ಕೋಲಾರ: ಪತ್ನಿಯ ಅನೈತಿಕ ಸಂಬಂಧಕ್ಕೆ (Illicit relationship) ಕೋಲಾರದ ಜಾನಪದ ಕಲಾವಿದ (murder Case) ಕೊಲೆಯಾಗಿದ್ದಾರೆ. ಕೃಷ್ಣಮೂರ್ತಿ (45) ಹತ್ಯೆಯಾದ ದುರ್ದೈವಿ. ಕೃಷ್ಣಮೂರ್ತಿಯ ಪತ್ನಿ ಸೌಮ್ಯ ಹಾಗೂ ಆಕೆಯ ಪ್ರಿಯಕರ ಶ್ರೀಧರ್ ಈ ಹತ್ಯೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಸೋಮವಾರ (ಮೇ 29) ರಾತ್ರಿ 8 ಗಂಟೆ ಸುಮಾರಿಗೆ ಜನ್ನಘಟ್ಟ ಗ್ರಾಮದ ಕಲಾವಿದ ಕೃಷ್ಣಮೂರ್ತಿ (45) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಮೇಲ್ನೋಟಕ್ಕೆ ಇದು ಅಪಘಾತ ಎಂದೇ ಎಲ್ಲರೂ ತಿಳಿದುಕೊಂಡಿದ್ದರು. ಅಪಘಾತದ ಸುದ್ದಿ ಹರಿದಾಡುತ್ತಿದ್ದಂತೆ ಸಹ ಕಲಾವಿದರು, ವಿವಿಧ ಸಂಘಟನೆಗಳ ಮುಖಂಡರು ನಿಧನ ಸುದ್ದಿಗೆ ಮೊರಗಿದ್ದರು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಇದು ಅಪಘಾತವಲ್ಲ ಬದಲಿಗೆ ಪ್ರೀಪ್ಲ್ಯಾನ್ಡ್ ಮರ್ಡರ್ ಎಂದು ತಿಳಿದು ಬಂದಿದೆ.
ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾಗಿದ್ದರು. ತಮ್ಮ ಕಂಠದಿಂದಲೇ ಎಲ್ಲರ ಮನಸ್ಸು ಗೆದ್ದಿದ್ದ ಕೃಷ್ಣಮೂರ್ತಿ ಸಂಸಾರದ ನೌಕೆಯಲ್ಲಿ ಸೋತಿದ್ದರು. ಪತ್ನಿ ಅನೈತಿಕ ಸಂಬಂಧ ತಿಳಿದಿದ್ದರೂ, ಮಕ್ಕಳ ಭವಿಷ್ಯಕ್ಕಾಗಿ ಸಂಸಾರವನ್ನು ಮುನ್ನಡೆಸಿದರು. ಆದರೆ ಪತಿ ತನ್ನ ಪ್ರೀತಿಗೆ ಅಡ್ಡಿಯಾಗಿದ್ದಾನೆ ಎಂದುಕೊಂಡ ಪತ್ನಿ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿ, ಬಳಿಕ ಬೈಕ್ ಅಪಘಾತ ಎಂದು ಬಿಂಬಿಸಿದ್ದಳು.
ಒಂದು ವರ್ಷದ ಹಿಂದೆಯೇ ಆರೋಪಿ ಸೌಮ್ಯ, ಪತಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಹೋಗಿದ್ದಳು. ಆದರೆ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಇದಾದ ಬಳಿಕ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾ ಪತಿ ಕೃಷ್ಣಮೂರ್ತಿ ಜತೆಗೆ ತಗಾದೆ ತೆಗೆಯುತ್ತಿದ್ದಳು ಎಂದು ಮೃತನ ತಾಯಿ ಚೌಡಮ್ಮ ಅಳಲು ತೋಡಿಕೊಂಡಿದ್ದಾರೆ.
ಮೂವರು ಪುಟ್ಟ ಮಕ್ಕಳಿಗಾಗಿ ಕೃಷ್ಣಮೂರ್ತಿ ಸಂಬಂಧಿಕರು, ಕುಟುಂಬಸ್ಥರು ನ್ಯಾಯ ಪಂಚಾಯತಿ ಮಾಡಿದ್ದರು. ಆದರೆ ಸೌಮ್ಯ ತನ್ನ ಹಳೆ ಚಾಳಿ ಮುಂದುವರಿಸಿದ್ದಳು. ಪತಿ ಮನೆಯಿಲ್ಲದೆ ವೇಳೆ ಪ್ರಿಯಕರ ಶ್ರೀಧರ್‌ನನ್ನು ಕರೆಸಿಕೊಳ್ಳುತ್ತಿದ್ದಳು. ಅಲ್ಲದೆ ಇತ್ತೀಚೆಗೆ ಆತನೊಂದಿಗೆ ಸುತ್ತಾಟ ಹೆಚ್ಚು ಮಾಡಿದ್ದಳು. ಇದನ್ನು ಪ್ರಶ್ನಿಸಿದ್ದಕ್ಕೆ ಕೃಷ್ಣಮೂರ್ತಿಗೆ ಹಲ್ಲೆ ಮಾಡಿ, ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಡ್‌ನಿಂದ ಹೊಡೆದು ಕೊಂದುಬಿಟ್ಟರು!
ಸೋಮವಾರ ಸಂಜೆ ದಿಢೀರ್ ಕೃಷ್ಣಮೂರ್ತಿಗೆ ಕರೆ ಮಾಡಿದ ಪತ್ನಿ ಸೌಮ್ಯ ನಯವಾಗಿ ಮಾತನಾಡಿ, ಆತ ಎಲ್ಲಿದ್ದಾನೆ ಎಂದು ತಿಳಿದುಕೊಂಡಿದ್ದಾಳೆ. ಬಳಿಕ ಪ್ರಿಯಕರಿಗೆ ಪಿನ್ ಟು ಪಿನ್ ಮಾಹಿತಿ ನೀಡಿದ್ದಾಳೆ. ಗ್ರಾಮದ ರೈಲ್ವೆ ಅಂಡರ್ ಪಾಸ್ ಬಳಿ ಬೈಕ್‌ನಲ್ಲಿ ಕೃಷ್ಣಮೂರ್ತಿ ಬರುತ್ತಿದ್ದಂತೆಯೇ ಶ್ರೀಧರ್ ರಾಡ್‌ನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ರಾಡ್‌ನಿಂದ ಹೊಡೆದ ರಭಸಕ್ಕೆ ಕೃಷ್ಣಮೂರ್ತಿ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಪ್ರಿಯಕರನಿಂದ ಹತ್ಯೆ ಮಾಡಿಸಿದ ಸೌಮ್ಯ ಅನುಮಾನ ಬಾರದಂತೆ ಬೈಕ್‌ನಿಂದ ಬಿದ್ದು ತನ್ನ ಪತಿ ಮೃತಪಟ್ಟಿರುವುದಾಗಿ ಎಲ್ಲರನ್ನೂ ನಂಬಿಸಿದ್ದಾಳೆ.
ಇದನ್ನೂ ಓದಿ: Road Accident : ಅತಿ ವೇಗ ತಂದ ಆಪತ್ತು; ಕ್ಯಾಂಟರ್ ಡಿಕ್ಕಿಯಾಗಿ ಹೋಂ ಗಾರ್ಡ್ ಸೇರಿ ಇಬ್ಬರ ದುರ್ಮರಣ
ಆದರೆ ಇದು ಅಪಘಾತವಲ್ಲ ಕೊಲೆ ಎಂದು ಕೃಷ್ಣಮೂರ್ತಿ ಸಂಬಂಧಿಕರು ಅನುಮಾನವನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ತನಿಖೆ ಕೈಗೊಂಡು ಸೌಮ್ಯಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಶ್ರೀನಿವಾಸಪುರ ತಾಲೂಕಿನ ಚೊಕ್ಕರೆಡ್ಡಪಲ್ಲಿ ಶ್ರೀಧರ್ ಹಾಗೂ ಆತನ ಸ್ನೇಹಿತ ಶ್ರೀಧರ್‌ನೊಂದಿಗೆ ಸೇರಿ ಕೃಷ್ಣಮೂರ್ತಿಯನ್ನ ಹತ್ಯೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿಬಂದಿದೆ. ಸದ್ಯ ಮೂವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ