ವಿಜಯಪುರ: ಇಲ್ಲಿನ ಚಾಂದಪುರ ಕಾಲೋನಿಯಲ್ಲಿ ದುಷ್ಕರ್ಮಿಗಳು ರೌಡಿಶೀಟರ್ ಮೇಲೆ ಫೈರಿಂಗ್ (Murder case) ಮಾಡಿರುವ ಘಟನೆ ಶನಿವಾರ ನಡೆದಿದೆ. ಹೈದರ್ ಅಲಿ ನದಾಫ್ ಮೃತ ರೌಡಿ ಶೀಟರ್ ಆಗಿದ್ದಾನೆ.
19ನೇ ವಾರ್ಡ್‌ನ ಕಾರ್ಪೊರೇಟರ್ ಆಗಿರುವ ಇಶಾತ್ ಎಂಬುವವರ ಪತಿ ಹೈದರ್ ಅಲಿ ನದಾಫ್‌ನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ಕಾರುಗಳು ಹಾಗೂ ಬೈಕ್‌ನಲ್ಲಿ ಬಂದು ಹತ್ಯೆ ಮಾಡಿದ್ದು, ದುಷ್ಕರ್ಮಿಗಳು ಪರಾರಿ ಆಗುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಲನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಪತ್ತೆಗೆ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಅನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Modi in Karnataka : ಮೆಗಾ ರೋಡ್ ಶೋನಲ್ಲಿ ಮುಗಿಲುಮುಟ್ಟಿದ ʻಮೋದಿ ಮೋದಿʼ ಘೋಷಣೆ, ತೂರಿಬಂದ ಮೊಬೈಲ್
ಮೃತ ರೌಡಿಶೀಟರ್ ಪತ್ನಿ ಇಶಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಸದಸ್ಯೆಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ವಿಧಾನಸಭಾ ಚುನಾವಣೆಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ವಿಜಯಪುರದ ಎಸ್‌ಪಿ ಎಚ್.ಡಿ.ಆನಂದಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಳೆದ ಬಾರಿ ನಡೆದ ಮಹಾನಗರ ಪಾಲಿಕೆಯ ಚುನಾವಣೆಯ ದ್ವೇಷ ಹಿನ್ನೆಲೆ ರೌಡಿಶೀಟರ್ ಹೈದರ್ ಆಲಿ ನದಾಫ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಾಲ್ಕಕ್ಕಿಂತ ಹೆಚ್ಚು ಬಾರಿ ಹೈದರ್ ಅಲಿ ನದಾಫ್‌ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೇ, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದ್ದು, ಲೈಸೆನ್ಸ್ ಗನ್‌ನಿಂದ ಈ ಹತ್ಯೆ ಮಾಡಿಲ್ಲ ಎನ್ನಲಾಗಿದೆ.