ಆನೇಕಲ್: ನಿದ್ದೆಗೆ ಜಾರಿದ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಪತಿಯೊಬ್ಬ ಕೊಂದು (Murder case) ಹಾಕಿದ್ದಾನೆ. ಹತ್ಯೆಗೆ ಅಕ್ರಮ ಸಂಬಂಧವೇ (immoral relationship) ಕಾರಣ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಲಕ್ಷ್ಮಮ್ಮ (40) ಮೃತ ದುರ್ದೈವಿ. ಮಹದೇವಯ್ಯ (45) ಕೊಲೆಗೈದ ಪತಿಯಾಗಿದ್ದಾನೆ. ಈ ದಂಪತಿಗೆ ಆರು ಜನ ಮಕ್ಕಳಿದ್ದು, ಮಹದೇವಯ್ಯ ಆನೇಕಲ್ನ ಸ್ಟ್ರೈಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಪತ್ನಿ ಲಕ್ಷ್ಮಮ್ಮ ಗಾರೇ ಕೆಲಸ ಮಾಡಿಕೊಂಡಿದ್ದರು.
ಲಕ್ಷ್ಮಮ್ಮ ಕೆಲಸ ಸ್ಥಳದಲ್ಲಿ ಗಾರೇ ಕೆಲಸ ಮಾಡುವ ವ್ಯಕ್ತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಹಲವು ಬಾರಿ ಲಕ್ಷ್ಮಮ್ಮ ಹಾಗೂ ಮಹದೇವಯ್ಯ ನಡುವೆ ಗಲಾಟೆಯೂ ನಡೆದಿತ್ತು. ಪತ್ನಿಯ ವಿಚಾರ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನಕ್ಕೆ ತಿಳಿದಿತ್ತು.
ಇತ್ತ ಜನರು ಅಕ್ರಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಮಹದೇವಯ್ಯ ಮನೆಯಲ್ಲಿ ಮಲಗಿದ್ದ ಪತ್ನಿ ಲಕ್ಷ್ಮಮ್ಮ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾರೆ. ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಲಕ್ಷ್ಮಮ್ಮ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Online gambling : ಆನಂದದಿಂದ ಸಾಯುವುದು ಹೇಗೆ? ಗೂಗಲ್ ಸರ್ಚ್ ಮಾಡಿದ್ದ ದಂಡು ಮಂಡಳಿ ಸಿಇಒ ಆನಂದ!
ಹೆತ್ತ ತಾಯಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದೇಬಿಟ್ಟ ದುರುಳ!
ಚಿತ್ರದುರ್ಗ: ಕುಡಿಯಲು ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪಾಪಿ ಮಗನೊಬ್ಬ ತಾಯಿಗೆ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರೊಪ್ಪ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಂಜಿನಮ್ಮ (58) ಹತ್ಯೆಯಾದವರು. ಶಿವಾರೆಡ್ಡಿ (35) ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ.
ಶಿವಾರೆಡ್ಡಿ ಕುಡಿತದ ಚಟಕ್ಕೆ ಬಿದ್ದಿದ್ದ. ಹಗಲು ರಾತ್ರಿಯನ್ನದೇ ಕುಡಿಯುವುದೇ ವೃತ್ತಿಯನ್ನಾಗಿಸಿಕೊಂಡಿದ್ದ. ಕಂಠಪೂರ್ತಿ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ತಾಯಿ ಅಂಜಿನಮ್ಮ ಬೇಸತ್ತು ಹೋಗಿದ್ದರು. ಈ ನಡುವೆ ಶಿವಾರೆಡ್ಡಿ ಕುಡಿತಕ್ಕೆ ಹಣ ಕೊಡುವುದನ್ನು ಅಂಜಿನಮ್ಮ ನಿಲ್ಲಿಸಿದ್ದರು.
ಇದರಿಂದ ಸಿಟ್ಟಿಗೆದ್ದ ಶಿವಾರೆಡ್ಡಿ ಕುಡಿಯಲು ಹಣ ಕೊಡದಕ್ಕೆ ಹಾಗೂ ಸರಿಯಾದ ಸಮಯಕ್ಕೆ ಊಟ ನೀಡುತ್ತಿಲ್ಲ ಎಂದು ಕ್ಯಾತೆ ತೆಗೆದಿದ್ದ. ಮನೆ ಮುಂದಿನ ಕಟ್ಟೆ ಬಳಿ ಕುಳಿತುಕೊಂಡ ತಾಯಿಯ ಜತೆಗೆ ಗಲಾಟೆಗಿಳಿದ ಶಿವಾರೆಡ್ಡಿ, ನನ್ ಹೆಂಡ್ತಿ ಬಿಟ್ಟು ಹೋದ್ಮೇಲೆ, ನನಗೆ ಸರಿಯಾಗಿ ಊಟ ಹಾಕ್ತಿಲ್ಲ. ನೀನು ಇದ್ದು ಏನು ಪ್ರಯೋಜನ, ನಿನ್ನನ್ನು ಸಾಯಿಸಿದ್ರೆ ನನಗೆ ನೆಮ್ಮದಿ ಎಂದು ಸಿಟ್ಟಿಗೆದ್ದು ಈ ಮೊದಲೇ ತಂದಿದ್ದ ಚಾಕುವಿನಿಂದ ತಾಯಿಗೆ ಚುಚ್ಚಿ ಕೊಂದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಂಜಿನಮ್ಮಳನ್ನು ಕಂಡು ಸ್ಥಳೀಯರು ಕೂಡಲೇ ರಾಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಅಂಜಿನಮ್ಮ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸ್ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಂಪುರ ಪೊಲೀಸರು ಆರೋಪಿ ಶಿವಾರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ತವರು ಮನೆ ಸೇರಿದ ಪತ್ನಿ
ಶಿವಾರೆಡ್ಡಿ ಸುಮಾರು 10 ವರ್ಷಗಳಿಂದ ಕುಡಿತದ ಚಟಕ್ಕೆ ಬಿದ್ದಿದ್ದ. ಈತನ ಚಟಕ್ಕೆ ಬೇಸತ್ತ ಪತ್ನಿ ಮೌನಿಕ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.