ಮಡಿಕೇರಿ: ಪಾಲಿಬೆಟ್ಟದಲ್ಲಿ ಮೀನು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ, ಚರ್ದು ಎಂಬವರ ಪುತ್ರ ಮಹಮ್ಮದ್ ತಾಸಿರ್ ಅವರನ್ನು ಡಿಸೆಂಬರ್ ೧೦ರಂದು ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ ಆರೋಪಿ ನೌಷಾದ್‌ನನ್ನು (Murder and arrest) ಪೊಲೀಸರು ಬಂಧಿಸಿದ್ದಾರೆ.
ತಾಸಿರ್ ಆವತ್ತು ವ್ಯಾಪಾರ ಮುಗಿಸಿಕೊಂಡು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ, ಆಲ್ಟೋ ಕಾರೊಂದು ಡಿಕ್ಕಿಹೊಡೆದ ಪರಿಣಾಮ ತಾಸಿರ್ ತಲೆಗೆ ಗಂಭೀರ ಗಾಯಗಳಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ತಾಸಿರ್‌ನನ್ನು ಪಾಲಿಬೆಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಹಮ್ಮದ್ ತಾಸಿ ಕೊನೆಯುಸಿರೆಳೆದಿದ್ದರು.
ಮೀನು ವ್ಯಾಪಾರಿ ತಾಸಿರ್ ಹಾಗೂ ಪಾಲಿಬೆಟ್ಟದ ನೌಷಾದ್ ಎಂಬಾತನ ನಡುವೆ ಹಳೇ ವೈಷಮ್ಯ ಇದ್ದು, ನೌಷಾದ್‌ನೇ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾನೆ ಎಂದು ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂದರ್ಭ ಮೂರ್ನಾಡು ಬಳಿ ಕಾರು ಪತ್ತೆಯಾಗಿತ್ತು. ಬಳಿಕ ನೌಷಾದ್‌ನನ್ನು ಬೆನ್ನು ಹತ್ತಿದಾಗ ಆತ ಮೈಸೂರಿನಲ್ಲಿ ಸೆರೆ ಸಿಕ್ಕಿದ್ದಾನೆ.
ಆರೋಪಿಯ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ ಪೊಲೀಸ್ ತಂಡವನ್ನು ರಚಿಸಿದ್ದರು. ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಶಂಕರ್ ನೇತೃತ್ವದೊಂದಿಗೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ತಲೆಮರಸಿಕೊಂಡಿದ್ದ ಆರೋಪಿಯನ್ನು ಮೈಸೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ | Murder Case | ಮದುವೆ ಆಗು ಎಂದವಳು ಕೊಲೆಯಾಗಿ ಹೋದಳು; ಪ್ರಿಯಕರನ್ನು ಜೈಲಿಗೆ ಅಟ್ಟಿದ ಪೊಲೀಸರು