ಬೆಂಗಳೂರು: ಯುವಕನೊಬ್ಬ ಕ್ಲೀನರ್‌ಗೆ ವಂಡ್ರೆ ಎಂದು ಚುಡಾಯಿಸಿದಕ್ಕೆ (Ragging) ಕೊಲೆಯಾಗಿ (Murder Case) ಹೋಗಿದ್ದಾನೆ. ಇಲ್ಲಿನ ಆನಂದ್ ರಾವ್ ಸರ್ಕಲ್ ಬಳಿ ಇರುವ ವರ್ಷಾ ಟ್ರಾವೆಲ್ಸ್‌ನಲ್ಲಿ (Varsha Travels) ಘಟನೆ ನಡೆದಿದೆ. ಬಸ್ ಬುಕ್ಕಿಂಗ್ ಕೆಲಸ ಮಾಡುತ್ತಿದ್ದ ಮುರುಳಿ ಮೃತ ಯುವಕ.
ಮುರಳಿ ತನ್ನ ಸ್ನೇಹಿತ ಮನೋಹರ್ ಜತೆಗೆ ನಿನ್ನೆ ರಾತ್ರಿ (ಜು.10) ಉಪ್ಪಾರಪೇಟೆಯಲ್ಲಿ ಪಾರ್ಟಿ ಮಾಡಿದ್ದ. ಪಾರ್ಟಿಯಲ್ಲಿ ಕುಡಿದು ಟ್ರಾವೆಲ್ಸ್‌ಗೆ ವಾಪಸ್ ಆಗಿದ್ದ. ಅಲ್ಲೇ ಕೆಲಸ ಮಾಡುತ್ತಿದ್ದ ಕ್ಲೀನರ್‌ಗೆ ಹೇ ವಂಡ್ರೆ ಎಂದು ವ್ಯಂಗ್ಯ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಕ್ಲೀನರ್ ಹಾಗೂ ಮುರುಳಿಗೆ ಗಲಾಟೆ ನಡೆದಿತ್ತು. ಈ ವೇಳೆ ಟ್ರಾವೆಲ್ಸ್ ಮಾಲೀಕರು ಮಧ್ಯಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ. ಮುರುಳಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಮುರುಳಿ ಮತ್ತೆ ತಡರಾತ್ರಿ ವಾಪಸ್ಸು ಬಂದು ಕ್ಲೀನರ್‌ಗೆ ವಂಡ್ರೆ ವಂಡ್ರೆ ಎಂದು ಮತ್ತೆ ಚುಡಾಯಿಸಿದ್ದಾನೆ. ಈ ವೇಳೆ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ರೋಹಿತ್ ಎಂಬಾತ ಕಬ್ಬಿಣದ ರಾಡ್‌ನಿಂದ ಮುರುಳಿ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಮುರುಳಿಯನ್ನು ಕೂಡಲೇ ಪೊಲೀಸರು ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮುರುಳಿ ಮೃತಪಟ್ಟಿದ್ದಾನೆ. ಸದ್ಯ ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಲ್ಲಿ ಯುವಕನ ಕಿಡ್ನ್ಯಾಪ್, ಮರ್ಡರ್
ಬೆಂಗಳೂರಿನ ಕೆಂಗೇರಿ ರಾಮಸಂದ್ರದಲ್ಲಿ ಯುವಕನ ಕಿಡ್ನ್ಯಾಪ್ (Kidnaping Case) ಮಾಡಿ ಹತ್ಯೆ (Murder case) ಮಾಡಲಾಗಿದೆ. ಮೊಹಮ್ಮದ್ ತಾಹೀರ್ ಹತ್ಯೆಯಾದವನು. ಸೋಮವಾರ ತಡರಾತ್ರಿ (ಜು.10) ಮೊಹಮ್ಮದ್ ತಾಹೀರ್‌ನನ್ನು ಆತನ ಸೇಹಿತರೇ ಆಟೋದಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿ ಕರೆದುಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನ್ಯಾಮತ್ ಹಾಗೂ ಆತನ ಸ್ನೇಹಿತರು ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ.
ಚಂದ್ರಲೇಔಟ್ ಗಂಗೋಡನಹಳ್ಳಿ ನಿವಾಸಿ ಮೊಹಮ್ಮದ್ ತಾಹೀರ್ ಹಿಂದೂಸ್ತಾನ ಕಂಪೆನಿಯಲ್ಲಿ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತಾಹೀರ್‌ಗೆ ರಾತ್ರಿ 11 ಗಂಟೆಗೆ (ಜು.10) ನ್ಯಾಮತ್ ಹಾಗೂ ಸ್ನೇಹಿತರು ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ನಾಯಂಡಹಳ್ಳಿ ಮೆಟ್ರೋ ಬಳಿ ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಕೆಂಗೇರಿ ಕಡೆ ಕರೆದುಕೊಂಡು ಹೋಗಿದ್ದಾರೆ.
ತಡರಾತ್ರಿ ಹೊರಗೆ ಹೋಗಿದ್ದ ಮಗ ಮನೆಗೆ ವಾಪಸ್ ಬಾರದೆ ಇದ್ದಾಗ ಗಾಬರಿಗೊಂಡ ತಾಹೀರ್ ತಂದೆ ಸೈಯದ್ ಮೆಹಬೂಬ್ ಮಗನಿಗೆ ಕರೆ ಮಾಡಿದ್ದಾರೆ. ಆದರೆ ತಾಹೀರ್ ಫೋನ್ ರಿಸೀವ್ ಮಾಡಿಲ್ಲ. ಬಳಿಕ ಮೆಹಬೂಬ್ ನ್ಯಾಮತ್ ಮನೆ ಬಳಿ ತೆರಳಿ ವಿಚಾರಿಸಿದ್ದಾರೆ. ನ್ಯಾಮತ್‌ನ ತಂದೆ ಕೂಡ ಫೋನ್ ಮಾಡಿ, ತಾಹೀರ್‌ನನ್ನು ವಾಪಸ್ ಕರೆತರುವಂತೆ ಹೇಳಿದ್ದಾರೆ. ಆದರೆ ಇವರ ಮಾತಿಗೆ ಕ್ಯಾರೆ ಎನ್ನದೆ ನ್ಯಾಮತ್ ಫೋನ್ ಕಾಲ್ ಕಟ್ ಮಾಡಿದ್ದಾನೆ.
ಇದನ್ನೂ ಓದಿ:Self Harming : ಸಿಇಟಿಯಲ್ಲಿ ಕಡಿಮೆ ಅಂಕ; ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ತಾಹೀರ್‌ಗಾಗಿ ಪೋಷಕರು ಕೆಂಗೇರಿ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ಮಗನ ಸುಳಿವು ಸಿಗದೆ ಇದ್ದಾಗ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದಾಗ ಮಂಗಳವಾರ ಬೆಳಗ್ಗೆ (ಜು.12) ಕೆಂಗೇರಿ ಬಳಿಯ ಕೋಣಸಂದ್ರ ಕರೆ ಬಳಿ ತಾಹೀರ್ ಮೃತದೇಹ ಪತ್ತೆಯಾಗಿದೆ.
ಸದ್ಯ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.ಇತ್ತ ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ