ಉಡುಪಿ: ಇಲ್ಲಿನ ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕುಟುಂಬಸ್ಥರು ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ವರ್ತೆ ಪಂಜುರ್ಲಿ ನೇಮೋತ್ಸವದಲ್ಲಿ ದೈವದ ಮೊರೆ ಹೋದಾಗ ಕುಟುಂಬಿಕರ ನೋವಿಗೆ ಉತ್ತರಿಸಿದ ದೈವ, ಕೊಲೆಗಡುಕರು ಪಾತಾಳದಲ್ಲಿ ಅಡಗಿದ್ದರೂ ಹುಡುಕುವುದಾಗಿ ಅಭಯ ನೀಡಿದೆ.
ಕಳೆದ ಫೆ.5ರ ಭಾನುವಾರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಶರತ್ ಶೆಟ್ಟಿ ಅವರ ಹತ್ಯೆ ಮಾಡಲಾಗಿತ್ತು. ಪಾಂಗಾಳದ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದ ಶರತ್ ಮೊಬೈಲ್ ಕರೆ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಬಂದಿದ್ದರು.
ಬಳಿಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಮೊದಲು ಅಪಘಾತವಾಗಿರಬಹುದು ಎಂದು ತಿಳಿದಿದ್ದ ಸ್ಥಳೀಯರಿಗೆ, ಜಾಗದಲ್ಲಿ ಪತ್ತೆಯಾದ ಚೂರಿ ನೋಡಿ ಕೊಲೆ ಶಂಕೆ ವ್ಯಕ್ತವಾಗಿತ್ತು. ಎದೆಯ ಭಾಗಕ್ಕೆ ದುಷ್ಕರ್ಮಿಗಳು ಬಲವಾಗಿ ಚೂರಿ ಹಾಕಿದ್ದ ಹಿನ್ನೆಲೆಯಲ್ಲಿ ಶರತ್ ಶೆಟ್ಟಿ ಮೃತಪಟ್ಟಿದ್ದರು.
ಪ್ರಕರಣ ಸಂಬಂಧ ಈಗಾಗಲೇ ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದ್ದು, ಒಂದು ತಂಡ ಮಂಗಳೂರಿಗೆ ತೆರಳಿ ತನಿಖೆ ಆರಂಭಿಸಿದೆ. ಇನ್ನೊಂದು ತಂಡ ಶರತ್ ಶೆಟ್ಟಿಯ ಮೊಬೈಲ್ ಮತ್ತು ಹಲವು ಕಡೆ ಸಿಸಿ ಪೂಟೇಜ್ ಆಧರಿಸಿ ಮಾಹಿತಿ ಕಲೆಹಾಕುತ್ತಿದೆ. ಹಲವು ಜನರ ವಿಚಾರಣೆ ನಡೆಸಲಾಗಿದೆ. ಶರತ್ ಶೆಟ್ಟಿ ಭೂ ವ್ಯವಹಾರ ನಡೆಸುತ್ತಿದ್ದ ಕಾರಣ ಹಾಗೂ ವ್ಯವಹಾರದ ತಗಾದೆ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದೇ ಎನ್ನುವ ಅನುಮಾನವಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: Fraud Case: ಸೋಲಾರ್ ಪ್ಲಾಂಟ್ ಹೆಸರಲ್ಲಿ ಉದ್ಯಮಿಗೆ ಕೋಟಿ ಕೋಟಿ ಪಂಗನಾಮ; ವಂಚಕ ಸೆರೆ
ಸದ್ಯ ಪ್ರಕರಣ ಸಂಬಂಧ ಹಲವು ಆರೋಪಿಗಳ ಬಂಧನವಾಗಿದ್ದರೂ, ಪ್ರಮುಖ ಆರೋಪಿ ಪತ್ತೆ ಆಗಿಲ್ಲ. ಹೀಗಾಗಿ ಕುಟುಂಬಸ್ಥರು ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ಈ ವೇಳೆ ದೈವ ಅಭಯ ನೀಡಿದ್ದು ಪೊಲೀಸರ ತನಿಖೆಗೆ ಬಲ ನೀಡುವುದಾಗಿ ಹೇಳಿದೆ. ಮಾತ್ರವಲ್ಲದೆ ಪಾತಾಳದಲ್ಲೇ ಅಡಗಿದ್ದರೂ ಹುಡುಕುವುದಾಗಿ ಹೇಳಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ