ತಮಿಳುನಾಡು: ಕಾರು ಚಾಲಕನನ್ನು ಅಪಹರಿಸಿ ಹತ್ಯೆ (Murder Case) ನಡೆಸಿರುವ ಘಟನೆಯು ಇಲ್ಲಿನ ಕೃಷ್ಣಗಿರಿಯ ಬಿನ್ನಮಂಗಲಂ ಸಮೀಪದ ಎಲೆಸಂದ್ರಂ ಗ್ರಾಮದ ಬಳಿ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡ ತೋಗೂರು ವಾಸಿ ಶಾಂತ ಕುಮಾರ್ ಮೃತ ವ್ಯಕ್ತಿ.
ಶಾಂತಕುಮಾರ್ ಕಾರು ಚಾಲಕನಾಗಿದ್ದು, ಈತನನ್ನು ಅಪಹರಿಸಿ ಕೊಲೆಗೈದು ಶವವನ್ನು ರಸ್ತೆ ಬದಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ. ದಾರಿಹೋಕರು ಶವವನ್ನು ಕಂಡು ಥಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆ, ಕುತ್ತಿಗೆ, ದವಡೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಮೃತ ವ್ಯಕ್ತಿಯ ಪ್ಯಾಂಟ್ ಜೇಬಿನಲ್ಲಿದ್ದ ಗುರುತಿನ ಚೀಟಿ ಮೂಲಕ ಗುರುತು ಪತ್ತೆ ಮಾಡಲಾಗಿದೆ. ದೊಡ್ಡ ತೋಗೂರು ವಾಸಿ ಅಶ್ವತ್ಥ್ ಎಂಬುವರ ಮಗ ಶಾಂತಕುಮಾರ್ (30) ಕೊಲೆಯಾಗಿರುವ ಸಂಗತಿಯು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಬಾರ್ ಗಲಾಟೆ
ಶಾಂತಕುಮಾರ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, 10 ದಿನಗಳ ಹಿಂದೆ ದೊಡ್ಡ ತೋಗೂರು ಬಳಿಯ ಬಾರ್‌ನಲ್ಲಿ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ. ರೌಡಿ ನೇಪಾಳಿ ಮಂಜು ಹಾಗೂ ಶಾಂತಕುಮಾರ್ ಗಲಾಟೆ ಮಾಡಿಕೊಂಡಿದ್ದರು ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ. ಶಾಂತಕುಮಾರ್ ಮೇಲೆ ಹಲ್ಲೆ ರೌಡಿ ನೇಪಾಳಿ ಮಂಜು ನಡೆಸಿದ್ದ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಶಾಂತಕುಮಾರ್ ದೂರು ನೀಡಿದ್ದ.
ದೂರು ವಾಪಸ್ ಪಡೆಯುವಂತೆ ರೌಡಿ ಬೆದರಿಕೆ
ದೂರು ಹಿಂಪಡೆಯುವಂತೆ ರೌಡಿ ನೇಪಾಳಿ ಮಂಜು, ಮೃತ ಶಾಂತಕುಮಾರ್‌ಗೆ ಕೊಲೆ ಬೆದರಿಕೆ ಹಾಕಿದ್ದನಂತೆ. ಆರಂಭದಲ್ಲಿ ಹಿಂಪಡೆಯುವುದಿಲ್ಲ ಎನ್ನುತ್ತಿದ್ದ ಶಾಂತಕುಮಾರ್ ಬಳಿಕ ಶುಕ್ರವಾರ ದೂರು ವಾಪಸ್ ಪಡೆದಿದ್ದಾನೆ. ಆ ನಂತರ ನಾಪತ್ತೆಯಾದ ಶಾಂತ ಕುಮಾರ್‌ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಶನಿವಾರ ಥಳಿ ಬಳಿ ಶಾಂತಕುಮಾರ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಸಂಬಂಧ ಥಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್ ಸ್ಫೋಟದ ಮರುಕ್ಷಣವೇ’ಆತ್ಮಾಹುತಿ ಬಾಂಬ್’ ಬಗ್ಗೆ ಝಾಕೀರ್ ನಾಯ್ಕ್ ಟ್ವೀಟ್! ಏನಿದು ಕನೆಕ್ಷನ್?