Site icon Vistara News

Murder Case: ಚರಂಡಿಯಲ್ಲಿ ಸಿಕ್ಕಿದ್ದ ಶವಕ್ಕೆ ವರ್ಷದ ಬಳಿಕ ಬಿಗ್ ಟ್ವಿಸ್ಟ್; ಡೆತ್ ಮಿಸ್ಟರಿ ಪತ್ತೆಗೆ ಡಿಎನ್ಎ ಪರೀಕ್ಷೆ

ರಾಯಚೂರು: ಇಲ್ಲಿನ ದೇವದುರ್ಗ ಪಟ್ಟಣದ ಚರಂಡಿಯೊಂದರಲ್ಲಿ ಒಂದು ವರ್ಷದ ಹಿಂದೆ ಸಿಕ್ಕಿದ್ದ ಶವವೊಂದರ ಪ್ರಕರಣಕ್ಕೆ ಮರುಜೀವ (Murder Case) ಸಿಕ್ಕಿದೆ. ಅನಾಥ ಶವವೆಂದು ಪೊಲೀಸರೇ ಅಂತ್ಯಕ್ರಿಯೆ ಮಾಡಿ ಪ್ರಕರಣವನ್ನು ಕ್ಲೋಸ್‌ ಮಾಡಿದ್ದರು. ಆದರೆ, ಈಗ ಈ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಕಳೆದ ವರ್ಷ ಜನವರಿ 24ರಂದು ಅನಾಥ ಶವವೊಂದು ಸಿಕ್ಕಿತ್ತು. ಶವದ ಗುರುತು ಪತ್ತೆಯಾಗದ ಕಾರಣಕ್ಕೆ ದೇವದುರ್ಗ ಪೊಲೀಸರು ಇದು ಅನಾಥ ಶವ ಎಂದು ರಿಪೋರ್ಟ್‌ ಸಲ್ಲಿಸಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಆದರೆ, ಇದಾದ ಎರಡನೇ ದಿನಕ್ಕೆ ಜನವರಿ 26‌ಕ್ಕೆ ದೇವದುರ್ಗ ಪೊಲೀಸ್ ಠಾಣೆಗೆ ಕಾಣೆಯಾದ ದೂರೊಂದು ಬಂದಿತ್ತು.

ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಚನ್ನಬಸವ (55) ಎಂಬಾತ ಕಾಣೆಯಾಗಿದ್ದಾರೆ ಎಂದು ದೂರು ಬಂದಿತ್ತು. ಪೊಲೀಸರು ನಾಪತ್ತೆ ಕೇಸ್ ದಾಖಲಿಸಿ‌ ತನಿಖೆ ಕೈಗೊಂಡಿದ್ದರು. ಈ ಮಧ್ಯೆ ಅಂತ್ಯಕ್ರಿಯೆ ಮಾಡಲಾಗಿದ್ದ ಅನಾಥ ಶವದ ಫೋಟೊಗಳನ್ನು ತೋರಿಸಿ, ಬಾಡಿ ಐಡೆಂಟಿಫೈ ಮಾಡಲು ಪೊಲೀಸರು ಹೇಳಿದ್ದರು. ಆದರೆ, ಕೊಳೆತ ಸ್ಥಿತಿಯಲ್ಲಿ ಆ ಮೃತದೇಹ ಇದ್ದ ಕಾರಣ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸರು ಹಾಗೂ ದೂರುದಾರರು ಸುಮ್ಮನಾಗಿದ್ದರು.

ಇದನ್ನೂ ಓದ: Murder Case: ಹಳೇ ದ್ವೇಷ; ಎರಡೂವರೆ ಸಾವಿರ ರೂಪಾಯಿಗೆ ಸುಪಾರಿ ನೀಡಿದ್ದ ಲಾಯರ್‌ ಸೇರಿ ಮೂವರ ಬಂಧನ

ಇದಾದ ಕೆಲ ದಿನಗಳ ಬಳಿಕ ಚನ್ನಬಸವ ಕುಟುಂಬಸ್ಥರು ದೇವದುರ್ಗ ಠಾಣೆಗೆ ಭೇಟಿ ನೀಡಿದ್ದರು.ಆಗ ಅನಾಥ ಶವದ ಅಂತ್ಯಕ್ರಿಯೆಯ ಕೆಲ ಫೋಟೊಸ್ ಸೂಕ್ಷ್ಮವಾಗಿ ಗಮನಿಸಿದಾಗ, ಅದು ಕಾಣೆಯಾಗಿದ್ದ ಚನ್ನಬಸವನ ಮೃತದೇಹ ಎಂಬುದು ಖಚಿತಪಡಿಸಿದ ಬಳಿಕ ನಡೆದಿದ್ದು ಮಾತ್ರ ರೋಚಕ.

ಕೊಲೆ ದೂರು ನೀಡಿದ ಕುಟುಂಬಸ್ಥರು; ಡಿಎನ್‌ಎ ಪರೀಕ್ಷೆಗೆ ಮುಂದಾದ ಪೊಲೀಸರು

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಾಣೆಯಾಗಿರುವ ಚನ್ನಬಸವನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಮರು ದೂರು ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ದೇವದುರ್ಗ ಪೊಲೀಸರು, ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ. ಅನಾಥ ಶವ ಎಂದು ಅಂತ್ಯಕ್ರಿಯೆ ಮಾಡಿದ್ದ ಶವವನ್ನು ಹೊರ ತೆಗೆದು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ.

ಜಮೀನು ತಗಾದೆ

ಅಷ್ಟಕ್ಕೂ ಕಾಣೆಯಾಗಿದ್ದ ಚನ್ನಬಸವನನ್ನು ಕೊಲೆ‌ ಮಾಡಲಾಗಿದೆ ಎಂಬುದಕ್ಕೆ ಕಾರಣವೂ ಇದೆ. ಜನವರಿ 19 ರಂದು ಮೂಡಲಗುಂಡ ನಾಗಪ್ಪ ಎಂಬಾತ ನಮ್ಮ ತಂದೆ ಚನ್ನಬಸವನನ್ನು ಕರೆದೊಯ್ದಿದ್ದ ಎಂದು ಪುತ್ರ ರಮೇಶ್‌ ತಿಳಿಸಿದ್ದಾರೆ. ತಂದೆಯವರನ್ನು ಕರೆದೊಯ್ದು ಮದ್ಯಪಾನ ಮಾಡಿಸಿ, ನಾಗಪ್ಪನೇ ಕೊಲೆಗೈದಿದ್ದಾನೆ ಎಂದು ಆರೋಪಿಸಿದ್ದಾರೆ.

ಚನ್ನಬಸವನಿಗೆ ಕೊತ್ತದೊಡ್ಡಿ ಗ್ರಾಮದಲ್ಲಿ ಎರಡ್ಮೂರು ಎಕರೆ ಜಮೀನು ಇದ್ದು, ಈ ಜಮೀನು ಸಂಬಂಧ ಚನ್ನಬಸವ ಹಾಗೂ ಬೇರೊಬ್ಬರ ಜತೆ ವಿವಾದವಿತ್ತು. ಹೀಗಾಗಿ ಆ ವಿರೋಧಿಗಳಿಂದ ಹಣ ಪಡೆದು ನಾಗಪ್ಪ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Murder Case: ಹೊಸಕೋಟೆಯಲ್ಲಿ ಕಾಣೆಯಾಗಿದ್ದವನು ಶವವಾಗಿ ಪತ್ತೆ; ಹುಬ್ಬಳ್ಳಿಯಲ್ಲಿ ಪತ್ನಿಯ ಕತ್ತು ಸೀಳಿದ ಪತಿ

ಇದೇ ಕಾರಣಕ್ಕೆ ದೇವದುರ್ಗ ಪೊಲೀಸರು, ಅನಾಥ ಶವ ಎಂದು ಅಂತ್ಯಕ್ರಿಯೆ ಮಾಡಿದ್ದ ಶವವನ್ನು ಹೊರತೆಗೆದು, ಕೆಲ ಸ್ಯಾಂಪಲ್ಸ್ ಸಂಗ್ರಹಿಸಿದ್ದಾರೆ. ಆ ಸ್ಯಾಂಪಲ್ಸ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿಗಾಗಿ‌ ಕಾಯುತ್ತಿದ್ದಾರೆ. ಮತ್ತೊಂದು ಕಡೆ ಚನ್ನಬಸವನ ಪುತ್ರ ನಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಕೊಡುವಂತೆ ಜತೆಗೆ ತಂದೆಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version