ಬೆಂಗಳೂರು: ಇಲ್ಲಿನ ಲಗ್ಗೆರೆ ಸಮೀಪ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಹಂತಕರು ಮನಸೋ ಇಚ್ಛೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾರೆ. ರವಿ ಅಲಿಯಾಸ್ ಮತ್ತಿರವಿ ಎಂಬಾತನನ್ನು ಚಾಕುವಿನಿಂದ ಇರಿದು, ಸೈಜ್ ಕಲ್ಲು ಎತ್ತಿಹಾಕಿ ಕೊಂದಿದ್ದಾರೆ.
ಸಣ್ಣ ಪುಟ್ಟ ಕಿರಿಕ್ ಮಾಡಿಕೊಂಡಿದ್ದ ರವಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಾಲಿ ಜಾಮೀನಿನ ಮೇಲೆ ಹೊರಗಡೆ ಇದ್ದ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಇವನ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಕಮಲಾನಗರದಲ್ಲಿ ವಾಸವಾಗಿದ್ದವನು ಈ ಏರಿಯಾ ಸಹವಾಸವೇ ಬೇಡ ಎಂದು ಕೆಲ ವರ್ಷಗಳ ಹಿಂದೆ ಚೌಡೇಶ್ವರಿನಗರದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದ. ಜೀವನೋಪಾಯಕ್ಕಾಗಿ ಟೆಂಪೋ ಟ್ರಾವೆಲರ್ ಚಾಲಕನಾಗಿ ಜತೆಗೆ ಕುರಿ, ಮೇಕೆ ಫಾರಂ ಸಹ ನಡೆಸುತ್ತಿದ್ದ.
ಬುಧವಾರ ರಾತ್ರಿ (ಮೇ 24) ಏರಿಯಾದ ಕಾಂಗ್ರೆಸ್ ಮುಖಂಡನಾಗಿರುವ ಕೃಷ್ಣಮೂರ್ತಿ ಬರ್ತ್ ಡೇ ಪಾರ್ಟಿಗೆ ಹೋಗಿದ್ದ. ಪಾರ್ಟಿ ಮುಗಿಸಿಕೊಂಡು ಸಮೀಪದ ಸಿಎಂಎಚ್ ಬಾರ್‌ನಲ್ಲಿ ಮದ್ಯ ಸೇವಿಸಿ ಹೊರ ಬಂದಿದ್ದ. ರವಿ ಬಾರ್‌ನಿಂದ ಹೊರ ಬರುವುದನ್ನೇ ಕಾದು ಕುಳಿತಿದ್ದ ಏಳೆಂಟು ಮಂದಿ ಏಕಾಏಕಿ ದಾಳಿ ಮಾಡಿದ್ದಾರೆ. ಇವರಿಂದ ತಪ್ಪಿಸಿಕೊಂಡು ಓಡಿದ ರವಿಯನ್ನು ಅಟ್ಟಾಡಿಸಿಕೊಂಡು ಚೌಡೇಶ್ವರಿನಗರದ ಹಳ್ಳಿರುಚಿ ಹೋಟೆಲ್ ಮುಂಭಾಗ ಹಿಡಿದು ಮನಬಂದಂತೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಸೈಜ್ ಕಲ್ಲನ್ನು ರವಿಯ ಮೇಲೆ ಹಾಕಿ ಹಂತಕರು ಪರಾರಿ ಆಗಿದ್ದಾರೆ.
ರವಿಯ ಮೇಲೆ ಅಟ್ಯಾಕ್ ಮಾಡುವ ಮುನ್ನ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಮನೆಯ ಮೇಲಾಕಿದ್ದ ಫ್ಲೆಕ್ಸ್‌ನಲ್ಲಿ ರವಿಯ ಫೋಟೊ ಇತ್ತು. ಅದನ್ನು ಹಂತಕರು ಕಿತ್ತು ಬೀಸಾಡಿದ್ದರು. ಬಳಿಕ ರವಿಯ ಮೇಲೆ ಅಟ್ಯಾಕ್ ಮಾಡಿ ಪರಾರಿ ಆಗಿದ್ದಾರೆ.
ಇದನ್ನೂ ಓದಿ: Heart attack : ಜಾತ್ರೆಯಲ್ಲಿ ಆಟವಾಡುತ್ತಿದ್ದ 9ರ ಬಾಲಕ ಕುಸಿದು ಬಿದ್ದು ಸಾವು
ಈ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರವಿ ಅಲಿಯಾಸ್ ಮತ್ತಿರವಿ ಜೀವಂತವಾಗಿದ್ದಾನೆಂದು ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲಾಗಲೇ ರವಿ ಕೊನೆಯುಸಿರೆಳೆದಿದ್ದ. ಈ ಘಟನೆಗೆ ರಾಜಕೀಯ ವೈಷಮ್ಯವೂ ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ