Site icon Vistara News

Murder Case | ಬಳ್ಳಾರಿ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಪ್ರಕರಣ; ಸಿಬಿಐ ತನಿಖೆಗೆ ವಹಿಸಲು ಸಿಎಂ, ಪ್ರಧಾನಿಗೆ ಪತ್ರ

Murder Case

ಬಳ್ಳಾರಿ: ೧೨ ವರ್ಷಗಳ ಹಿಂದೆ ಗಣಿ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಪ್ರಕರಣ ಈಗ ರಾಜ್ಯ ಮತ್ತು ಕೇಂದ್ರದ ರಾಜ್ಯಧಾನಿಯಲ್ಲಿ ಸದ್ದು ಮಾಡಿದೆ. ಈ (Murder Case) ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರುದಾರ ಸುಬ್ಬರಾಯುಡು ಪತ್ರ ಬರೆದಿದ್ದಾರೆ.

ಸಿಐಡಿ ತನಿಖೆಯಲ್ಲಿ ವಿಫಲವಾಯಿತೇ?
೨೦೧೦ರ ಫೆ.೪ರಂದು ಕೊಲೆಯಾದ ಎರಡು ದಿನಗಳಲ್ಲೇ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಐದು ವರ್ಷಗಳ ಕಾಲ ಸಿಐಡಿ ಅಧಿಕಾರಿಗಳು ಪ್ರಕರಣವನ್ನು ಹಲವು ಮಜಲುಗಳಲ್ಲಿ ತನಿಖೆ ಮಾಡಿದರೂ ಆರೋಪಿಗಳು ಸಿಗಲಿಲ್ಲ. ಆದರೆ ತನಿಖಾ ವರದಿ ಸಲ್ಲಿಸಲು ಕೊನೆಗೆ ದೂರುದಾರರು ಹೈಕೋರ್ಟ್ ಕದ ತಟ್ಟಿದಾಗ, ಆರೋಪಿಗಳು ಸಿಕ್ಕಿಲ್ಲವೆಂದು ಬಳ್ಳಾರಿ ನ್ಯಾಯಾಲಯಕ್ಕೆ ಸಿಐಡಿ ಸಿ ರಿಪೋರ್ಟ್ ಸಲ್ಲಿಸಿತು. ಸಿ ರಿಪೋರ್ಟ್ ಸಲ್ಲಿಸಿರುವುದು ಸಿಐಡಿ ಅಧಿಕಾರಿಗಳ ದುರ್ಬಲತೆಗೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.

ಇದನ್ನೂ ಓದಿ | Karnataka Elections | ಒಂದೇ ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ನಡ್ಡಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌

ಹೈಕೋರ್ಟ್ ಕದ ತಟ್ಟಿದ ಸುಬ್ಬರಾಯುಡು
ಪ್ರಕರಣದಲ್ಲಿ ಸಿ ರಿಪೋರ್ಟ್ ನೀಡಿರುವುದನ್ನು ಪ್ರಶ್ನಿಸಿ ೨೦೧೮ರಲ್ಲಿ ಪದ್ಮಾವತಿ ಯಾದವ್ ಅವರ ಸಹೋದರ, ದೂರುದಾರ ಸುಬ್ಬರಾಯುಡು ಹೈಕೋರ್ಟ್‌ಗೆ ರಿಟ್ ಪಿಟಿಷನ್ ಸಲ್ಲಿಸಿದ್ದರು. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾದ ಯೋಗೇಶ್‌ಗೌಡ ಕೊಲೆಯ ಪ್ರಕರಣವನ್ನು ಸಿಬಿಐಗೆ ವಹಿಸಿದಂತೆ ನಮ್ಮ ಸಹೋದರಿಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪಿಎಂ, ಸಿಎಂಗೆ ಬರೆದಿರುವ ಪತ್ರದಲ್ಲಿ ಏನಿದೆ?
ಪದ್ಮಾವತಿ ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ನನ್ನ ಸಹೋದರಿಯ ಕೊಲೆಯಲ್ಲಿ ಜನಾರ್ದನ ರೆಡ್ಡಿ ಅವರ ಕೈವಾಡ ಶಂಕೆ ವ್ಯಕ್ತಪಡಿಸಿದರೂ ಅಂದಿನ ಬಳ್ಳಾರಿ ಎಎಸ್‌ಪಿ ಅಶೋಕ್ ಕುರಾರೆ ಮತ್ತು ತಂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರುದಾರ ಸುಬ್ಬರಾಯುಡು ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಭಾವಕ್ಕೆ ಒಳಗಾಗಿ ಸಾಕ್ಷಿಗಳನ್ನು ನಾಶಪಡಿಸಿದ್ದಾರೆ, ಪ್ರಕರಣವನ್ನು ೨೦೧೦ರ ಫೆ.೬ ರಂದು ಸಿಐಡಿಗೆ ವರ್ಗಾಯಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸಹ ನನ್ನ ಯಾವುದೇ ಹೇಳಿಕೆಯನ್ನು ತೆಗೆದುಕೊಳ್ಳದೆ ತನಿಖೆ ವಿಳಂಬ ಮಾಡಿ, ಸಿ ರಿಪೋರ್ಟ್ ಸಲ್ಲಿಸಿದರು ಎಂದು ಆರೋಪಿಸಲಾಗಿದೆ.

ಎರಡು ವರ್ಷದಿಂದ ಸ್ಪಂದನೆಯೇ ಇಲ್ಲ:
ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಸಂಬಂಧ ಪಟ್ಟ ಬೆಂಗಳೂರಿನ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರೂ, ಕಳೆದ ಎರಡು ವರ್ಷದಿಂದ ಯಾವುದೇ ಕ್ರಮಕೈಗೊಂಡಿಲ್ಲ. ನನಗೆ ಪ್ರಾಣಹಾನಿಯಾದರೆ ಅದಕ್ಕೆ ಗಾಲಿ ಜನಾರ್ದನ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಕಾರಣವೆಂದು ದೂರುದಾರ ಪತ್ರದಲ್ಲಿ ಗಂಭೀರವಾಗಿ ಆರೋಪಿಸುವ ಜತೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ | Karnataka Elections | ಬಿಜೆಪಿಯಿಂದ ಮತ್ತೊಂದು ಮೆಗಾ ಸಮಾವೇಶ: ಡಿ. 18ರಂದು ನಾನಾ ಪ್ರಕೋಷ್ಠಗಳ ಶಕ್ತಿ ಸಂಗಮ

Exit mobile version