್ಲಾಳಿಗಳು ಆಗಿದ್ದಾರೆ. ಸರ್ಕಾರದ ಸೇವೆಗೆ ಬಂದವರು ದಲ್ಲಾಳಿ ಸೇವೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿಯವರೇನೂ ನಿದ್ದೆ ಮಾಡುತ್ತಿಲ್ಲ, ಬಹಳ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ನವರಿಗೆ ನನ್ನ ಹಾಗೂ ಅಶ್ವತ್ಥನಾರಾಯಣ ಮೇಲೆ ತುಂಬಾ ಪ್ರೀತಿ ಇದೆ. ನಾವು ಕೂಡ ಹೋರಾಟ ಮಾಡಲು ಸಿದ್ಧರಿದ್ದೇವೆ, ಹೆದರಿಕೊಂಡು ಓಡಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.