ಬೆಂಗಳೂರು ಗ್ರಾಮಾಂತರ: ಮೊನ್ನೆ ಸೂಲಿಬೆಲೆಯಲ್ಲಿ ಹೆತ್ತ ಮಗನಿಂದಲೇ ನಡೆದ ತಂದೆ- ತಾಯಿಯ ಜೋಡಿ ಕೊಲೆಯ (Murder Case) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೈಲೆಂಟ್ ಆಗಿಯೇ ವಿಚಾರಣೆ ನಡೆಸಿ ಕೊಲೆ ಪ್ರಕರಣಕ್ಕೆ ರೋಚಕ ತಿರುವೊಂದನ್ನು ಕೊಟ್ಟಿದ್ದಾರೆ.
ಸೂಲಿಬೆಲೆ ಗ್ರಾಮದಲ್ಲಿ ಕಳೆದ 10ರಂದು ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ಎಂಬ ವೃದ್ಧ ದಂಪತಿ ಬರ್ಬರವಾಗಿ ಕೊಲೆಯಾಗಿದ್ದರು. ಜತೆಗೆ ಕೊಲೆ ವಿಚಾರ ತಿಳಿದು ಬಂದಿದ್ದ ವೃದ್ಧರ ಹೆಣ್ಮಕ್ಕಳು ಆಸ್ತಿಗಾಗಿ ಅಣ್ಣನೇ ಕೊಲೆ ಮಾಡಿದ್ದಾನೆ ಎಂದು ನರಸಿಂಹಮೂರ್ತಿ ಮನೆ ಮೇಲೆ ದಾಳಿ ನಡೆಸಿ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಕೊಲೆಯಾದ ವೃದ್ಧ ದಂಪತಿಯ ಮಗ ನರಸಿಂಹಮೂರ್ತಿಯನ್ನು ವಶಕ್ಕೆ ಪಡೆದಿದ್ದರು.
ವಿಚಾರಣೆ ನಡೆಸಿದ ಪೊಲೀಸರಿಗೆ ಕೊಲೆ ಕೇಸ್‌ನಲ್ಲಿ ತಿರುವು ಸಿಕ್ಕಿದೆ. ಆ ವೃದ್ಧ ದಂಪತಿಯನ್ನು ಕೊಲೆ ಮಾಡಿದ್ದು ನರಸಿಂಹಮೂರ್ತಿ ಅಲ್ಲ ಬದಲಾಗಿ ಆತನ ಪತ್ನಿ ಭಾಗ್ಯಮ್ಮ, ಮಗಳು ವರ್ಷಾ ಹಾಗೂ ಅಪ್ರಾಪ್ತ ಮಗ.
ಸಾಲದ ಸುಳಿಗೆ ಸಿಲುಕಿದ್ದ ನರಸಿಂಹಮೂರ್ತಿ
ನರಸಿಂಹಮೂರ್ತಿ ಟೂರರ್ಸ್ ಆ್ಯಂಡ್ ಟ್ರಾವೇಲ್ಸ್, ಫೈನಾನ್ಸ್ ಎಂದು ಸಿಕ್ಕ ಸಿಕ್ಕ ಕೆಲಸ ಮಾಡಲು ಹೋಗಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಇತ್ತ ನಿತ್ಯ ಮನೆ ಬಳಿ ಸಾಲಗಾರರು ಬಂದು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಹಲವು ಸಲ ನರಸಿಂಹಮೂರ್ತಿ ನಾನು ಎಲ್ಲಾದರೂ ದೂರ ಹೋಗಿ ಸತ್ತು ಹೋಗುತ್ತೀನಿ ಎಂದು ಪತ್ನಿ ಬಳಿ ಹೇಳಿಕೊಂಡಿದ್ದ.
ಇದನ್ನೂ ಓದಿ: Murder Case: ಸೂಲಿಬೆಲೆಯಲ್ಲಿ ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ
ಪತ್ನಿ ಭಾಗ್ಯಮ್ಮಳಿದು ಇದು ಚಿಂತೆಗೆ ದೂಡುವಂತೆ ಮಾಡಿತ್ತು. ಪತಿ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಏನು ಗತಿ ಎಂದುಕೊಂಡಳು. ಹೀಗಾಗಿ ಜಮೀನು ಮಾರಾಟ ಮಾಡಿ ಸಾಲ ತೀರಿಸುವಂತೆ ಸಲಹೆ ನೀಡಿದ್ದಳು. ಅದೇ ರೀತಿ ನರಸಿಂಹಮೂರ್ತಿ ತಂದೆ-ತಾಯಿ ಬಳಿ ತನ್ನ ಭಾಗದ ಜಮೀನು ನೀಡುವಂತೆ ಕೇಳಿದ್ದಾನೆ. ಅದಕ್ಕೆ ವೃದ್ಧ ದಂಪತಿ ಜಮೀನನನ್ನು ಆರು ಭಾಗ ಮಾಡಿ ಹೆಣ್ಣು ಮಕ್ಕಳು ಮತ್ತು ಮಗನಿಗೆ ಸಮನಾಗಿ ನೀಡುವುದಾಗಿ ಹೇಳಿದ್ದಾರೆ. ಹೀಗೆ ಮಾಡಿದರೆ ಬರುವ ಹಣದಿಂದ ಸಾಲ ತೀರಿಸಲು ಆಗಲ್ಲ ಎಂದು ನರಸಿಂಹಮೂರ್ತಿ ಸಿಟ್ಟಾಗಿ ವಾಪಸ್ ಮನೆಗೆ ಬಂದಿದ್ದ.
ಅತ್ತೆ-ಮಾವನ ಕೊಲೆಗೆ ಸ್ಕೆಚ್ ಹಾಕಿದ್ದಳು ಸೊಸೆ
ಇನ್ನೂ ಗಂಡನ ಸಾಲ ತೀರಿಸಲು ಏನಾದರೂ ಮಾಡಲೆಬೇಕು ಎಂದು ಪಣ ತೊಟ್ಟ ಪತ್ನಿ ಭಾಗ್ಯಮ್ಮ, ಮಗಳ ಜತೆ ಗೂಡಿ ಅತ್ತೆ- ಮಾವನನ್ನು ಕೊಲೆ ಮಾಡುವ ಸ್ಕೆಚ್ ಹಾಕಿದ್ದಾಳೆ. ಅದರಂತೆ ಕಳೆದ 09ರ ಸಂಜೆ ವೃದ್ಧ ದಂಪತಿ ಮನೆಯಲ್ಲಿರುವಾಗಲೇ ಎಂಟ್ರಿ ಕೊಟ್ಟ ಸೊಸೆ-ಮೊಮ್ಮಕ್ಕಳಿಗೆ ಅತ್ತೆ ಎದುರಾಗಿದ್ದಾರೆ. ಕೂಡಲೇ ಅತ್ತೆ ಮುನಿರಾಮಕ್ಕರ ತಲೆಗೆ ಬಲವಾಗಿ ಹೊಡೆದು ಸಾಯಿಸಿದ್ದಾರೆ. ಬಳಿಕ ಮಾವ ರಾಮಕೃಷ್ಣಪ್ಪ ಬರುವವರೆಗೂ ಕಾದು, ಬರುತ್ತಿದ್ದಂತೆ ಆತನ ತಲೆಗೂ ಬಲವಾಗಿ ರಾಡ್‌ನಿಂದ ಹೊಡೆದು ರಕ್ತವನ್ನೇ ಹರಿಸಿದ್ದಾರೆ.
ಹತ್ಯೆ ಮಾಡಿ ಮನೆಗೆ ವಾಪಸ್ ಆಗಿದ್ದ ಅಮ್ಮ-ಮಕ್ಕಳು
ವೃದ್ಧ ಅತ್ತೆ-ಮಾವರನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಅಮ್ಮ-ಮಗಳು ಹಾಗೂ ಮಗ ಮನೆಗೆ ಬೀಗ ಜಡಿದು ವಾಪಸ್ ಆಗಿದ್ದಾರೆ. ಇತ್ತ ರಾತ್ರಿ ಪತಿ ನರಸಿಂಹಮೂರ್ತಿ ಮನೆಗೆ ಬಂದು ಊಟ ಮಾಡಿ ಮಲಗುವಾಗ ವೇಳೆ ನಿಮ್ಮ ಅಪ್ಪ-ಅಮ್ಮನ್ನ ಕೊಲೆ ಮಾಡಿದ್ದಾಗಿ ಪತ್ನಿ ಹಾಗೂ ಮಗಳು ಹೇಳಿದ್ದಾರೆ.
ಈ ವಿಷಯ ಕೇಳಿ ಶಾಕ್ ಆದ ನರಸಿಂಹಮೂರ್ತಿ, ಘಟನೆ ಬೆಳಕಿಗೆ ಬಂದಾಗ ಅವರೆ ಹೊಡೆದಾಡಿಕೊಂಡು ಸತ್ತಿದ್ದಾರೆ ಎಂದು ಹೇಳುವಂತೆ ಹೇಳಿದ್ದಾನೆ. ಹೆಂಡ್ತಿ-ಮಕ್ಕಳನ್ನು ಕಾಪಾಡಿಕೊಳ್ಳಲು ನಾಟಕವನ್ನೇ ಮಾಡಿದ್ದಾನೆ. ಆದರೆ ಪೊಲೀಸರು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾಯಿ- ಮಕ್ಕಳ ಕೊಲೆ ರಹಸ್ಯವನ್ನು ರಿವಿಲ್ ಮಾಡಿದ್ದಾರೆ. ಸತ್ಯ ಒಪ್ಪಿಕೊಳ್ಳುತ್ತಿದ್ದಂತೆ ಪತ್ನಿ ಭಾಗ್ಯಮ್ಮ, ಮಗಳು ವರ್ಷ, ಅಪ್ರಾಪ್ತ ಮಗ ಹಾಗೂ ಸತ್ಯವನ್ನು ಮುಚ್ಚಿಟ್ಟು ಕೊಲೆಗಾರರ ರಕ್ಷಣೆಗೆ ಮುಂದಾಗಿದ್ದ ನರಸಿಂಹಮೂರ್ತಿಯನ್ನು ಜೈಲಿಗಟ್ಟಿದ್ದಾರೆ. ಪತಿಯನ್ನು ಸಾಲದ ಸುಳಿಯಿಂದ ಬಿಡಿಸಬೇಕೆಂದರು ಸಾಕಿ ಸಲುಹಿದ್ದ ಅತ್ತೆ-ಮಾವನನ್ನೇ ಸೊಸೆಯೇ ಕೊಲೆ ಮಾಡಿದ್ದು ನಿಜಕ್ಕೂ ದುರಂತ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.