Site icon Vistara News

Murder Case: ನಿದ್ರೆ ಮಾತ್ರೆ ಕೊಟ್ಟು ಸಾಯಿಸಲು ತಾಯಿಯೇ ಹೇಳಿದ್ದಳು; ಕರಾಳ ಕಥೆ ಬಿಚ್ಚಿಟ್ಟ ಸೆನಾಲಿ

murder case

ಬೆಂಗಳೂರು: ಹೆತ್ತ ತಾಯಿಯನ್ನೇ ಕೊಂದ ಮಗಳೊಬ್ಬಳು ಸೂಟ್ ಕೇಸ್‌ನಲ್ಲಿ ಶವ ಹೊತ್ತು ಪೊಲೀಸ್‌ ಠಾಣೆ ತೆರಳಿದ ಘಟನೆ (Murder Case) ನಗರದ ಮೈಕೊಲೇಔಟ್‌ನಲ್ಲಿ ಜೂನ್‌ 12 ರಂದು ನಡೆದಿತ್ತು. ಇದೀಗ ಈ ಪ್ರಕರಣದಲ್ಲಿ ತಾಯಿಯೇ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಹೇಳಿದ್ದರು ಎನ್ನಲಾಗಿದೆ. ಸೆನಾಲಿ ಸೇನ್ (39) ಕೊಲೆ ಆರೋಪಿ. ಬೀವಾ ಪಾಲ್ (70) ಹತ್ಯೆಯಾದವರು.

ಮೂಲತಃ ಕೊಲ್ಕತ್ತಾ ನಿವಾಸಿಗಳಾದ ಸೆನಾಲಿ ಸೇನ್‌, ಬಿಳೇಕಳ್ಳಿಯ ಎನ್‌ಎಸ್‌ಆರ್ ಗ್ರೀನ್ ಅಪಾರ್ಟ್‌ಮೆಂಟ್‌ನ 106ನೇ ಫ್ಲ್ಯಾಟ್‌ನಲ್ಲಿ ಕಳೆದ ಆರು ವರ್ಷದಿಂದ ವಾಸವಾಗಿದ್ದರು. ಕೆಲವು ವರ್ಷಗಳ ಹಿಂದಷ್ಟೇ ಸೆನಾಲಿ ಅವರ ತಂದೆ ತೀರಿ ಹೋಗಿದ್ದರು. ಸೆನಾಲಿ ಸೇನ್‌ಗೆ ಒಬ್ಬ ಮಗ ಇದ್ದು, ತಾಯಿ ಬೀವಾ ಪಾಲ್ ಹಾಗೂ ಅತ್ತೆ ಒಟ್ಟಾಗಿದ್ದರು. ಆದರೆ ತಾಯಿ ಹಾಗೂ ಅತ್ತೆ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಹತ್ಯೆಗೂ ಮುನ್ನ ಸೆನಾಲಿ ಹಾಗೂ ತಾಯಿ ಬೀವಾ ಪಾಲ್ ಒಟ್ಟಾಗಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತಾಡಿಕೊಂಡಿದ್ದರು. ಬೀವಾ ಪಾಲ್‌ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಸೆನಾಲಿಗೆ ಹೇಳಿದ್ದರು ಎನ್ನಲಾಗಿದೆ. ನೀನು ನನ್ನ ತಂದೆ ಬಳಿ ಹೋಗು ನಾನು ಜೈಲಿಗೆ ಹೋಗುವೆ ಎಂದು ಹತ್ಯೆಗೂ ಮುನ್ನ ಈ ಬಗ್ಗೆ ಮಾತನಾಡಿಕೊಂಡಿದ್ದರು ಎನ್ನಲಾಗಿದೆ. ಬೀಗರ ಜಗಳಕ್ಕೆ ಬೇಸತ್ತ ಬೀವಾ ಪಾಲ್‌ಗೆ ಮಗಳು ಸೆನಾಲಿ ಮುಂಜಾನೆಯಂದು 20 ನಿದ್ರೆ ಮಾತ್ರೆಗಳನ್ನು ನುಂಗಿಸಿದ್ದಾಳೆ. ತಾಯಿ ಹೊಟ್ಟೆ ನೋವು ಎಂದಾಗ ಸೆನಾಲಿ ಸೇನ್‌ ತನ್ನ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.

ಸೂಟ್‌ಕೇಸ್‌ನಲ್ಲಿ ತಾಯಿಯ ಮೃತದೇಹದೊಂದಿಗೆ ತಂದೆ ಫೋಟೊ ಇಟ್ಟಿದ್ದ ಸೊನಾಲಿ

ಮಗನಿಗೂ ಕಾಡುತಿತ್ತು ಮಾನಸಿಕ ತೊಂದರೆ

ಅತ್ತೆ-ತಾಯಿಯ ಜಗಳದಿಂದ ಸೆನಾಲಿ ಮಾತ್ರವಲ್ಲ, ಆಕೆಯ ಮಗನೂ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಇತ್ತ ಮಗನ ಚಿಂತೆ ಇನ್ನೊಂದು ಕಡೆ ಇವರಿಬ್ಬರ ಜಗಳದಲ್ಲಿ ಸಿಲುಕಿದ್ದ ಸೆನಾಲಿ ಜೀವನದಲ್ಲಿ ಬೇಸತ್ತು ಹೋಗಿದ್ದಳು.

ತಾಯಿಯ ಮೃತ ದೇಹದೊಂದಿಗೆ ಸಮಯ ಕಳೆದಿದ್ದ ಸೆನಾಲಿ

ತಾಯಿ-ಮಗಳ ನಡುವೆ ನಿರಂತರವಾಗಿ ಮಾತುಕತೆ ನಡೆಯುತ್ತಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ನಡೆದ ಬೆಳವಣಿಗೆ ಯಾವುದು ಕೂಡ ಸೆನಾಲಿ ಅತ್ತೆಗೆ ತಿಳಿಯಲಿಲ್ಲ. ಮನೆಯ ರೂಮಿನೊಳಗೆ ತಾಯಿ-ಮಗಳು ಸೇರಿಕೊಂಡಿದ್ದು, ಸದ್ದು ಗದ್ದಲವಿಲ್ಲದೆ ತಾಯಿಯ ಹತ್ಯೆ ಮಾಡಿದ್ದಾಳೆ. ಅನಂತರ ಕೆಲವು ನಿಮಿಷಗಳ ಕಾಲ ತಾಯಿಯ ಮೃತದೇಹದೊಂದಿಗೆ ಕುಳಿತಿದ್ದಾಳೆ. ಕೊನೆಗೆ ಯಾರಿಗೂ ತಿಳಿಸದೆ ಟ್ರಾಲಿ ಸೂಟ್ ಕೇಸ್‌ನಲ್ಲಿ ತಾಯಿಯ ಮೃತದೇಹದೊಂದಿಗೆ ತಂದೆಯ ಫೋಟೊವನ್ನು ಇಟ್ಟುಕೊಂಡಿದ್ದಾಳೆ.

ಇದನ್ನೂ ಓದಿ: ಭೀಮಾತೀರದಲ್ಲಿ ಹರಿಯಿತು ರಕ್ತ; ಮತ್ತೊಬ್ಬ ಮಹಿಳೆಯ ಭೀಕರ ಹತ್ಯೆ

ಉಬರ್ ಮುಖಾಂತರ ಆಟೋ ಬುಕ್ ಮಾಡಿ ನೇರವಾಗಿ ಮೈಕೊಲೇಔಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಸೆನಾಲಿ ಸೇನ್ ಕೃತ್ಯ ಕಂಡು ದಂಗಾಗಿ ಹೋಗಿರುವ ಪೊಲೀಸರು, ಸದ್ಯ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಬಂಧಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗ ರವಾನಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ಸೋಮವಾರ (ಜೂ.12) ಮಧ್ಯಾಹ್ನ ಮಹಿಳೆಯೊಬ್ಬರು ಮೈಕೋ ಲೇಔಟ್ ಠಾಣೆಗೆ ಸೂಟ್ ಕೇಸ್ ಸಮೇತ ಬಂದಿದ್ದರು. ಸಬ್ ಇನ್ಸ್‌ಪೆಕ್ಟರ್ ಬಳಿ ನಾನು ನನ್ನ ತಾಯಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಶವ ತೋರಿಸಿದ್ದಾರೆ. ಕೂಡಲೇ ನಮ್ಮ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.

ಪ್ರಾಥಮಿಕ‌ ತನಿಖೆಯಲ್ಲಿ ಕೌಟುಂಬಿಕ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಆರೋಪಿತೆ ಹೇಳಿದ್ದಾರೆ. ಸೊನಾಲಿ ಕಳೆದ ಐದು ವರ್ಷದ ಹಿಂದೆ ತಾಯಿಯನ್ನು ಗಂಡನ ಮನೆಗೆ ಕರೆದುಕೊಂಡು ಬಂದಿದ್ದಳು. ಇದರಿಂದಾಗಿ ಅತ್ತೆ ಹಾಗೂ ಅಮ್ಮನ ನಡುವೆ ಜಗಳ ಆಗುತ್ತಿತ್ತು. ಕೌಟುಂಬಿಕ ಕಾರಣಗಳಿಂದ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿ ಇದೆ. ಹತ್ಯೆ ಮಾಡಿದಾಗ ಆರೋಪಿತೆಯ ಅತ್ತೆ ಒಂದು ರೂಮ್‌ನಲ್ಲಿ ಇದ್ದರು. ಮತ್ತೊಂದು ರೂಮ್‌ನಲ್ಲಿ ಸೆನಾಲಿ ಮಗು ಕೂಡ ಇತ್ತು. ಗಂಡ ಖಾಸಗಿ ಕಂಪನಿ ಉದ್ಯೋಗಿ ಆಗಿದ್ದು, ಆತ ಕೆಲಸಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version