Site icon Vistara News

Murder Case : ಮದುವೆಗೆ ಪೀಡಿಸುತ್ತಿದ್ದ ಪ್ರಿಯಕರ; ಬ್ಲ್ಯಾಕ್‌ಮೇಲ್‌ ಮಾಡಿದವನ ಕೊಂದ ತಂದೆ!

Devid and manjunath

ಬೆಂಗಳೂರು: ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಕರೆಸಿ ರಾಡ್‌ನಿಂದ ಹಲ್ಲೆ‌ ಮಾಡಿ ಚಾಕುವಿನಿಂದ ಇರಿದು ಹತ್ಯೆ (Murder Case) ಮಾಡಲಾಗಿದೆ. ಬೆಂಗಳೂರಿನ ಅಶೋಕನಗರ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಬಳಿ ಘಟನೆ ನಡೆದಿದೆ. ಡೇವಿಡ್ (22) ಕೊಲೆಯಾದವನು. ಯುವತಿ ತಂದೆ ಮಂಜುನಾಥ್ ಎಂಬಾತನಿಂದ ಕೃತ್ಯ ನಡೆದಿದೆ.

ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ಮಂಜುನಾಥ್‌ ಕುಟುಂಬ ವಾಸವಾಗಿತ್ತು. ಆಟೋ ಡ್ರೈವರ್ ಆಗಿದ್ದ ಡೇವಿಡ್‌ ಹಾಗೂ ಮಂಜುನಾಥ್ ಅವರ ಮಗಳು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಮದುವೆ ಮಾಡಿ ಕೊಡುವಂತೆ ಪದೇಪದೆ ಪೀಡಿಸುತ್ತಿದ್ದ. ಮದುವೆಗೆ ನಿರಾಕರಿಸಿದರೆ ಮಗಳೊಂದಿಗೆ ಇರುವ ಫೋಟೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.

ನಿಮ್ಮ ಮಗಳ ಫೋಟೊ, ವಿಡಿಯೊ ನನ್ನ ಬಳಿ ಇದೆ ಎಂದು ಡೇವಿಡ್ ಹೆದರಿಸುತ್ತಿದ್ದ. ಇದರಿಂದ ಮಗಳ ಮರ್ಯಾದೆ ಎಲ್ಲಿ ಹಾಳಾಗಿ ಬಿಡುತ್ತೆ ಎಂದು ಆತಂಕಗೊಂಡ ಮಂಜುನಾಥ್‌ ಅವರು ಡೇವಿಡ್‌ನನ್ನು ಕೊಂದು ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಮಾತನಾಡುವ ನೆಪದಲ್ಲಿ ಡೇವಿಡ್‌ನನ್ನು ಕರೆಸಿಕೊಂಡ ಮಂಜುನಾಥ್‌ ರಾಡ್‌ನಿಂದ ಹೊಡೆದಿದ್ದಾರೆ. ಬಳಿಕ ಡೇವಿಡ್‌ ಕೆಳಗೆ ಬೀಳುತ್ತಿದ್ದಂತೆ ಚಾಕುವಿನಿಂದ ಇರಿದು ನಂತರ ಹಾಲೋಬ್ರಿಕ್ಸ್ ಕಲ್ಲನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಸದ್ಯ ಆರೋಪಿ ಮಂಜುನಾಥ್‌ನನ್ನು ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡೇವಿಡ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: World Cup 2023: ವಿಶ್ವಕಪ್‌ ಕ್ರಿಕೆಟ್‌ ಬೆಟ್ಟಿಂಗ್‌; ಸಿಸಿಬಿ ದಾಳಿ ವೇಳೆ ಚಿನ್ನದ ಬಿಸ್ಕೆಟ್‌ಗಳು ಪತ್ತೆ

ಕಿರುಕುಳ ಎಂದು ದೂರು ಕೊಡಲು ಹೋದರೆ ಠಾಣೆಯಲ್ಲೇ ಕತ್ತು ಕೊಯ್ದ ಗಂಡ

ಹಾಸನ: ಮನೆಯಲ್ಲಿ ವಿಪರೀತ ಹಿಂಸೆ (Domestic Violence) ಕೊಡುತ್ತಿದ್ದ ಗಂಡನ ವಿರುದ್ಧ ಮಹಿಳೆಯೊಬ್ಬರು ಧೈರ್ಯ ಮಾಡಿ ಠಾಣೆಗೆ ದೂರು ನೀಡಲು ಹೋದರೆ ಗಂಡ ಪೊಲೀಸರ ಮುಂದೆಯೇ ಆಕೆಯ ಕತ್ತು ಕೊಯ್ದ (Husband attacks wife) ಭಯಾನಕ ಘಟನೆ ಹಾಸನ ಮಹಿಳಾ ಪೊಲೀಸ್‌ ಠಾಣೆಯಲ್ಲಿ (Hasana womens police station) ನಡೆದಿದೆ.

ಹರೀಶ್‌ ಎಂಬಾತನೇ ತನ್ನ ಹೆಂಡತಿ ಶಿಲ್ಪಾ ಅವರನ್ನು ಪೊಲೀಸ್‌ ಠಾಣೆಯಲ್ಲೇ ಕತ್ತು ಕೊಯ್ದು ದಾರ್ಷ್ಟ್ಯ ಮೆರೆದ ಗಂಡ. ಆತ ಪೊಲೀಸ್‌ ಠಾಣೆಯಲ್ಲಿ ಪೊಲೀಸರ ಮುಂದೆಯೇ ತನ್ನ ಪತ್ನಿಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆಗೆ ಯತ್ನಿಸಿದ್ದಾನೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಕೊಲೆ ಮಾಡಲು ಮುಂದಾಗಿದ್ದಾನೆ.

ಶಿಲ್ಪಾ ಮತ್ತು ಹರೀಶ್‌ ನಡುವೆ ಆರು ವರ್ಷದ ಹಿಂದೆ ಮದುವೆ ನಡೆದಿತ್ತು. ಇಬ್ಬರೂ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಹರೀಶ್‌ ಒಬ್ಬ ಅನುಮಾನ ಪಿಶಾಚಿ. ಆತ ಪ್ರತಿ ಹಂತದಲ್ಲೂ ಹೆಂಡತಿಯ ಮೇಲೆ ಅನುಮಾನಿಸುತ್ತಿದ್ದ. ಹೀಗಾಗಿ ಪ್ರತಿ ನಿತ್ಯ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಅವನು ಬಂದು ಹೊಡೆಯುತ್ತಿದ್ದ. ಇತ್ತ ಶಿಲ್ಪಾಗೂ ಗಂಡನ ಮೇಲೆ ಅನುಮಾನ ಇತ್ತು. ಹೀಗಾಗಿ ಮನೆಯಲ್ಲಿ ಜಗಳ ಎನ್ನುವುದು ಸಾಮಾನ್ಯವಾಗಿತ್ತು.

ಹಲವಾರು ಬಾರಿ ಪರಸ್ಪರ ಹಲ್ಲೆ, ಕೊಲೆಯತ್ನಗಳು ನಡೆದಾಗ ಇನ್ನು ಕೊಂದೇ ಬಿಡುತ್ತಾನೆ ಅನಿಸಿದಾಗ ಶಿಲ್ಪಾ ಆತನ ವಿರುದ್ದ ಹಾಸನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಗಂಡ ತೊಂದರೆ ಕೊಡುತ್ತಿದ್ದಾನೆ ಎಂಬ ಶಿಲ್ಪಾ ದೂರಿನ ಅನ್ವಯ ಪೊಲೀಸರು ಎಚ್ಚರಿಕೆ ನೀಡಲೆಂದು ಹರೀಶ್‌ ನನ್ನು ಬರ ಹೇಳಿದ್ದರು. ಶಿಲ್ಪಾ ಕೂಡಾ ಬಂದಿದ್ದಳು. ಪಿಎಸ್‌ಐ ಉಮಾ ಅವರು ಹರೀಶ್‌ ನನ್ನು ವಿಚಾರಣೆ ನಡೆಸಿದ್ದರು.

ಹೀಗೆ ವಿಚಾರಣೆ ನಡೆಸಿದ ಬೆನ್ನಿಗೇ ಹರೀಶ್‌ ಠಾಣೆಯಲ್ಲೇ ಇದ್ದ ಪತ್ನಿಯ ಮೇಲೆ ಏರಿಹೋಗಿದ್ದಾನೆ. ತಾನು ಮೊದಲೇ ತಂದಿದ್ದ ಚಾಕುವನ್ನು ಬಳಸಿ ಪತ್ನಿಯ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಆತನ ಕೈಯಲ್ಲಿದ್ದ ಚಾಕುವನ್ನು ಕಿತ್ತುಕೊಂಡಿದ್ದಾರೆ.

ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ನಡುವೆ, ಹರೀಶ್‌ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version