ಮಂಗಳೂರು: ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಯುವಕನೊಬ್ಬನಿಗೆ ಚೂರಿ ಇರಿದು ಕೊಲೆಗೆ ಯತ್ನ (Murder Attempt) ಮಾಡಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಘಟನಾ ಸ್ಥಳದ ಆಸುಪಾಸು ಆತಂಕದ ವಾತಾವರಣ ಕಂಡು ಬಂದಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ಉಳ್ಳಾಲ ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಎಂಬುವವರ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸದಕತ್ತುಲ್ಲಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಎಂಬುವವರಿಂದ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಸದಕತ್ತುಲ್ಲಾ ಶುಕ್ರವಾರ ರಾತ್ರಿ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಮನೆ ಬಳಿ ಬಂದ ದುಷ್ಕರ್ಮಿಗಳು ಮನೆಯಿಂದ ಹೊರಗೆ ಕರೆಸಿದ್ದಾರೆ. ಈ ವೇಳೆ ಏಕಾಏಕಿ ಚೂರಿಯಿಂದ ಇರಿದು ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಸದಕತ್ತುಲ್ಲಾ ಕೂಗಿಕೊಂಡಿದ್ದು, ಅಕ್ಕಪಕ್ಕದವರು ಬರುವ ಮುನ್ಸೂಚನೆ ಸಿಗುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸದಕತ್ತುಲ್ಲಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Lokayukta raid : ಮಾಡಾಳು ಚನ್ನಗಿರಿ ನಿವಾಸದಲ್ಲಿ 16.5 ಲಕ್ಷ ವಶ; 1.5 ಲಕ್ಷ ರೂ. ವಾಪಸ್ ಹೆಂಡ್ತಿ ಕೈಗೆ ಕೊಟ್ಟ ಪೊಲೀಸರು!
ಫಿಶ್ ಆಯಿಲ್ ಮಿಲ್ ಮಾಲೀಕರಿಂದ ಬೆದರಿಸಿ ಹಣ ಪಡೆದಿರುವ ವಿಚಾರದಲ್ಲಿ ಘರ್ಷಣೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.