ಬೆಂಗಳೂರು: ನಗರದ ಉತ್ತರಹಳ್ಳಿಯ ಸ್ಪೈಸ್ ಬಾರ್‌ನಲ್ಲಿ ಭಾನುವಾರ ರಾತ್ರಿ ನಡೆದ ರೌಡಿಶೀಟರ್ ಶಿವರಾಜ್ ಕೊಲೆ (Murder Case) ಪ್ರಕರಣಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ನಡೆದು ಕೇವಲ 24 ಗಂಟೆಯಲ್ಲೇ ಬಂಧನ ನಡೆದಿದೆ. ಮಂಜುನಾಥ್, ಪ್ರಜ್ವಲ್, ಸುಮಂತ್ , ಪ್ರಶಾಂತ್, ರಾಮಕೃಷ್ಣ ಬಂಧಿತ ಅರೋಪಿಗಳು.
ರೌಡಿಶೀಟರ್ ಶಿವರಾಜ್ ಮತ್ತು ಮಂಜು ಅಲಿಯಾಸ್ ಪೋಲಾರ್ ಎಂಬಾತನೊಂದಿಗೆ ಭಾನುವಾರ ರಾತ್ರಿ ಬಾರ್‌ಗೆ ತೆರಳಿದ್ದರು. ಈ ವೇಳೆ ಕಂಠಪೂರ್ತಿ ಕುಡಿದು ಯಾವುದೊ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿ, ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಒಬ್ಬರಿಗೊಬ್ಬರು ಕುಡಿದ ಮತ್ತಿನಲ್ಲಿ ಬಡಿದಾಡಿಕೊಂಡಿದ್ದು, ಸಿಟ್ಟಿಗೆದ್ದ ಮಂಜ ಶಿವರಾಜ್‌ನ ತಲೆಗೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾನೆ. ಕುಸಿದು ಬಿದ್ದ ಮಂಜನನ್ನು ಕೂಡಲೇ ಬಾರ್ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ನಿಜಕ್ಕೂ ಅಲ್ಲಿ ಆಗಿದ್ದೇನು?
ರೌಡಿ ಶೀಟರ್ ಶಿವರಾಜ್ ಮತ್ತು ಆರೋಪಿಗಳಾದ ಮಂಜುನಾಥ್, ಪ್ರಜ್ವಲ್, ಸುಮಂತ್, ಪ್ರಶಾಂತ್, ರಾಮಕೃಷ್ಣ ಅವರು ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಶಿವರಾಜ್ ಫುಲ್ ಟೈಟ್ ಆಗಿ ಬಾರ್‌ನಿಂದ ಹೊರಗಡೆ ಹೊರಟಿದ್ದ. ಆತ ಹೊರಗೆ ಹೋಗುವುದನ್ನು ನೋಡಿದ ಮಂಜುನಾಥ್, ʻʻನೋಡೊ ಫುಲ್ ಟೈಟ್ ಆಗಿ ಹೇಗ್ ತೂರಾಡ್ಕೊಂಡು ಹೋಗ್ತಿದ್ದಾನೆ (ಗಾ… )ʼʼ ಎಂದು ಹೇಳಿದ್ದ
ಈ ಮಾತು ಕೇಳಿಸಿಕೊಂಡು ತಿರುಗಿ ಬಂದ ಶಿವರಾಜ್, ಮಂಜುನಾಥ್‌ಗೆ ಹಲ್ಲೆ ಮಾಡಿದ್ದ. ಕಪಾಳಕ್ಕೆ ಹೊಡೆದು ಕಳುಹಿಸಿದ್ದ. ಕಪಾಳಕ್ಕೆ ಹೊಡೆಸಿಕೊಂಡು ಕೋಪದಿಂದ ಹೊರಗೆ ಬಂದ ಮಂಜುನಾಥ್ ಹೊರಗೆ ಬಂದು ಕಾಯುತ್ತಿದ್ದ. ಶಿವರಾಜ್ ಬಾರ್ ನಿಂದ ಹೊರಗೆ ಬರುತ್ತಿದ್ದಂತೆಯೇ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಉಳಿದದವರು ಸೇರಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು.
ಕೊಲೆ ಮಾಡಿದ ಬಳಿಕ ಸಿನಿಮಾ ಸ್ಟೈಲ್ ಬಲ್ಲಿ ಸಾಕ್ಷಿಗಳ ನಾಶಕ್ಕೆ ಯತ್ನಿಸಿದ ಆರೋಪಿಗಳು ಮೊದಲು ಕೊಲೆ ಮಾಡಿದ್ದ ವೇಳೆ ಹಾಕಿದ್ದ ಬಟ್ಟೆಗಳ ಬದಲಾಯಿಸಿದರು. ಹೊಸ ಬಟ್ಟೆಗಳನ್ನು ತೆಗೆದುಕೊಂಡು ರಕ್ತಸಿಕ್ತ ಬಟ್ಟೆಗಳನ್ನು ಮೈಸೂರು ಹೈವೆಯಲ್ಲಿ ಚಲಿಸುವ ಲಾರಿಯೊಂದರ ಮೇಲೆ ಎಸೆದಿದ್ದಾರೆ.
ಈ ನಡುವೆ ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಕೊಲೆ ನಡೆದ 24 ಘಂಟೆ ಒಳಗೆ ಮದ್ದೂರು ಬಳಿ ಬಂಧಿಸಿದ್ದಾರೆ. ಇನ್ನೂ ಒಬ್ಬ ತಲೆ ಮರೆಸಿಕೊಂಡಿದ್ದು ಅವನಿಗಾಗಿ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ : BJP Ticket: ಬಿಜೆಪಿಗೆ ಹಲವು ಕಡೆ ಬಂಡಾಯದ ಬಿಸಿ, ಸವದಿಗೆ ಕಾಂಗ್ರೆಸ್ ಗಾಳ, ಶೆಟ್ಟರ್ ನಡೆ ಏನು?