ಬೆಂಗಳೂರು: ಬೆಂಗಳೂರು ವೈದ್ಯನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಆರೋಪಿಗಳನ್ನು (Murder Case) ಬಂಧಿಸಿದ್ದಾರೆ. ಯಲಹಂಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಫಿಸಿಯೋ ಥೆರಪಿಸ್ಟ್ ಆಗಿದ್ದ ಶ್ರೀಧರ್ ಎಂಬಾತನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಪಹರಣ ಮಾಡಿದ ಹಂತಕರು ಸೋಲದೇವನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದರು.
ಫೆ. 7ರಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹವು ಪತ್ತೆ ಆಗಿತ್ತು. ಅಪರಿಚಿತ ವ್ಯಕ್ತಿಯ ಅನುಮಾನಾಸ್ಪದ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದರು. ತನಿಖೆ ವೇಳೆ ಅದು ವೈದ್ಯ ಶ್ರೀಧರ್ ಮೃತದೇಹ ಎಂಬುದು ಬೆಳಕಿಗೆ ಬಂದಿತ್ತು.
ಬಳಿಕ ಹಲವು ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ವೈದ್ಯ ಶ್ರೀಧರ್‌ನದ್ದು ಕೊಲೆ ಎಂಬ ವಿಚಾರ ಬಯಲಿಗೆ ಬಂದಿತ್ತು. ಬಾರ್‌ವೊಂದರಲ್ಲಿ ನಡೆದ ಸಣ್ಣ ಗಲಾಟೆಯೇ ಹತ್ಯೆಗೆ ಕಾರಣ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದರು. ಆಂಧ್ರಪ್ರದೇಶ ಮೂಲದ ಮೂವರು ವ್ಯಕ್ತಿಗಳೊಂದಿಗೆ ವೈದ್ಯ ಶ್ರೀಧರ್ ನಡುವೆ ಗಲಾಟೆ ನಡೆದಿತ್ತು. ಇದೇ ಕೋಪಕ್ಕೆ ಆರೋಪಿಗಳು ಶ್ರೀಧರ್‌ನನ್ನು ಅಪಹರಣ ಮಾಡಿದ್ದರು.
ಇದನ್ನೂ ಓದಿ: Murder Case: ಪಚ್ಚಿ ಆಡುವಾಗ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ; ಕಲ್ಲಲ್ಲಿ ಜಜ್ಜಿ ಕೊಂದ ಕಿರಾತಕರು
ವೀರನಂಜಾಯೆಲು ಅಲಿಯಾಸ್ ಪುಲಿ, ಗೋವರ್ಧನ ಅಲಿಯಾಸ್ ಡಿಜೆ, ಭಾಸ್ಕರ್ ಅಲಿಯಾಸ್ ಬುಡಪ್ಪ ಎಂಬುವವರು ಸೇರಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ. ಸದ್ಯ ಮೂವರನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ನಡೆಸಿದಾಗ ಕೊಲೆಯಾದ ಶ್ರೀಧರ್ ಹಾಗೂ ಆರೋಪಿಗಳಿಬ್ಬರು ಸ್ನೇಹಿತರೆಂದು ತಿಳಿದು ಬಂದಿದೆ. ಒಬ್ಬರಿಗೊಬ್ಬರು ಕುಡಿದ ನಶೆಯಲ್ಲಿ ವೈಯಕ್ತಿಕ ವಿಚಾರಗಳಿಗೆ ಗಲಾಟೆ ಮಾಡಿಕೊಂಡಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ