ಆನೇಕಲ್: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ವೈಟ್ ಕಾಲರ್, ಅಂತಹವರು ರಾಜಕೀಯ ಮಾಡುವುದು ಅಸಾಧ್ಯ ಎಂದು ಹೇಳಿಕೆ ನೀಡಿದ್ದ ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಕಿಡಿಕಾರಿದ್ದಾರೆ.
ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಮುನಿರತ್ನ ಮಾತನಾಡಿದ್ದಾರೆ.
ಸಿ.ಎನ್.ಮಂಜುನಾಥ್ ಅವರು ಡಾಕ್ಟರ್, ಅವರು ವೈಟ್ ಕಾಲರ್ ಹೌದಪ್ಪಾ… ವೈಟ್ ಕಾಲರ್ ಹಾಕಿಕೊಂಡು ಆಪರೇಷನ್ ಮಾಡಿ ಜನರ ಜೀವ ಉಳಿಸುತ್ತಾರೆ. ಆ ಕೆಂಪು ರಕ್ತಕಣಗಳಿಗೆ ತೊಂದರೆ ಆಗದಂತೆ ಮನೆಗೆ ಕಳುಹಿಸುತ್ತಾರೆ. ಇವ್ರು ವೈಟ್ ಕಾಲರ್ ಹಾಕಿಕೊಂಡಿದ್ದಾರಾ? ಇವರು ಒಂದಾದರೂ ಒಳ್ಳೆಯ ಕೆಲಸ ಮಾಡಿದ್ದಾರಾ? ಬೆಳಗ್ಗೆ ಎದ್ದರೆ ರೆಡ್ ಕಾಲರ್ ತಾನೇ, ಬರೀ ರೆಡ್ ಕಾಲರೇ… ಬಡವರ ರಕ್ತ, ಬಡವರ ಜಮೀನು, ಬಡವರ ಭೂಮಿ, ಅವರ ಕಣ್ಣೀರು, ಆ ಕಣ್ಣೀರು ರಕ್ತದ ಕಣ್ಣೀರು ತಾನೇ? ಅದು ರೆಡ್ ತಾನೇ? ಹಾಗಾದರೆ, ವೈಟ್ ಕಾಲರ್ ಒಳ್ಳೆಯದೋ ರೆಡ್ ಕಾಲರ್ ಒಳ್ಳೆಯದೋ? ನಾವು ಒಳ್ಳೆಯದಾದ ವೈಟ್ ಕಾಲರ್ ಅನ್ನು ಹಿಡಿದುಕೊಂಡಿದ್ದೇವೆ. ಅಂತಹವರ ಬಗ್ಗೆ ಮಾತನಾಡುತ್ತಾರಲ್ಲಾ ಇವರಿಗೆ ಏನು ಹೇಳಬೇಕು ಎಂದು ತಿರುಗೇಟು ನೀಡಿದ್ದಾರೆ.
ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅದೇನೋ ಬಿಚ್ತೀನಿ ಅಂತ ಹೇಳಿದ್ದ. ಅದೇನ್ ಬಿಚ್ತಾನೋ ನನಗಂತೂ ಗೊತ್ತಿಲ್ಲ. ಅದಕ್ಕೆ ನಾನು ರಾಮನಗರದ ಜಂಟಿ ಸಮಾವೇಶದಲ್ಲಿ ನೋಡುವೆ, ನಂದು ಇಕ್ಬಾಲ್ ಬಿಚ್ತಾನೋ ಇಲ್ಲ, ನಾನು ಇಕ್ಬಾಲ್‌ದು ಬಿಚ್ಚುತ್ತೇನೋ ನೋಡೋಣ? ರಾಮನಗರ ಬೇಡ ಅಂದ್ರೆ, ಕನಕಪುರದಲ್ಲಿ ಬಿಚ್ಚೀನಿ. ಅವರು ಹೇಳಿದ ಕಡೆ ನಾನು ರೆಡಿ ಇದ್ದೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ | Lok Sabha Election 2024: ಕಾಂಗ್ರೆಸ್ 50 ಸ್ಥಾನ ಗೆದ್ದು ತೋರಿಸಲಿ: ಖರ್ಗೆ, ರಾಹುಲ್ ಗಾಂಧಿಗೆ ಬೊಮ್ಮಾಯಿ ಸವಾಲು
ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿದ್ದೇನು?
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತನಾಡಿದ್ದ ಶಾಸಕ ಬಾಲಕೃಷ್ಣ, ರಾಜಕಾರಣ ಮಾಡುವುದಕ್ಕೆ ಎಲ್ಲರಿಗೂ ತೆವಲು. ಎಲ್ಲರೂ ಏನೇನೋ ಆಗಬೇಕು ಅಂತ ಬಂದುಬಿಡುತ್ತಾರೆ. ವೈಟ್ ಕಾಲರ್ನವರು ರಾಜಕೀಯ ಮಾಡುವುದು ಅಸಾಧ್ಯ. ಅಲ್ಲದೆ, ಚನ್ನಪಟ್ಟಣ ಸಮಸ್ಯೆ ಸಿ.ಪಿ.ಯೋಗೇಶ್ವರ್ಗೆ ಗೊತ್ತು, ರಾಮನಗರ ಸಮಸ್ಯೆ ಎಚ್ಡಿ ಕುಮಾರಸ್ವಾಮಿಗೆ ಗೊತ್ತು. ಆದರೆ ಡಾಕ್ಟರ್ಗೆ ಏನ್ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದ್ದರು.