ಬೆಂಗಳೂರು: ಇಂದಿರಾನಗರದಲ್ಲಿ ಕ್ಯಾಬ್ ಚಾಲಕನೊಬ್ಬ ಮಹಿಳೆಗೆ ಕಬ್ಬಿಣದ ರಾಡ್‌ನಿಂದ ಬಡಿದು ಹತ್ಯೆ (Murder Case) ಮಾಡಿದವನು ಪೊಲೀಸರ ಬಂಧಿಯಾಗಿದ್ದಾನೆ. ದೀಪಾ ಹತ್ಯೆಯಾದ ದುರ್ದೈವಿ ಆಗಿದ್ದು ಭೀಮರಾವ್ ಬಂಧಿತ ಆರೋಪಿ ಆಗಿದ್ದಾನೆ.
ಹೊಸಕೋಟೆಯ ಖಾಸಗಿ ಕಂಪನಿಯೊಂದರಲ್ಲಿ ದೀಪಾ ಕೆಲಸ ಮಾಡುತ್ತಿದ್ದರು. ಕ್ಯಾಬ್ ಡ್ರೈವರ್ ಆಗಿದ್ದ ಭೀಮರಾಯ, ದೀಪಾರನ್ನು ಪಿಕಪ್ ಡ್ರಾಪ್ ಮಾಡುತ್ತಿದ್ದ. ಈ ವೇಳೆ ದೀಪಾ ಅವರೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದವನು, ತನ್ನ ಜತೆಗೆ ಗೆಳತಿಯಂತೆ ಇರುವುದಕ್ಕೂ ಕೇಳಿದ್ದ ಎಂದು ತಿಳಿದು ಬಂದಿದೆ.
ಕಳೆದ ಫೆಬ್ರವರಿ 27ರಂದು ಇಂದಿರಾನಗರದಲ್ಲಿ ದೀಪಾರನ್ನು ಪಿಕಪ್ ಮಾಡುವಾಗ ಭೀಮರಾವ್ ಕಿರಿಕ್ ತೆಗೆದಿದ್ದಾನೆ. ಗೆಳತಿಯಂತೆ ಸಲುಗೆಯಿಂದ ಇರು ಎಂದು ಗಲಾಟೆ ಮಾಡಿದ್ದಾನೆ. ಮಾತಿನ ಚಕಮಕಿ ನಡುವೆ ಸಿಟ್ಟಿಗೆದ್ದ ಭೀಮರಾವ್, ಕಬ್ಬಿಣದ ಜಾಕ್ ರಾಡ್‌ನಿಂದ ಬಡಿದಿದ್ದಾನೆ. ಹಲ್ಲೆಯಿಂದ ದೀಪಾ ನೆಲಕ್ಕೆ ಕುಸಿದು ಬಿದ್ದಿದ್ದಾರೆ.
ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟ ದೀಪಾ ಅವರ ಮೃತದೇಹವನ್ನು ಮತ್ತದೇ ಕಾರಿನಲ್ಲಿ ಸಾಗಿಸಿ, ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿ ಬಿಸಾಕಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಾರ್ಚ್ 4ರಂದು ಅಪರಿಚಿತರೊಬ್ಬರ ಮೃತದೇಹ ಪತ್ತೆ ಆಗಿದೆ ಎಂಬುದರ ಬಗ್ಗೆ ಬಾಗಲೂರು ಪೊಲೀಸರಿಗೆ ಸ್ಥಳೀಯರು ಮಾಹಿತಿ ರವಾನಿಸಿದ್ದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಕೊಲೆ ಎಂದು ವರದಿಯಲ್ಲಿ ತಿಳಿದು ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಇಂದಿರಾನಗರದಲ್ಲಿ ಮಹಿಳೆಯೊಬ್ಬರು ಮಿಸ್ಸಿಂಗ್ ಕೇಸ್ ದಾಖಲಾಗಿರುವುದು ತಿಳಿದು ಬಂದಿತ್ತು. ಎರಡು ಕೇಸ್‌ಗಳನ್ನು ಕೂಲಂಕಷವಾಗಿ ನೋಡಿದಾಗ ಬಾಗಲೂರುನಲ್ಲಿ ಪತ್ತೆಯಾದ ಮಹಿಳೆಯ ಮೃತದೇಹವೇ ನಾಪತ್ತೆ ಆಗಿದ್ದ ಇಂದಿರಾನಗರ ನಿವಾಸಿ ದೀಪಾ ಎಂಬುದು ಬೆಳಕಿಗೆ ಬಂದಿತ್ತು. ಮೃತಳ ಬಟ್ಟೆ ಮತ್ತು ಕೈನಲ್ಲಿ ಹಾಕಿದ್ದ ವಾಚ್‌ನಿಂದ ಗುರುತು ಪತ್ತೆ ಮಾಡಲಾಗಿತ್ತು.
ಇದನ್ನೂ ಓದಿ: ಸಾವಿಗೆ ರಹದಾರಿಯಾಗುತ್ತಿದೆಯೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ?; 6 ತಿಂಗಳಲ್ಲಿ ಹಾರಿತು 84 ಜನರ ಪ್ರಾಣಪಕ್ಷಿ!
ಹಂತಕರ ಬೆನ್ನು ಬಿದ್ದ ಪೊಲೀಸರಿಗೆ ದೀಪಾಳನ್ನು ಕ್ಯಾಬ್ ಡ್ರೈವರ್ ಭೀಮರಾಯ ಕರೆದುಹೋದ ಬಗ್ಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ದೀಪಾ ನಾಪತ್ತೆ ಆಗಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಕ್ಯಾಬ್ ಡ್ರೈವರ್ ಪತ್ತೆಗೆ ಮುಂದಾಗಿ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಭೀಮರಾಯ್‌ನನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ