Site icon Vistara News

Murder case : ಕೋಳಿ ಪದಾರ್ಥದ ವಿಷಯದಲ್ಲಿ ಜಗಳ; ಮಗನನ್ನು ಬಡಿಗೆಯಿಂದ ಹೊಡೆದು ಕೊಂದ ತಂದೆ

murder

#image_title

ಕಡಬ (ದಕ್ಷಿಣ ಕನ್ನಡ ಜಿಲ್ಲೆ): ಸಣ್ಣ ಸಣ್ಣ ಸಂಗತಿಗಳಿಗೂ ಕೆಲವರು ತಮ್ಮ ವಿವೇಕವನ್ನು ಕಳೆದುಕೊಳ್ಳುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ಅಂತಹುದೇ ಒಂದು ಘಟನೆ ನಡೆದಿದೆ. ಸಿಟ್ಟಿನ ಭರದಲ್ಲಿ ತಂದೆಯೊಬ್ಬ ತನ್ನ ಮಗನನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ಕಾರಣವಾದ ಅಂಶ ತುಂಬಾ ಸಣ್ಣದು. ಮನೆಯಲ್ಲಿ ಕೋಳಿ ಪದಾರ್ಥ ಮಾಡಿದ್ದರು. ಅದು ತಾನು ಬರುವಾಗ ಖಾಲಿ ಆಗಿತ್ತೆಂದು ಮಗ ಸಿಟ್ಟಿಗೆದ್ದಿದ್ದ. ತಂದೆ ಮತ್ತು ಮಗನ ನಡುವೆ ಜಗಳ ಶುರುವಾಗಿದೆ. ಅದು ಸಾವಿನಲ್ಲಿ (Murder case) ಅಂತ್ಯವಾಗಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ಈ ಘಟನೆ ನಡೆದಿದೆ. ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಎಂಬಾತನೇ ತನ್ನ ಮಗ ಶಿವರಾಮ (32) ನನ್ನು ಬಡಿಗೆಯಿಂದ ಬಡಿದು ಕೊಂದವನು. ಅವರಿಬ್ಬರ ನಡುವೆ ಕೋಳಿ ಪದಾರ್ಥಕ್ಕೆ ಸಂಬಂಧಿಸಿ ಆರಂಭವಾದ ಜಗಳ ಕೊನೆಗೆ ಮಾತಿಗೆ ಮಾತು ಬೆಳೆದು ತಂದೆಯಿಂದ ಮಗನ ಹತ್ಯೆ ನಡೆದಿದೆ.

ಈ ಜಗಳ ನಡೆದಿದ್ದು ಮಂಗಳವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ. ಶೀನ ಅವರ ಮನೆಯಲ್ಲಿ ಮಂಗಳವಾರ ಕೋಳಿ ಪದಾರ್ಥ ಮಾಡಿದ್ದರು. ಆದರೆ, ರಾತ್ರಿ ಶಿವರಾಮ ಮನೆಗೆ ಬರುವ ಹೊತ್ತಿಗೆ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಆಕ್ಷೇಪಿಸಿ ಶಿವರಾಮ ಮಾತನಾಡತೊಡಗಿದ.

ಕೋಳಿ ಪದಾರ್ಥ ಖಾಲಿಯಾಗಿದ್ದು ಯಾಕೆ ಎನ್ನುವ ವಿಚಾರದಲ್ಲಿ ತಂದೆ ಸಾಕಷ್ಟು ವಿಚಾರಗಳನ್ನು ಹೇಳಿದರೂ ಮಗ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ತಂದೆ ಶೀನ ಮತ್ತು ಮಗ ಶಿವರಾಮನ ನಡುವೆ ಜಗಳ ಆರಂಭವಾಯಿತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ.

ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಒಡೆದಿದ್ದು, ಇದರಿಂದ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ಹೇಳಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮನ ಮೃತ ದೇಹ ಕಡಬ ಆಸ್ಪತ್ರೆಯಲ್ಲಿ ಇಡಲಾಗಿದೆ.

ಇದನ್ನೂ ಓದಿ : Girl power : ತನ್ನನ್ನು ಚುಡಾಯಿಸಿದ ಬೀದಿ ಕಾಮಣ್ಣನನ್ನು ರೋಡಲ್ಲೇ ಅಟ್ಟಾಡಿಸಿ ಹೊಡೆದ ಕಾಲೇಜು ವಿದ್ಯಾರ್ಥಿನಿ

Exit mobile version