Site icon Vistara News

Murder Case : ವಿದ್ಯಾರ್ಥಿಗೆ ಪೆಟ್ರೋಲ್‌ ಸುರಿದು ಬೆಂಕಿ; ರಕ್ತ ಸಂಬಂಧಿಗಳ ಕ್ರೌರ್ಯಕ್ಕೆ ಪ್ರಾಣ ಬಿಟ್ಟ

college student shashank death

ಬೆಂಗಳೂರು: ಕಾಲೇಜು ವಿದ್ಯಾರ್ಥಿಯನ್ನು ಕಿಡ್ನ್ಯಾಪ್‌ (Kidnap case) ಮಾಡಿ ಪೆಟ್ರೋಲ್ ಸುರಿದು (Murder case) ಬೆಂಕಿ ಹಚ್ಚಿದ ಪ್ರಕರಣ ಮೊನ್ನೆ ನಡೆದಿತ್ತು. ಇದೀಗ ಯುವಕ ಮೂರು ದಿನಗಳು ಜೀವನ್ಮರಣ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಜು.18ರಂದು ಮೃತಪಟ್ಟಿದ್ದಾನೆ. ಬೆಂಗಳೂರಿನ ಆರ್​ಆರ್​ ನಗರ ನಿವಾಸಿ, ಕಾಲೇಜು ವಿದ್ಯಾರ್ಥಿ ಶಶಾಂಕ್​ ಮೃತ ದುರ್ದೈವಿ.

ಆರ್​ಆರ್​ ನಗರದ ರಂಗನಾಥ್​ ಮತ್ತು ಸತ್ಯಪ್ರೇಮ ದಂಪತಿ ಪುತ್ರ ಶಶಾಂಕ್​ ತನ್ನ ದೂರದ ಸಂಬಂಧಿಕರ ಯುವತಿಯನ್ನೇ ಪ್ರೀತಿಸುತ್ತಿದ್ದ. ಮೈಸೂರಿನ ಆ ಯುವತಿಗೂ ಶಶಾಂಕ್ ಮೇಲೆ ಮನಸಿತ್ತು. ಲಹರಿ ಹಾಗೂ ಶಶಾಂಕ್‌ ಪ್ರೀತಿ ಹೆಚ್ಚು ದಿನ ಗೌಪ್ಯವಾಗಿ ಇರಲಿಲ್ಲ. ಶಶಾಂಕ್ ಮನೆಯವರಿಗೆ, ಯುವತಿ ಕುಟುಂಬದವರಿಗೆಲ್ಲ ಇವರಿಬ್ಬರ ಪ್ರೀತಿ ವಿಚಾರ ಗೊತ್ತಾಗಿತ್ತು. ಆದರೆ ಯುವತಿಯ ಮನೆಯವರು ಶಶಾಂಕ್​​ನನ್ನು ಒಪ್ಪಿಕೊಂಡಿರಲಿಲ್ಲ. ಯಾವ ಕಾರಣಕ್ಕೂ ಈ ಸಂಬಂಧ ಬೇಡವೇ ಬೇಡ ಎಂದು ಹೇಳಿದ್ದರು. ಮಾತ್ರವಲ್ಲದೆ ಯುವತಿಯ ದೊಡ್ಡಪ್ಪ ಶಶಾಂಕ್‌ಗೆ ವಾರ್ನಿಂಗ್ ಕೂಡ ನೀಡಿದ್ದರು.

ಆದರೆ ಈ ಮಧ್ಯೆ ಯುವತಿ ತನಗೆ ಶಶಾಂಕ್ ಬೇಕು ಎಂದು ಕಳೆದ ಸೋಮವಾರ ಮೈಸೂರಿನಿಂದ ಬೆಂಗಳೂರಿಗೆ ಬಂದು ಇಳಿದಿದ್ದಳು. ಶಶಾಂಕ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ಶಶಾಂಕ್ ಮನೆಗೆ ನುಗ್ಗಿ, ಗಲಾಟೆ ಮಾಡಿ ಅವಳನ್ನು ಕರೆದುಕೊಂಡು ಹೋಗಿದ್ದರು. ಇಷ್ಟೆಲ್ಲ ಆದ ಮೇಲೆ ಶಶಾಂಕ್ ಕೂಡ ಗಟ್ಟಿ ಮನಸು ಮಾಡಿದ್ದ. ಇನ್ನು ಆ ಹುಡುಗಿಯ ಸಹವಾಸಕ್ಕೆ ಹೋಗುವುದಿಲ್ಲ ಎಂದಿದ್ದ. ಕಾಲೇಜಿಗೆ ಹೋಗಲು ಶುರು ಮಾಡಿದ್ದ.

ಇದನ್ನೂ ಓದಿ: Kichcha Sudeep : ಕೇಳಿದ ತಕ್ಷಣ ಹಣ ಕೋಡೋಕೆ ಸುದೀಪ್‌ ಚಿಕ್ಕ ಹುಡುಗ ಅಲ್ಲ!

ಶನಿವಾರ (ಜು. 15) ಬೆಳಗ್ಗೆ ಶಶಾಂಕ್​ನನ್ನು ಅವನ ತಂದೆ ರಂಗನಾಥ್ ಅವರೇ ಕಾಲೇಜಿಗೆ ಡ್ರಾಪ್ ಮಾಡಿದ್ದರು. ಕಾಲೇಜಿನಿಂದ ವಾಪಸ್ ಮನೆಗೆ ಬರಲು ಶಶಾಂಕ್​ ಬಸ್​ ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಯುವತಿಯ ಕಡೆಯವರು ಅವನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಶಶಾಂಕ್​​ನ ಕೈಕಾಲು ಕಟ್ಟಿ, ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು. ಬಳಿಕ ಅವನ ಮೈಮೇಲೆಲ್ಲ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದರು. ಶಶಾಂಕ್​ನ ಇಡಿ ಮೈ ಸುಟ್ಟು ಹೋಗಿತ್ತು.

ದೇಹವೆಲ್ಲ ಬೆಂಕಿಯಲ್ಲಿ ಸುಡುತ್ತಿದ್ದರೂ ಶಶಾಂಕ್‌ ಮೊಬೈಲ್‌ನಿಂದ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿ ವಿಷಯ ಮುಟ್ಟಿಸಿದ್ದ. ಮಾತ್ರವಲ್ಲದೆ ಲೋಕೆಷನ್‌ ತಿಳಿಸಿದ್ದ‌. ತನ್ನ ಮೈಗೆ ಅಂಟಿದ ಬೆಂಕಿ ಆರಿಸಲು ಮಣ್ಣನ್ನು ಮೈಮೇಲೆ ಹರಡಿಕೊಂಡು ಒದ್ದಾಡುತ್ತಿದ್ದ ಎಂದು ಘಟನೆಯನ್ನು ವಿವರಿಸಿದ್ದರು.

ಕೂಡಲೇ ಆತನನ್ನು ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಶೇ 80ರಷ್ಟು ಸುಟ್ಟಗಾಯಗಳಿಂದ ಬಳಲುತಿದ್ದ ಶಶಾಂಕ್ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಡಿದ್ದ. ಆದರೆ ಚಿಕಿತ್ಸೆ ಫಲಿಸದೇ ಜು.18ರಂದು ಮೃತಪಟ್ಟಿದ್ದಾನೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಹರಣ ಮತ್ತು ಹತ್ಯೆ ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version