Site icon Vistara News

Murder Case : ಅಮ್ಮನ ಸಾವಿನ ರಹಸ್ಯ ಬಿಚ್ಚಿಟ್ಟ 6 ವರ್ಷದ ಬಾಲಕಿ!

6 year old girl reveals the secret behind her mothers death

ಚಾಮರಾಜನಗರ: ಅಮ್ಮನ ಸಾವಿನ ರಹಸ್ಯವನ್ನು 6 ವರ್ಷದ ಬಾಲಕಿಯೊಬ್ಬಳು ಎಳೆ ಎಳೆಯಾಗಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ. ಕೊಳ್ಳೇಗಾಲದ ಆದರ್ಶನಗರದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹವು (Murder Case) ಪತ್ತೆಯಾಗಿತ್ತು. ಅಗರ ಗ್ರಾಮದ ರೇಖಾ (27) ಎಂಬಾಕೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಜತೆಗೆ ಆಕೆಯ ಮಗಳು ಮನ್ವಿತಾ (6) ನಾಪತ್ತೆ ಆಗಿದ್ದಳು. ಮಗಳಂತೂ ಕೊಲೆಯಾಗಿ ಹೋದಳು, ಮೊಮ್ಮಗಳನ್ನು ಪತ್ತೆ ಹಚ್ಚಿ ಕೊಡಿ ಎಂದು ಮೃತ ರೇಖಾಳ ತಂದೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದರು.

ಕಳೆದ ಎರಡು ವರ್ಷದ ಹಿಂದೆ ರೇಖಾಳ ಪತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ಒಬ್ಬಂಟಿಯಾಗಿದ್ದ ರೇಖಾಳಿಗೆ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದ್‌ ಹತ್ತಿರವಾಗಿದ್ದ. ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಾಗೇಂದ್ರನೊಟ್ಟಿಗೆ ರೇಖಾ ಲೀವಿಂಗ್ ಟು ಗೆದರ್ ರಿಲೇಷನ್ ಶಿಪ್‌ನಲ್ಲಿದ್ದಳು.

ಇವರಿಬ್ಬರ ವಿಷಯ ಮನೆಯವರಿಗೆ ತಿಳಿದು ಗಲಾಟೆಯೂ ನಡೆದಿತ್ತು. ಮನೆಯಲ್ಲಿ ಗಲಾಟೆ ಗದ್ದಲವಾದರೂ ನಾಗೇಂದ್ರನ ಸಹವಾಸವನ್ನು ಮಾತ್ರ ರೇಖಾ ಬಿಟ್ಟಿರಲಿಲ್ಲ. ಆದರೆ ಅದೇ ಗೆಳೆಯ ನಾಗೇಂದ್ರನ ಮನೆಯಲ್ಲಿ ರೇಖಾಳ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಾಗೇಂದ್ರನೇ ರೇಖಾಳನ್ನು ಹೊಡೆದು ಕೊಂದು, ಮನ್ವಿತಾಳನ್ನು ಕಿಡ್ನ್ಯಾಪ್‌ ಮಾಡಿದ್ದಾನೆ ಎಂದು ಮೃತ ರೇಖಾ ಕುಟುಂಬಸ್ಥರು ಆರೋಪಿಸಿದ್ದರು.

ಇದನ್ನೂ ಓದಿ: Veterinary Hospital : ಪ್ರಾಣಿಪ್ರಿಯರಿಗೆ ಕಹಿ ಸುದ್ದಿ; ಬೆಂಗಳೂರಿನ 24 ವೆಟರ್ನರಿ ಆಸ್ಪತ್ರೆಗಳು ಬೇರೆಡೆ ಶಿಫ್ಟ್‌!

ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ರೇಖಾ ಸಾವಿನ ಪ್ರಕರಣವನ್ನು ಭೇದಿಸಿದ್ದಾರೆ. ಅಸಲಿಗೆ ರೇಖಾಳ ಸಾವಿನ ಪ್ರಕರಣ ಬೆಳಕಿಗೆ ಬರಲು ಮಗಳು ಮನ್ವಿತಾ ವ್ಯಾಸಂಗ ಮಾಡುತ್ತಿದ್ದ ಶಾಲೆಯ ಶಿಕ್ಷಕನೇ ಕಾರಣ. ಕಳೆದೊಂದು ವಾರದಿಂದ ಮನ್ವಿತಾ (6) ಶಾಲೆಗೆ ಬಂದಿರಲಿಲ್ಲ. ಇತ್ತ ತಾಯಿ ರೇಖಾಳಿಗೆ ಏಳೆಂಟು ಬಾರಿ ಫೋನ್‌ ಕಾಲ್‌ ಮಾಡಿದರೂ ರೆಸ್ಪಾನ್ಸ್‌ ಮಾಡುತ್ತಿರಲಿಲ್ಲ. ಹೀಗಾಗಿ ಶಿಕ್ಷಿಕ ನೇರವಾಗಿ ಮನ್ವಿತಾಳ ಮನೆಗೆ ಹೋಗಿ ಬಾಗಿಲು ತಟ್ಟಿದ್ದರು.

ಎಷ್ಟು ಬಾರಿ ಮನೆ ಕಾಲಿಂಗ್ ಬೆಲ್ ಒತ್ತಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಅನುಮಾನಗೊಂಡಿದ್ದಾರೆ. ಈ ವೇಳೆ ಮನೆಯ ಕಿಟಕಿಯಿಂದ ಇಣುಕಿ ನೋಡಿದಾಗ ರೇಖಾಳ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣವೇ ಶಿಕ್ಷಕ ಕೊಳ್ಳೆಗಾಲ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಶಿಕ್ಷಕ ಕೊಟ್ಟ ಮಾಹಿತಿ ಮೇರೆಗೆ ರೇಖಾ ಸತ್ತ ವಿಷಯವು ಬೆಳಕಿಗೆ ಬಂದಿತ್ತು.

ರೇಖಾ ಮೃತಪಟ್ಟಿದ್ದಾಳೆ, ಆದರೆ ಮಗಳು ಮನ್ವಿತಾ ಎಲ್ಲಿ? ಎಂಬ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದವು. ರೇಖಾಳನ್ನು ಕೊಂದು ಮಗಳನ್ನು ಕಿಡ್ನ್ಯಾಪ್ ಮಾಡಿ ನಾಗೇಂದ್ರ ಎಸ್ಕೇಪ್ ಆಗಿದ್ದನಾ? ಅಥವಾ ತಾಯಿಯನ್ನು ಕೊಂದಿದ್ದನ್ನು ನೋಡಿದಕ್ಕೆ ಸಾಕ್ಷಿ ನಾಶಕ್ಕಾಗಿ ಮನ್ವಿತಳನ್ನೂ ಹತ್ಯೆ ಮಾಡಿದ್ದನಾ ಎಂಬ ಅನುಮಾನ ಮೂಡಿತ್ತು. ರೇಖಾಳ ಸಾವಿನ ಪ್ರಕರಣವು ಹೊಸ ಹೊಸ ತಿರುವುಗಳನ್ನೆಲ್ಲ ಪಡೆದುಕೊಂಡು ಇದೀಗ ಸುಖ್ಯಾಂತಗೊಂಡಿದೆ.

ಕಣ್ಮರೆಯಾಗಿದ್ದ ಮನ್ವಿತಾಳನ್ನು ಪತ್ತೆ ಮಾಡಿದ ಪೊಲೀಸರು, ಆಕೆಯಿಂದಲೇ ರೇಖಾಳ ಸಾವಿನ ರಹಸ್ಯವನ್ನು ಭೇದಿಸಿದ್ದಾರೆ. ಕಳೆದ 5ರಂದು ರೇಖಾ ತನ್ನ ಮಗಳನ್ನು ಚಾಮರಾಜನಗರ ಬಾಲ ಮಂದಿರಕ್ಕೆ ತಂದು ಸೇರಿಸಿದ್ದಳು. ಕಾರಣ ನಾಗೇಂದ್ರ ದಿನ ನಿತ್ಯ ಕುಡಿದು ಬಂದು ರೇಖಾಳಾನ್ನು ಮನ ಬಂದಂತೆ ಹೊಡೆಯುತ್ತಿದ್ದ. ತನ್ನ ಮಗಳನ್ನು ಎಲ್ಲಿ ಕೊಲೆ ಮಾಡಿ ಬಿಡುತ್ತಾನೋ ಎಂದು ಹೆದರಿದ ರೇಖಾ ಮಗಳನ್ನು ಸುರಕ್ಷಿತವಾಗಿ ಬಾಲ ಮಂದಿರಕ್ಕೆ ಬಿಟ್ಟಿದ್ದಳು.

ಇದೀಗ ಸತ್ಯವನ್ನು ಬಿಚ್ಚಿಟ್ಟಿರುವ ಮನ್ವಿತಾ, ತಾಯಿ ರೇಖಾಳಿಗೆ ದಿನ ನಿತ್ಯ ನಾಗೇಂದ್ರ ಹಲ್ಲೆ ಮಾಡುತ್ತಿದ್ದ. ರೇಖಾಳಿಗೆ ಹೊಡೆದ ವಿಚಾರವನ್ನು ಬೇರೆಯವರಿಗೆ ಹೇಳಿದರೆ ಮೂಟೆ ಕಟ್ಟಿ ಹೊಳೆಗೆ ಎಸೆದು ಬಿಡುತ್ತೀನಿ ಎಂದು ಮಾನ್ವಿತಾಗೆ ಧಮ್ಕಿ ಹಾಕುತ್ತಿದ್ದ. ನಾಗೇಂದ್ರನ ಚಿತ್ರ ಹಿಂಸೆಯನ್ನೆಲ್ಲ 6 ವರ್ಷದ ಮಾನ್ವಿತಾ ಪೊಲೀಸರ ಬಳಿ ಬಿಚ್ಚಿಟ್ಟಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version